‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ವರ್ಕ್ ಫ್ರಂ ಹೋಂ ಪ್ಯಾಕಿಂಗ್ ಕೆಲಸದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿರಣ್ ಮತ್ತು ಆರತಿ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾಳಿಕಾ ದೇವಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ಅಗರಬತ್ತಿ, ಡ್ರೈ ಫ್ರೂಟ್ಸ್ ಪ್ಯಾಕಿಂಗ್‌ಗಾಗಿ ಲಕ್ಷ ಲಕ್ಷ ಡೆಪಾಸಿಟ್ ಪಡೆದು ದೋಖಾ ಮಾಡಿದ್ದ ಈ ದಂಪತಿಯಿಂದ ಕಂಗಾಲಾಗಿದ್ದ ಸಾರ್ವಜನಿಕರು ದೂರು ನೀಡಿದ್ದು, ಪೊಲೀಸರು ಸದ್ಯ ತೀವ್ರ ತನಿಖೆ ನಡೆಸುತ್ತಿದ್ದಾರೆ.

ವರ್ಕ್ ಫ್ರಂ ಹೋಂ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!
'ವರ್ಕ್ ಫ್ರಂ ಹೋಂ' ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ದೇವನಹಳ್ಳಿ ಪೊಲೀಸರ ವಶ!
Edited By:

Updated on: Aug 07, 2026 | 10:53 AM

ಮುಖ್ಯಾಂಶಗಳು

  • ವರ್ಕ್ ಫ್ರಂ ಹೋಂ ಹೆಸರಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚನೆ.
  • ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ವಂಚಿಸಿದ್ದ ಕಿರಣ್-ಆರತಿ ದೇವನಹಳ್ಳಿ ಪೊಲೀಸರ ವಶಕ್ಕೆ.
  • ಅಗರಬತ್ತಿ, ಡ್ರೈ ಫ್ರೂಟ್ಸ್ ಪ್ಯಾಕಿಂಗ್ ನೆಪದಲ್ಲಿ ಲಕ್ಷ ಲಕ್ಷ ಡೆಪಾಸಿಟ್ ದೋಖಾ.

ದೇವನಹಳ್ಳಿ, ಆಗಸ್ಟ್ 07: ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ (Work From Home) ಕೆಲಸದ ಆಸೆ ತೋರಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಮತ್ತು ಆತನ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ಈ ದಂಪತಿ ‘ಕಾಳಿಕಾ ದೇವಿ ಎಂಟರ್ ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ತೆರೆದು ಸಾವಿರಾರು ಜನರಿಗೆ ಮೋಸ ಮಾಡಿದ್ದಾರೆ.

ರೀಲ್ಸ್ ಮೂಲಕ ಬಲೆ

ಆರೋಪಿ ಕಿರಣ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಮನೆಬಾಗಿಲಿಗೇ ಕೆಲಸ ನೀಡುವುದಾಗಿ ಜಾಹೀರಾತು ನೀಡುತ್ತಿದ್ದ. ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಮಾಡುವ ಸುಲಭದ ಕೆಲಸ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ. ಕಚ್ಚಾ ಪದಾರ್ಥಗಳ ಪ್ಯಾಕಿಂಗ್ ಕೆಲಸಕ್ಕಾಗಿ ಒಮ್ಮೆ 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ, ಪ್ರತಿ ತಿಂಗಳು 23 ಸಾವಿರ ರೂಪಾಯಿ ಸಂಬಳ ಕೊಡುವುದಾಗಿ ಆಮಿಷ ಒಡ್ಡಿದ್ದ.

ಲಕ್ಷ ಲಕ್ಷ ಹಣ ಪಡೆದು ವಂಚನೆ

ದಂಪತಿಯ ಮಾತುಗಳನ್ನು ಸತ್ಯವೆಂದು ನಂಬಿದ ಸಾರ್ವಜನಿಕರು, ಸಾಲ ಸೂಲ ಮಾಡಿ ಒಬ್ಬೊಬ್ಬರಿಂದ 2 ಲಕ್ಷದಿಂದ ಹಿಡಿದು ಬರೋಬ್ಬರಿ 20 ಲಕ್ಷ ರೂಪಾಯಿವರೆಗೂ ಹಣವನ್ನು ಡೆಪಾಸಿಟ್ ಮಾಡಿದ್ದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಹಾಗೂ ಕೋಲಾರ ಸೇರಿದಂತೆ ಹಲವು ಭಾಗಗಳ ನೂರಾರು ಜನರು ಈ ದಂಪತಿಯ ಮಾಯದ ಬಲೆಗೆ ಬಿದ್ದಿದ್ದಾರೆ. ಹಣ ಪಡೆದ ಬಳಿಕ ದಂಪತಿ ಕೆಲಸವನ್ನೂ ನೀಡದೆ, ಠೇವಣಿ ಹಣವನ್ನೂ ಮರುಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದರು.

ಕಳೆದ ಕೆಲವು ತಿಂಗಳಿಂದ ಕೆಲಸವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಕಂಗಾಲಾಗಿದ್ದ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಂದ ದೋಚಲಾದ ಕೋಟಿ ಕೋಟಿ ಹಣದ ಲೇವಾದೇವಿ ಕುರಿತು ಪೊಲೀಸರು ಸದ್ಯ ತೀವ್ರ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us