
ದೇವನಹಳ್ಳಿ, ನವೆಂಬರ್ 03: ಬೆಂಗಳೂರಿನಿಂದ ಕಣ್ಣೂರು ಬಾಗಲೂರು ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಪರ್ಯಾಯ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್ ಆಗಿದೆ. ಗುಂಡಿಗಳ ಮಧ್ಯೆ ರಸ್ತೆ ಇದೆಯೋ, ರಸ್ತೆಯಲ್ಲಿ ಗುಂಡಿ ಇದೆಯೋ ಎನ್ನುವಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ. ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದ್ದು, ವಾಹನ ಸವಾರರು ಪಕ್ಕದಲ್ಲಿರುವ ಆಸ್ಪತ್ರೆ ಪಾಲಾಗುತ್ತಿದ್ದಾರೆ. ಹೀಗಾಗಿ ರಸ್ತೆ ಗುಂಡಿಗಳಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನ ಬೂದಿಗೆರೆ ಕಣ್ಣೂರು ಸೇರಿದಂತೆ ಸಿಟಿಯಿಂದ ಹೆಬ್ಬಾಳ ಮಾರ್ಗ ಹೊರತು ಪಡಿಸಿ ಕೆಂಪೇಗೌಡ ಏರ್‌ಪೋರ್ಟ್‌ಗೆ ತೆರಳುವ ಮಾರ್ಗದ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದೆ. ಅಂದಹಾಗೆ ಬಾಗಲೂರು ಮೂಲಕ ಕೆಂಪೇಗೌಡ ಏರ್ಪೋರ್ಟ್ ಸೇರಿದಂತೆ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಹೀಗಾಗಿ ನಿತ್ಯ ಸಾವಿರಾರು ವಾಹನ ಸವಾರರು ಈ ರಸ್ತೆ ಮೂಲಕ ಸಂಚರಿಸುತ್ತಾರೆ. ಆದರೆ ಈ ರಸ್ತೆ ಮೃತ್ಯು ಕೂಪವಾಗಿ ಬದಲಾಗಿದೆ.
ಇದನ್ನೂ ಓದಿ: ಬೆಂಗಳೂರು ರಸ್ತೆಗಳಲ್ಲಿ AI ಕಣ್ಗಾವಲು! ಕಸ, ಗುಂಡಿ, ಒತ್ತುವರಿ ಪತ್ತೆಗೆ ಹೊಸ ತಂತ್ರಜ್ಞಾನ
ಕಳೆದ ಕೆಲ ತಿಂಗಳುಗಳಿಂದ ರಸ್ತೆ ಗುಂಡಿಮಯವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಜೊತೆಗೆ ರಸ್ತೆಯಲ್ಲಿನ ರಕ್ಕಸ ಗುಂಡಿಗಳನ್ನ ತಪ್ಪಿಸಲು ಹೋಗಿ ಹಿಂದೆ ಬರುವ ವಾಹನಗಳು ಮುಂದಿನ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದು, ಈ ಭಾಗದ ವಾಹನ ಸವಾರರ ಸ್ಥಿತಿ ಹೇಳತೀರದಾಗಿದೆ.
ಟಿನ್ ಫ್ಯಾಕ್ಟರಿ, ಕಣ್ಣೂರು, ನಾಗವಾರ, ಬೂದಿಗೆರೆ ಸೇರಿದಂತೆ ಹಲವು ಕಡೆಯಿಂದ ಏರ್ಪೋರ್ಟ್ ಹಾಗೂ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಇದು ಪ್ರಮುಖ ಮಾರ್ಗವಾಗಿದೆ. ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಕೃಷ್ಣಬೈರೆಗೌಡ ಸ್ವಕ್ಷೇತ್ರವು ಸಹ ಇದೆ. ಸಚಿವರ ಕ್ಷೇತ್ರದ ಪ್ರಮುಖ ರಸ್ತೆಯೇ ಈ ರೀತಿಯಾದರೆ ಹೇಗೆ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಈಗಾಗಲೇ ಸಾಕಷ್ಟು ಜನ ಈ ರಸ್ತೆಯಲ್ಲಿ ಬಿದ್ದು ಕೈ, ಕಾಲುಗಳನ್ನ ಮುರಿದುಕೊಂಡಿದ್ದು, ಲಕ್ಷಾಂತರ ರೂ. ನೀಡಿ ಖರೀದಿಸಿದ ವಾಹನಗಳು ಸಹ ಡ್ಯಾಮೇಜ್ ಆಗಿವೆ. ಇದಕ್ಕೆಲ್ಲಾ ಯಾರು ಹೊಣೆ ಅಂತ ವಾಹನ ಸವಾರರು ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಏರ್ಪೋರ್ಟ್ನಿಂದ ದೇಶ-ವಿದೇಶದ ಜನರು ಸಹ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಹೀಗಾಗಿ ಬೆಂಗಳೂರಿನ ರಸ್ತೆಗಳ ಮಾನ ಹರಾಜು ಆಗುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 8,000 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಮುಂದಾದ ಸರ್ಕಾರ: ಹಿಂದಿನ ಲೆಕ್ಕ ಕೇಳಿದ ತೇಜಸ್ವಿ ಸೂರ್ಯ
ಕೆಂಪೇಗೌಡ ಏರ್ಪೋರ್ಟ್ನ ಪ್ರಮುಖ ರಸ್ತೆಯಾಗಿದ್ದರೂ ರಸ್ತೆ ಅವ್ಯವಸ್ಥೆಯಿಂದ ತುಂಬಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಬೆಂಗಳೂರು ನಗರಾಭಿವೃದ್ದಿ ಸಚಿವರು ಮತ್ತು ಅಧಿಕಾರಿಗಳು ಎಚ್ಚೆತ್ತು ನೂತನ ರಸ್ತೆ ಮಾಡುವ ಮೂಲಕ ಗುಂಡಿಗಳಿಂದ ವಾಹನ ಸವಾರರಿಗೆ ಮುಕ್ತಿ ಕೊಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Tue, 3 November 26