ಬೆಂಗಳೂರು-ಮೈಸೂರು ಹೆದ್ದಾರಿಗೆ ಬರಲಿದೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ: ಸ್ವಯಂಚಾಲಿತ ಶುಲ್ಕ ಪಾವತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2024 | 8:44 PM

ಜಿಪಿಎಸ್(GPS) ಆಧಾರಿತ ಟೋಲ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬೆಂಗಳೂರು-ಮೈಸೂರು ಹೆದ್ದಾರಿ (Bengaluru Mysuru Highway) ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಜೊತೆಗೆ ಬೆಂಗಳೂರು ಉಪನಗರ ರೈಲು ಯೋಜನೆಯ ಬಗ್ಗೆಯೂ ವಿವರ ನೀಡಿದ್ದು, ಈ ನಾಲ್ಕು ಮಾರ್ಗ ಒಳಗೊಂಡಿದೆ.

ಬೆಂಗಳೂರು-ಮೈಸೂರು ಹೆದ್ದಾರಿಗೆ ಬರಲಿದೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ: ಸ್ವಯಂಚಾಲಿತ ಶುಲ್ಕ ಪಾವತಿ
ಬೆಂಗಳೂರು-ಮೈಸೂರು ಹೆದ್ದಾರಿ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ
Follow us on

ಬೆಂಗಳೂರು, ಫೆ.11: ಜಿಪಿಎಸ್(GPS) ಆಧಾರಿತ ಟೋಲ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬೆಂಗಳೂರು-ಮೈಸೂರು ಹೆದ್ದಾರಿ(Bengaluru Mysuru Highway)ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಅಡೆತಡೆ ಇಲ್ಲದ ಫ್ರೀ-ಫ್ಲೋ-ಟೋಲಿಂಗ್​ಗೆ ಅವಕಾಶ ನೀಡುವ ಜಿಪಿಎಸ್ ಆಧಾರಿತ ವ್ಯವಸ್ಥೆಯಂತಹ ಹೊಸ ತಂತ್ರಜ್ಞಾನಗಳ ಕುರಿತು ಸಲಹೆ ಪಡೆಯಲು ರಸ್ತೆ ಸಾರಿಗೆ ಸಚಿವಾಲಯವು ಕನ್ಸಲ್ಟೆಂಟ್ ನೇಮಕ ಮಾಡಿದೆ ಎಂದು ವಿವರಿಸಿದ್ದಾರೆ.

ಸ್ವಯಂಚಾಲಿತ ಶುಲ್ಕ ಪಾವತಿ

ಜಿಎನ್ಎಸ್ಎಸ್ ಆಧಾರಿತ ಟೋಲಿಂಗ್ ಬಗ್ಗೆ ತಿಳಿಸಿದ ಸಚಿವರು, ‘ಈ ವ್ಯವಸ್ಥೆಯು ಹೆದ್ದಾರಿಯಲ್ಲಿ ವಾಹನ ಇರುವ ಜಾಗವನ್ನು ತಿಳಿಸುತ್ತದೆ ಹಾಗೂ ಪ್ರಯಾಣಿಸಿದ ದೂರವನ್ನು ಆಧರಿಸಿ ಶುಲ್ಕ ನಿರ್ಧರಿಸುತ್ತದೆ. ಲೋಕಸಭಾ ಚುನಾವಣೆಗೆ ಮೊದಲು ಬೆಂಗಳೂರು-ಮೈಸೂರು ಎನ್ಎಚ್-275 ಸೇರಿದಂತೆ ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲು ಕೇಂದ್ರದಿಂದ 688 ಕೋಟಿ ರೂ. ಬಿಡುಗಡೆ

ಸಂಸದ ಲಹರ್ ಸಿಂಗ್ ಅವರ ಉಪನಗರ ರೈಲಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘ಬೆಂಗಳೂರು ಹಾಗೂ ಉಪನಗರಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು 742 ಕಿ.ಮೀ. ಉದ್ದದ ಮಾರ್ಗಕ್ಕಾಗಿ ಫೈನಲ್ ಲೊಕೇಶನ್ ಸರ್ವೆ (FLS) ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅವರು ಬೆಂಗಳೂರು ಉಪನಗರ ರೈಲು ಯೋಜನೆಯ ಬಗ್ಗೆಯೂ ವಿವರ ನೀಡಿದ್ದು, ಇದು ನಾಲ್ಕು ಮಾರ್ಗ ಒಳಗೊಂಡಿದೆ.

1. ಕಾರಿಡಾರ್-1: ಕೆಎಸ್ಆರ್ ಬೆಂಗಳೂರು – ದೇವನಹಳ್ಳಿ(41.4 Km)
2. ಕಾರಿಡಾರ್-2: ಬೈಯ್ಯಪ್ಪನಹಳ್ಳಿ– ಚಿಕ್ಕಬಾಣಾವರ (25.01 Km)
3. ಕಾರಿಡಾರ್-3: ಕೆಂಗೇರಿ – ವೈಟ್ ಫೀಲ್ಡ್ (35.52 Km)
4. ಕಾರಿಡಾರ್-4: ಹೀಲಲಿಗೆ – ರಾಜಾನುಕುಂಟೆ (46.25 Km)

ಸಚಿವರು ಈ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿದ್ದು, ಕಾರಿಡಾರ್ 2 ಹಾಗೂ 4ರ ಭೂ ಸ್ವಾಧೀನ ಪೂರ್ಣಗೊಂಡಿದೆ. ಕಾರಿಡಾರ್-2 ರಲ್ಲಿ ಕಾಮಗಾರಿ ನಡೆಯುತ್ತಿದೆ. ಕಾರಿಡಾರ್-4 ಕ್ಕೆ ಇತ್ತೀಚಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾರಿಡಾರ್ 1 ಹಾಗೂ 3 ರಲ್ಲಿ ಸರ್ವೆ ಕಾರ್ಯ ಹಾಗೂ ಭೌಗೋಳಿಕ ಸಮೀಕ್ಷೆ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 742 ಕಿ.ಮೀ. ಉದ್ದದ ಮಾರ್ಗಕ್ಕೆ ಎಫ್ಎಲ್ಎಸ್ ಮಂಜೂರಾಗಿದೆ. ಇದು ಬೆಂಗಳೂರು ಹಾಗೂ ಸುತ್ತಲಿನ ನಗರಗಳನ್ನು ಸಂಪರ್ಕಿಸಲಿದೆ. ಬೆಂಗಳೂರು ನಗರದಲ್ಲಿ ಡಬಲ್ ಲೈನ್ ನ ವೃತ್ತಾಕಾರದ ಮಾರ್ಗ, ಬೆಂಗಳೂರು-ತುಮಕೂರು ಕ್ವಾಡ್ರಪ್ಲಿಂಗ್ (ನಾಲ್ಕು ಮಾರ್ಗ), ಚಿಕ್ಕಬಾಣಾವಾರ-ಹಾಸನ ಡಬಲಿಂಗ್, ಬೆಂಗಳೂರು-ಮೈಸೂರು ಕ್ವಾಡ್ರಪ್ಲಿಂಗ್ ಹಾಗೂ ಬಂಗಾರಪೇಟೆ-ಜೋಲಾರಪಟ್ಟಿ ಕ್ವಾಡ್ರಪ್ಲಿಂಗ್ ಕಾಮಗಾರಿಯನ್ನು ಇದು ಒಳಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ