ಯುಗಾದಿ ಹಬ್ಬದಂದು ಕರ್ನಾಟಕದಲ್ಲಿ ಜಲ ಗಂಡಾಂತರ: ಐವರು ನೀರುಪಾಲು
ಯುಗಾದಿ ಹಬ್ಬದಂದು ಕರ್ನಾಟಕದ ವಿವಿಧೆಡೆ ಐವರು ನೀರುಪಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಮೂವರು ಬಾಲಕರು ನೀರುಪಾಲಾದ ಘಟನೆ ದೊಡ್ಡ ದುರಂತವಾಗಿದೆ. ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆ. ನದಿಗಳ ಬಳಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಈ ದುರಂತಗಳು ಸಂಭವಿಸಿವೆ ಎಂದು ಆರೋಪಿಸಲಾಗಿದೆ.

ಬಾಗಲಕೋಟೆ, ಮಾರ್ಚ್ 30: ಹೊಸ ವರ್ಷ ಯುಗಾದಿ (Ugadi) ಹಬ್ಬದಂದು ರಾಜ್ಯದಲ್ಲಿ ಜಲ ಗಂಡಾಂತರ ಆವರಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐವರು ನೀರುಪಾಲಾಗಿದ್ದಾರೆ. ಬಾಗಲಕೋಟೆ (Bagalkot) ತಾಲೂಕಿನ ಸೀತಿಮನಿ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲಾಗಿದ್ದಾರೆ. ಸೋಮಶೇಖರ್ ದೇವರಮನಿ (15), ಪರನಗೌಡ ಬೀಳಗಿ (17) ಮತ್ತು ಮಲ್ಲಪ್ಪ ಬಗಲಿ (16) ನೀರುಪಾಲಾದವರು. ಮೂವರ ಪೈಕಿ ಬಾಲಕ ಸೋಮಶೇಖರ್ ಮೃತದೇಹ ಪತ್ತೆಯಾಗಿದೆ.
ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಯುತ್ತಿದೆ. ಬಾಲಕರು ಬಾಗಲಕೋಟೆ ತಾಲೂಕಿನ ಇಲ್ಯಾಳ ನಿವಾಸಿಗಳು ಎಂದು ತಿಳಿದುಬಂದಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿಯ ತುಂಗಾ ನದಿಯಲ್ಲಿ ಮುಳುಗಿ ಓರ್ವ ಯುವಕ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ತಾಲೂಕಿನ ಜಿಗಳಗೊಡು ಗ್ರಾಮದ ನಿವಾಸಿ ಕಿರಣ್ (20) ಮೃತ ದುರ್ದೈವಿ. ಕಿರಣ್ ಮೂವರು ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದನು. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಕಿರಣ್ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಗಾದಿ ಹಬ್ಬದಂದು ಪುಣ್ಯಸ್ನಾನಕ್ಕೆಂದು ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ತೆರಳಿದ್ದ ಬಾಲಕ ಮೃತಪಟ್ಟಿದ್ದಾನೆ. ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿ ಶರಣ್ (13) ಮೃತ ಬಾಲಕ. ಬಾಲಕ ಶರಣ್ ಸ್ನೇಹಿತರ ಜೊತೆ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದನು. ಈ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಶರಣ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಯಾದಗಿರಿ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ
ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಭಕ್ತರು ಪುಣ್ಯಸ್ನಾನಕ್ಕೆ ಆಗಮಿಸಿದ್ದಾರೆ. ನದಿ ಬಳಿ ಸೂಚನಾ ಫಲಕ ಅಳವಡಿಸದಿದ್ದಕ್ಕೆ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ವಾರ ಅಜ್ಜ, ಮೊಮ್ಮಕ್ಕಳನ್ನು ಬಲಿ ಪಡೆದಿದ್ದ ಜಾಗದಲ್ಲೇ ಈ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕು ಆಡಳಿತ ಮಂಡಳಿ ಬೇಜವಾಬ್ದಾರಿತನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.