ಆನೇಕಲ್ ಯುವಕನ ಕಿಡ್ಯ್ನಾಪ್, ರಾಬರಿ ಕೇಸ್ಗೆ ಟ್ವಿಸ್ಟ್: ಗೇ ಆ್ಯಪ್ ಅಸಲಿ ಕಥೆ ಬಿಚ್ಚಿಟ್ಟ ಆರೋಪಿಗಳು
ಆನೇಕಲ್‌ನಲ್ಲಿ ನಡೆದ ಅಪಹರಣ ಮತ್ತು ದರೋಡೆ ಪ್ರಕರಣಕ್ಕೆ ಗೇ ಡೇಟಿಂಗ್ ಆ್ಯಪ್ ಸಂಪರ್ಕ ಕಂಡುಬಂದಿದೆ. ಆರೋಪಿಗಳು ಗ್ರೈಂಡರ್ ಆ್ಯಪ್ ಬಳಸಿ ಯುವಕನನ್ನು ಕರೆಸಿ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿದ್ದು ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಘಟನೆ ಆನೇಕಲ್ ಜನರನ್ನು ಬೆಚ್ಚಿ ಬೀಳಿಸಿದೆ.

ಆನೇಕಲ್, ಜನವರಿ 30: ಆನೇಕಲ್ ಕಿಡ್ಯ್ನಾಪ್ (Kidnapping) ಆ್ಯಂಡ್ ರಾಬರಿ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಗೇ ಆ್ಯಪ್ ಮೂಲಕ ಯುವಕನನ್ನು ಕರೆಸಿಕೊಂಡು ಆತನಿಗೆ ಚಿತ್ರಹಿಂಸೆ ನೀಡಲಾಗಿದೆ. ಆ ಮೂಲಕ ರಾಜ್ಯ ರಾಜಧಾನಿಯಲ್ಲಿ ಸಕ್ರಿಯವಾಗಿರುವ ಗೇ ಡೇಟಿಂಗ್ ಆ್ಯಪ್ನ್ನು ಆರೋಪಿಗಳು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ.
ಇದೇ ತಿಂಗಳು ದಿನಾಂಕ 21 ರಂದು ಸಂಜೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಸಮೀಪ ಮುರುಳಿ ಎಂಬ ಯುವಕನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಪಟ್ಟಣದ ಸಿದ್ದಾರ್ಥ, ದರ್ಶನ್ ಮತ್ತು ಅನಿಲ್ ಬಂಧಿತರು. ಮತ್ತೊಬ್ಬ ಆರೋಪಿ ಶಶಾಂಕ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ರಾಬರಿ ಮಾಡುವ ಸಲುವಾಗಿ ಮುತ್ತುಗಟ್ಟಿ ವಾಸಿ ಮುರುಳಿಯನ್ನು ಹೊಸೂರು ರಸ್ತೆ ಕಾವೇರಿ ಕಾಲೇಜು ಬಳಿ ಕಿಡ್ಯ್ನಾಪ್ ಮಾಡಿ ಹಣಕ್ಕಾಗಿ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಆರೋಪಿಗಳು ವಿಚಾರಣೆ ವೇಳೆ ಪ್ರಕರಣಕ್ಕೆ ಸ್ಪೋಟಕ ವಿಚಾರ ಬಾಯಿಬಿಟ್ಟಿದ್ದಾರೆ.
ಇನ್ನೂ ಕಿಡ್ಯ್ನಾಪ್ ಆ್ಯಂಡ್ ರಾಬರಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಬುದ್ಧಿ ಕಲಿಸಬೇಕು ಎಂದು ತನಿಖೆಗಿಳಿದಿದ್ದ ಆನೇಕಲ್ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳು ಹೇಳಿದ ಅಸಲಿ ಕಹಾನಿಗೆ ಬೆಚ್ಚಿಬಿದ್ದಿದ್ದರು. ಗ್ರೈಂಡರ್ ಎಂಬ ಗೇ ಡೇಟಿಂಗ್ ಆ್ಯಪ್ ಮೂಲಕ ಮುರುಳಿ ಪರಿಚಯವಾಗಿದ್ದು, ಅಸಹಜ ಲೈಂಗಿಕ ಕ್ರಿಯೆಗಾಗಿ ಬುಕ್ ಮಾಡಿ ತಮ್ಮ ಲೊಕೇಷನ್ಗೆ ಕರೆಸಿಕೊಂಡಿದ್ದಾರೆ. ಎಲ್ಲಾ ಮುಗಿದ ಬಳಿಕ ಹಣದ ವಿಚಾರಕ್ಕೆ ಗಲಾಟೆ ನಡೆದು, ಬೈಕ್, ಮೊಬೈಲ್ ಮತ್ತು ಹಣ ಕಸಿದು ಹಲ್ಲೆ ಮಾಡಿ ಪರಾರಿಯಾಗಿದ್ದಾಗಿ ಆರೋಪಿಗಳು ಪೊಲೀಸರ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮರ್ಯಾದೆ ಹತ್ಯೆ ಕೇಸ್: 6 ವರ್ಷದ ಬಳಿಕ 4 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಒಟ್ಟಿನಲ್ಲಿ ಆನೇಕಲ್ ಜನರನ್ನು ಬೆಚ್ಚಿ ಬೀಳಿಸಿದ್ದ ಯುವಕನ ಕಿಡ್ಯ್ನಾಪ್ ಆ್ಯಂಡ್ ರಾಬರಿ ಪ್ರಕರಣದಿಂದಾಗಿ ಸಮಾಜ ಮುಜುಗರಪಡುವಂತಾಗಿದ್ದು, ಯುವ ಸಮೂಹ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಸಮಾಜದಲ್ಲಿ ಬೇಸರ ಮೂಡುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.