ಮನ್ ಕಿ ಬಾತ್ನಲ್ಲಿ ಬಾಗಲಕೋಟೆ ವ್ಯಕ್ತಿಯನ್ನ ನೆನೆದ ಮೋದಿ: ಅಷ್ಟಕ್ಕೂ ಶ್ರೀಶೈಲ್ ಮಾಡಿದ ಸಾಧನೆ ಏನು?
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಶ್ರೀಶೈಲ್ ತೇಲಿ ಅವರು ಬಯಲು ಸೀಮೆಯಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೀಶೈಲ್ ಅವರ ಸಾಧನೆಯನ್ನು ಪ್ರಶಂಸಿಸಿದ್ದಾರೆ. 35 ಡಿಗ್ರಿಗಿಂತ ಹೆಚ್ಚು ತಾಪಮಾನವಿರುವ ಪ್ರದೇಶದಲ್ಲಿ ಸೇಬು ಬೆಳೆದಿರುವ ಶ್ರೀಶೈಲ್, ಇತರೆ ರೈತರಿಗೂ ಮಾದರಿಯಾಗಿದ್ದಾರೆ.

ಬಾಗಲಕೋಟೆ, ಏಪ್ರಿಲ್ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು 121ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಬಯಲು ಸೀಮೆಯಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ್ ತೇಲಿ (Srishail Teli) ಅವರನ್ನು ಗುಣಗಾನ ಮಾಡಿದ್ದಾರೆ. ಶ್ರೀಶೈಲ್ ತೇಲಿ ಅವರು ತಮ್ಮ ಏಳು ಎಕರೆಯಲ್ಲಿ ಬೆಳೆದ ಸೇಬು ಬೆಳೆ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೈತ ಶ್ರೀಶೈಲ್ ತೇಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದವರು. ಬಯಲು ಸೀಮೆಯಲ್ಲಿ ಸೇಬು ಬೆಳೆದು ಸಾಧನೆ ಮಾಡಿದ್ದಾರೆ. ಸೇಬು ಹೆಚ್ಚಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುತ್ತಾರೆ. ಆದರೆ ಶ್ರೀಶೈಲ್ ತೇಲಿ ಮಾತ್ರ ಸೇಬು ಬೆಳೆಯದ ಪ್ರದೇಶದಲ್ಲಿ ಸೇಬು ಬೆಳೆದು ತೋರಿಸಿದ್ದಾರೆ. 35 ಡಿಗ್ರಿ ತಾಪಮಾನಕ್ಕಿಂತಲೂ ಹೆಚ್ಚಿರುವ ಪ್ರದೇಶದಲ್ಲಿ ಅವರು ಸೇಬು ಬೆಳೆದಿದ್ದನ್ನು ನೋಡಿದರೆ ಎಂತವರಿಗೂ ಅಚ್ಚರಿ ಉಂಟಾಗುತ್ತದೆ.
ಇದನ್ನೂ ಓದಿ: ಜೋಳ ಬೆಳೆಯುವ ನೆಲದಲ್ಲಿ ಸೇಬು ಬೆಳೆದ ರೈತ: ನಕ್ಕವರ ಮುಂದೆ ಲಕ್ಷ ಲಕ್ಷ ಹಣ ಎಣಿಸಿದ
ಶ್ರೀಶೈಲ್ ತೇಲಿ ಅವರಿಗೆ ಮೊದಲಿಂದಲೂ ಕೃಷಿ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ ಸೇಬು ಬೆಳೆಯ ಬಗ್ಗೆ ಮಾಹಿತಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡರು. ಸೇಬು ನಾಟಿ ಮಾಡಿದ ಕೆಲವೇ ವರ್ಷಗಳಲ್ಲಿ ಭರ್ಜರಿ ಇಳುವರಿ ಪಡೆಯುವ ಮೂಲಕ ಇತರೆ ರೈತರ ಹುಬ್ಬೇರುವಂತೆ ಮಾಡಿದರು. ಜೊತೆಗೆ ಖರ್ಚು ವೆಚ್ಚ ತೆಗೆದು ಎಕರೆಗೆ ಮೂರು ಲಕ್ಷ ರೂ ಆದಾಯ ಗಳಿಸುತ್ತಿದ್ದಾರೆ.
ಪ್ರಧಾನಿ ಮೋದಿ ಮೆಚ್ಚುಗೆ ಮಾತಿನಿಂದ ಶ್ರೀಶೈಲ್ ತೇಲಿಗೆ ಖುಷಿಯೋ ಖುಷಿ: ಹೇಳಿದ್ದಿಷ್ಟು
ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಮಾತು ಹಿನ್ನಲೆ ಸೇಬು ಬೆಳೆಗಾರ ಶ್ರೀಶೈಲ್ ತೇಲಿ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿ ಅವರು, ನಾನು ಸೇಬು ನೆಟ್ಟು ಎರಡು ವರ್ಷ ಆಯ್ತು. ಸೇಬು ಬೆಳೆದು ಯಶಸ್ವಿಯಾಗಿದ್ದಕ್ಕೆ ಇಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಮಾತಾಡಿದ್ದು ನೋಡಿ ಬಹಳ ಖುಷಿಯಾಗಿದೆ. ಎಷ್ಟು ಖುಷಿಯಾಗಿದೆ ಅಂದರೆ ಅದನ್ನು ವರ್ಣಿಸುವುದಕ್ಕೆ ಪದಗಳಿಲ್ಲ. ಅಷ್ಟು ಖುಷಿಯಾಗಿದೆ ಎಂದು ಹೇಳಿದ್ದಾರೆ.
ಇದು ನಮಗೆ ಹಾಗೂ ಇತರೆ ರೈತರಿಗೆ ಪ್ರೇರಣೆಯಾಗಿದೆ. ಎರಡು ವರ್ಷ ಸೇಬು ಬೆಳೆಯಲು ಬಹಳ ಶ್ರಮ ಪಟ್ಟಿದ್ದೆ. ಈಗ ಮೋದಿ ಅವರು ಮಾತಾಡಿದ್ದನ್ನು ನೋಡಿ ಎಲ್ಲಾ ಭಾರ ಇಳಿದ ಹಾಗಾಯ್ತು. ಎಲ್ಲಿ ದೆಹಲಿ, ಎಲ್ಲಿ ಕುಳಲಿಗೆ ಬಂದು ಟಚ್ ಆಗಿದೆ. ಇದು ದೇವರ ಆಶೀರ್ವಾದ, ಕುಳಲಿಗೆ ದೊಡ್ಡ ಹೆಮ್ಮೆಯ ಸಂಗತಿ ಎಂದಿದ್ದಾರೆ.
ಇದನ್ನೂ ಓದಿ: ಇದೇನು ನದಿಯೋ ಇಲ್ಲಾ ಮೈದಾವೋ? ಖಾಲಿಯಾದ ಮಲಪ್ರಭೆ
ಪ್ರಧಾನಿ ಮೋದಿ ಅವರು ತನ್ನ ಬಗ್ಗೆ ಮಾತಾಡಿದ್ದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಟಿವಿ9 ಕನ್ನಡ ಸುದ್ದಿವಾಹಿನಿ ನಾನು ಬೆಳೆದ ಸೇಬು ಬೆಳೆ ಬಗ್ಗೆ ವರದಿ ಮಾಡಿ ಪ್ರಚಾರ ಮಾಡಿತ್ತು. ಆ ಮೂಲಕ ಅವರಿಗೂ ಧನ್ಯವಾದ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








