ಬಾಗಲಕೋಟೆ: ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ದೇಶಕ್ಕೆ 2ನೇ ಟಾಪರ್ ಆದ ತೇರದಾಳದ ಯುವ ವೈದ್ಯ
ಸಾಧಿಸುವ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ಮಾತಿಗೆ ವೈದ್ಯ ದಂಪತಿ ಮಗ ಸಾಕ್ಷಿಯಾಗಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಎರಡನೇ ಟಾಪರ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಡಾ. ವಿಶಾಲ್ ಇದೀಗ ಇಡೀ ದೇಶ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.

ಬಾಗಲಕೋಟೆ, ಏಪ್ರಿಲ್ 28: ಭಾರತ ಸರ್ಕಾರದ ನೀಟ್ ಸೂಪರ್ ಸ್ಪೆಷಾಲಿಟಿ (NEET Super Specialty) ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ತೇರದಾಳ (Terdal) ನಗರದ ಡಾ. ವಿಶಾಲ ಹುಬ್ಬಳ್ಳಿ ಎಂಬುವವರು ಇಡೀ ದೇಶಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ವಿಶಾಲ್ ತಂದೆ ಶ್ರೀಶೈಲ್ ಹುಬ್ಬಳ್ಳಿ ಮತ್ತು ಗೀತಾ ಹುಬ್ಬಳ್ಳಿ ಇಬ್ಬರು ಕೂಡ ಬಿಎಎಂಎಸ್ ವೈದ್ಯರಾಗಿದ್ದು, ಇದೀಗ ಮಗನ ಸಾಧನೆ ಕಂಡು ಫುಲ್ ಖುಷ್ ಆಗಿದ್ದಾರೆ.
ಎಂಬಿಬಿಎಸ್, ಎಂಎಸ್ ನಂತರ ವೈದ್ಯಕೀಯ ವಿಶೇಷ ಕೋರ್ಸ್ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಡಾ. ವಿಶಾಲ್ ಹುಬ್ಬಳ್ಳಿ ಮೈಸೂರಲ್ಲಿ ಎಂಸಿಹೆಚ್ ವಿಭಾಗಕ್ಕೆ ನೀಟ್ ಪರೀಕ್ಷೆ ಬರೆದಿದ್ದರು. 2025 ಮಾರ್ಚ್ 30ರಂದು ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ: ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್
ಎಂಸಿಹೆಚ್ ಮೂಲಕ ನ್ಯೂರೋ ಸರ್ಜರಿ, ಗ್ಯಾಸ್ಟೊ ಸರ್ಜರಿ ಸೇರಿದಂತೆ ವಿವಿಧ ಸ್ಪೇಷಲ್ ತಜ್ಞರಾಗಬಹುದು. ಇನ್ನು ಡಾ ವಿಶಲ್ ಎಂಬಿಬಿಎಸ್, ಎಂಎಸ್ ಈಗಾಗಲೇ ಮುಗಿಸಿದ್ದು, ಎಂಸಿಹೆಚ್ ಮೂಲಕ ಗ್ಯಾಸ್ಟೊ ಸರ್ಜರಿ ಮಾಡಲಿದ್ದಾರೆ. ಡಾ. ವಿಶಾಲ್ ಮಾಡಿರುವ ಸಾಧನೆಗೆ ಇದೀಗ ಅಭಿನಂದನೆಗಳ ಮಹಾಪುರವೇ ಹರಿದು ಬರುತ್ತಿದೆ. ತೇರದಾಳ ಶಾಸಕ ಸಿದ್ದು ಸವದಿ ಸ್ವತಃ ಅವರ ಮನೆಗೆ ಹೋಗಿ ಸನ್ಮಾನಿಸಿದ್ದಾರೆ. ಜೊತೆಗೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.
ನೀಟ್ಗೆ ಹೇಗೆ ತಯಾರಿ ಮಾಡಬೇಕೆಂದು ತಿಳಿಸಿದ ಡಾ. ವಿಶಾಲ್
ಪಿಯುಸಿ ಪಠ್ಯವನ್ನು ಗಂಭೀರವಾಗಿ ಓದಬೇಕು. ಅದರಲ್ಲಿನ ಬಹುತೇಕ ಪ್ರಶ್ನೆಗಳನ್ನು ನೀಟ್ನಲ್ಲಿ ಕೇಳಲಾಗುತ್ತದೆ. ಎಂಸಿಕ್ಯೂ (ಬಹು ಆಯ್ಕೆಯ ಪ್ರಶ್ನೆ) ಬಗ್ಗೆ ಹೆಚ್ಚು ಗಮನಹರಿಸಬೇಕು. ಜೊತೆಗೆ ನೀಟ್ಗಾಗಿ ಅಭ್ಯಾಸ ಮಾಡುತ್ತಿರುವ ಸ್ನೇಹಿತರ ಜೊತೆ ಚರ್ಚೆ ಮಾಡ್ತಿರಬೇಕು. ಇದೆಲ್ಲಾ ನಿರಂತರವಾಗಿ ಇದ್ದರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಬಹುದು. ಕೋಚಿಂಗ್ ಹೋಗಬೇಕು ಅಂತೇನೂ ಇಲ್ಲ ಎಂದಿದ್ದಾರೆ.
ಸ್ಥಳೀಯವಾಗಿ ವೈದ್ಯಕೀಯ ಸೇವೆ ಸಲ್ಲಿಸುವ ಬಯಕೆ
ತೇರದಾಳದಲ್ಲೇ ಸೇವೆ ಸಲ್ಲಿಸಲು ಇಚ್ಚೆ ವ್ಯಕ್ತಪಡಿಸಿದ ಡಾ ವಿಶಾಲ್, ಈಗಾಗಲೇ ನಮ್ಮ ತಂದೆ-ತಾಯಿ ತೇರದಾಳ ಪಟ್ಟಣದಲ್ಲಿ ಬಿಎಎಂಎಸ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಎಂಸಿಹೆಚ್ ಮೂಲಕ ಗ್ಯಾಸ್ಟೊ ಸರ್ಜರಿ ಮುಗಿಸಿ ಇಲ್ಲಿಯೇ ಜನರಿಗೆ ವೈದ್ಯಕೀಯ ಸೇವೆ ನೀಡಬೇಕೆಂದಿದ್ದೇನೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಇದನ್ನೂ ಓದಿ: Success Story: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್
ಒಟ್ಟಿನಲ್ಲಿ ಡಾ. ವಿಶಾಲ್ ನೀಟ್ನಲ್ಲಿ ಇಡೀ ದೇಶಕ್ಕೆ ಟಾಪರ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸ್ಥಳೀಯವಾಗಿ ವೈದ್ಯಕೀಯ ಸೇವೆ ಸಲ್ಲಿಸಬೇಕೆಂದಿರುವ ಅವರ ಅಭಿಪ್ರಾಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:36 pm, Mon, 28 April 25








