ಬೆಂಗಳೂರಿನಲ್ಲಿ ತನ್ನ ಹಾರಾಟ ಶುರು ಮಾಡಿದ ಗರುಡ ಗ್ಯಾಂಗ್: ಉದ್ಯಮಿಗಳೇ ಇವರ ಟಾರ್ಗೆಟ್
ಕಳ್ಳತನ, ದರೋಡೆ ಪ್ರಕರಣಗಳು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಡ್ಡಿ ಗ್ಯಾಂಗ್, ಇರಾನಿ ಗ್ಯಾಂಗ್ ರೀತಿ ಇದೀಗ ಬೆಂಗಳೂರಿಗೆ ಉಡುಪಿ ಮೂಲದ ಗರುಡ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಕಿಡ್ಯ್ನಾಪ್ ಹಣ ಎಗರಿಸುವುದೇ ಇವರ ಪ್ಲ್ಯಾನ್ ಆಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ನೆಲಮಂಗಲ, ಜನವರಿ 30: ತಮ್ಮ ವಿಶೇಷ ಡ್ರೆಸ್ ಕೋಡ್ನಲ್ಲಿ ಕಳ್ಳತನಕ್ಕಿಳಿಯುವ ಮೂಲಕ ಚಡ್ಡಿ ಗ್ಯಾಂಗ್ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿತ್ತು. ಇದೀಗ ಇದೇ ರೀತಿಯಾಗಿ ಬೆಂಗಳೂರಿಗೆ ನಟೋರಿಯಸ್ ಗರುಡ ಗ್ಯಾಂಗ್ (Garuda Gang) ಎಂಟ್ರಿ ಕೊಟ್ಟಿದೆ. ಈ ಗ್ಯಾಂಗ್ ಸದಸ್ಯರ ಮೇಲೆ ಬೇರೆ ಬೇರೆ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳಿವೆ ಎನ್ನಲಾಗುತ್ತಿದೆ. ಹಾಗಾಗಿ ಸಿಲಿಕಾನ್ ಸಿಟಿ ಜನರು ಸಿಕ್ಕಾಪಟ್ಟೆ ಹುಷಾರಾಗಿರಬೇಕಾಗಿದೆ. ಅದರಲ್ಲೂ ಉದ್ಯಮಿಗಳೇ ಈ ಗ್ಯಾಂಗ್ನ ಟಾರ್ಗೆಟ್.
ಹೌದು.. ಇಡೀ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿರುವ ಒಂದು ಪ್ರಕರಣ ನಡೆದು ಹೋಗಿದೆ. ಬೆಂಗಳೂರಿನಲ್ಲಿ ಉಡುಪಿ ಮೂಲದ ಗರುಡ ಗ್ಯಾಂಗ್ ಆಟ ಶುರು ಮಾಡಿದೆ. ನೆಲಮಂಗಲದ ಬಳಿ ಉದ್ಯಮಿ ಇಕ್ಬಾಲ್‌ನನ್ನು ಸಿನಿಮೀಯ ರೀತಿಯಲ್ಲಿ ಕಿಡ್ಯ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ.
ಇದನ್ನೂ ಓದಿ: ಸಿಂಧನೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ: ಓರ್ವ ಅರೆಸ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಟ್ರೆ ಗ್ರಾಮದ ನಿವಾಸಿ ಇಕ್ಬಾಲ್ ಪೆಟ್ರೋಲ್ ಬಂಕ್ ಹಾಗೂ ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿದ್ದ. ಕಳೆದ ಶುಕ್ರವಾರ ದೇವನಹಳ್ಳಿಯ ಖಾಸಗಿ ಹೋಟೆಲ್‌ಗೆ ಕೆಲಸದ ನಿಮಿತ್ತ ತೆರಳಿ ರಾತ್ರಿ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಕರೀಮ್ ಮನೆಯಲ್ಲಿ ಉಳಿದುಕೊಂಡಿದ್ದರು.
ಮಾರಕಾಸ್ತ್ರಗಳಿಂದ ಬೆದರಿಸಿ ಕಿಡ್ಯ್ನಾಪ್
ಎಲ್ಲ ಕೆಲಸ ಮುಗಿಸಿ ಶನಿವಾರ ಬೆಳಗ್ಗೆ ಕರೀಮ್‌ನಿಂದ ಒಂದುವರೆ ಲಕ್ಷ ರೂಪಾಯಿ ಪಡೆದುಕೊಂಡು, ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಸಿಮ್ ಬಿರಿಯಾನಿ ಹೋಟೆಲ್‌ನಲ್ಲಿ ಊಟ ಮುಗಿಸಿ ನೆಲಮಂಗಲದಿಂದ ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದರು. ಈ ಸಮಯದಲ್ಲಿ ಮಾರ್ಗ ಮಧ್ಯ ಹೆದ್ದಾರಿಯಲ್ಲಿ ಮೂರು ಕಾರ್ಗಳಲ್ಲಿ ಬಂದ ದುಷ್ಕರ್ಮಿಗಳು ಇಕ್ಬಾಲ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅವರನ್ನು ಅಪಹರಿಸಿದ್ದಾರೆ.
ಅಪಹರಿಸಿ ಅಜ್ಞಾತ ಸ್ಥಳಕ್ಕೆ ಎತ್ತೊಯ್ದು ಎರಡು ದಿನಗಳ ಕಾಲ ನೀಡಬಾರದ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ತನ್ನ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ 15 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡು, ಭಾನುವಾರ ಸಕಲೇಶಪುರದಲ್ಲಿದ್ದ ಇಕ್ಬಾಲ್ ಸಹೋದರನ ರೆಸಾರ್ಟ್‌ಗೆ ತೆರಳಿ, ಅಲ್ಲಿಯೂ ತನ್ನ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿ ಆತನಿಂದಲೂ 13 ಲಕ್ಷ ರೂ. ಹಣ ಪಡೆದುಕೊಂಡು, ಇಕ್ಬಾಲ್‌ನನ್ನು ರೆಸಾರ್ಟ್ ಬಳಿಯೇ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕೆಆರ್ ಪುರಂನಲ್ಲೂ ದರೋಡೆ ಗ್ಯಾಂಗ್ ಪ್ರತ್ಯಕ್ಷ: 15 ದಿನಗಳಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ
ಉಡುಪಿಯ ಗರುಡ ಗ್ಯಾಂಗ್ ಎಂದು ಹೇಳಿಕೊಂಡು ಪೊಲೀಸರಿಗೆ ದೂರು ಕೊಟ್ರೆ ನಿನ್ನ ಉದ್ಯಮವನ್ನು ನಾಶಮಾಡಿ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇನ್ನು ಇಕ್ಬಾಲ್ನ ಕಾರ್ ಡ್ರೈವರ್ ರಿಜ್ವಾನ್ ಈ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದು, ಕಿಡ್ಯ್ನಾಪ್ ಮಾಡಲು ಪ್ಲಾನ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.