ಕೆಐಎಡಿಬಿಯಿಂದ ಪರಿಹಾರ ನೀಡದೆ ಕಿರುಕುಳ ಆರೋಪ; ವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ

ಅದು ಕೆಂಪೇಗೌಡ ಏರ್ಪೊಟ್​ಗೆ ಸಮೀಪದಲ್ಲಿರುವ ಗ್ರಾಮ. ಹೀಗಾಗೆ ಆ ಗ್ರಾಮದ ಜಮೀನನ್ನ ಕೈಗಾರಿಕಾ ಪ್ರದೇಶವಾಗಿ ಮಾಡಿದ್ದು, ಆ್ಯಪಲ್​ನ ಪಾಕ್ಸ್ ಕಾನ್ ಕಂಪನಿ ಕಾಮಗಾರಿ ಸಹ ಆರಂಭಿಸಿದೆ. ಆದ್ರೆ, ಇದೇ ಕಾಮಗಾರಿ ಇದೀಗ ಸ್ಥಳೀಯ ರೈತರ ಮತ್ತು ಕೆಐಎಡಿಬಿ ಅಧಿಕಾರಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದು, ವಿಷದ ಬಾಟಲ್ ಹಿಡಿದು ಹೈಡ್ರಾಮವೇ ನಡೆದು ಹೋಗಿದೆ.

ಕೆಐಎಡಿಬಿಯಿಂದ ಪರಿಹಾರ ನೀಡದೆ ಕಿರುಕುಳ ಆರೋಪ; ವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ
ದೇವನಹಳ್ಳಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 03, 2024 | 5:40 PM

ಬೆಂಗಳೂರು ಗ್ರಾಮಾಂತರ, ಮೇ.03: ಜಿಲ್ಲೆಯ ದೇವನಹಳ್ಳಿ(Devanahalli) ತಾಲೂಕಿನ ಚೆನ್ನರಾಯಪಟ್ಟಣ ಹಾಗೂ ಕುಂದಾಣ ಹೋಬಳಿಯಲ್ಲಿ ಕೆಐಎಡಿಬಿ(KIADB) ಎರಡನೆ ಹಂತದ ಭೂಸ್ವಾಧಿನ ಮಾಡುತ್ತಿದೆ. ಜೊತೆಗೆ ಈಗಾಗಲೇ ಕುಂದಾಣ ಹೋಬಳಿಯ ದೊಡ್ಡಗೊಲ್ಲಹಳ್ಳಿ ಬಳಿ ಕೈಗಾರಿಕಾ ಪ್ರದೇಶಕ್ಕೆ ರಸ್ತೆಗಳನ್ನ ನಿರ್ಮಾಣ ಮಾಡಿದ್ದು, ಆ್ಯಪಲ್​ನ ಪಾಕ್ಸ್ ಕಾನ್ ಸೇರಿದಂತೆ ಹಲವು ಅಂತರಾಷ್ಟ್ರಿಯ ಬೃಹತ್ ಕಂಪನಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದ್ರೆ, ಈ ನಡುವೆ ಕಂಪನಿಗೆ ರೈತರ ಜಮೀನು ಕೊಡಿಸಿರುವ ಕೆಐಎಡಿಬಿ ಅಧಿಕಾರಿಗಳು ಪಾಕ್ಸ್ ಕಾನ್ ಕಂಪನಿಗೆ 30 ಎಕರೆ ಜಮೀನು ನೀಡಿರುವ ಶ್ರೀನಿವಾಸ್ ಎಂಬುವವರಿಗೆ ಪರಿಹಾರ ನೀಡಿಲ್ಲವಂತೆ.ಹೀಗಾಗಿ ಹಲವು ಭಾರಿ ಪರಿಹಾರದ ಹಣಕ್ಕಾಗಿ ಕೆಐಎಡಿಬಿ ಮೆಟ್ಟಿಲೇರಿದರೂ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಜೊತೆಗೆ ಪರಿಹಾರದ ಹಣ ನೀಡದೆ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನಲೆ ನಾವು ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ ಎಂದು ರೈತರು ಜಮೀನಿನಲ್ಲೆ ಪೆಂಡಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಧರಣಿ ನಿರತ ರೈತರನ್ನ ಪೊಲೀಸರು ಹೊರ ಕಳಿಸಲು ಮುಂದಾಗುತ್ತಿದ್ದಂತೆ, ರೈತರು ವಿಷದ ಬಾಟಲ್ ಹಿಡಿದು ಆತ್ಮಹತ್ಯೆಗೆ ಯತ್ನ ಮಾಡಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಬಾಟಲ್ ಕಿತ್ತುಕೊಂಡಿದ್ದಾರೆ.

ಇದನ್ನೂ ಓದಿ:ರಾಜಧಾನಿ ಮಗ್ಗುಲಲ್ಲಿ ಬೆಳೆ ಬೆಳೆಯುತ್ತಿದ್ದರೂ 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ! ರೈತರ ಆಕ್ರೋಶ

ಧರಣಿ ನಿರತ ರೈತ ಶ್ರೀನಿವಾಸ್ ಕುಟುಂಬದಲ್ಲಿ ಮೂವತ್ತು ಜನರಿದ್ದು, ಪಿತ್ರಾರ್ಜಿತ ಆಸ್ತಿಯಾಗಿ 27 ಎಕರೆ ಬಂದಿದ್ದರೆ, ಮೂರು ಎಕರೆ ಜಮೀನನ್ನ ಶ್ರೀನಿವಾಸ್ ಅವರು ಹಣ ನೀಡಿ ಸ್ವಯಾರ್ಜಿತವಾಗಿ ಕೊಂಡು ಕೊಂಡಿದ್ದರಂತೆ. ಹೀಗಾಗಿ ಪಿತಾರ್ಜಿತ ಹಾಗೂ ಸ್ವಯಾರ್ಜಿತ ಎರಡು ಆಸ್ತಿಗಳು ಕೆಐಎಡಿಬಿಗೆ ಹೋಗಿದ್ದು, ಪಿತ್ರಾರ್ಜಿತ 27 ಎಕರೆ ಜಮೀನು ವಿಚಾರ ಅಣ್ಣ-ತಮ್ಮಂದಿರ ಜಗಳದಿಂದ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಷ್ಟಾಪಟ್ಟು ದುಡಿದು ತೆಗೆದುಕೊಂಡ ಮೂರ ಎಕರೆ ಜಮೀನಿಗಾದರೂ ಪರಿಹಾರ ಕೊಡಿ ಎಂದು ಶ್ರೀನಿವಾಸ್ ಕೇಳುತ್ತಿದ್ದಾರೆ. ಆದ್ರೆ, ಯಾವುದಕ್ಕೂ ಪರಿಹಾರ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದು, ಹಣ ಜಮೀನು ಇಲ್ಲದೆ ನಾವೆಲ್ಲಿಗೆ ಹೋಗಬೇಕು ಎಂದು ಶ್ರೀನಿವಾಸ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಬಗ್ಗೆ ಸ್ಥಳಕ್ಕೆ ಬಂದಿದ್ದ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಬಾಳಪ್ಪ ಅವರು ಮಾತನಾಡಿ, ‘ಈಗಾಗಲೇ ಪಾಕ್ಸ್ ಕಾನ್ ಕಂಪನಿಗೆ ಭೂಮಿ ನೀಡಿದ್ದು, ರೈತರ ಪರಿಹಾರ ಹಣ ಕೋರ್ಟ್​ನಲ್ಲಿ ಕಟ್ಟಿದ್ದೇವೆ. ವ್ಯಾಜ್ಯ ಮುಗಿದ ನಂತರ ಅವರ ಪಾಲು ಅವರು ತೆಗೆದುಕೊಳ್ಳಲಿ ಇದೀಗ ಭೂಮಿ ಬಿಟ್ಟುಕೊಡಬೇಕು ಅಂತಿದ್ದಾರೆ. ಒಟ್ಟಾರೆ ಕೆಐಎಡಿಬಿಗೆ ಇದ್ದ ಜಮೀನು ಕಳೆದುಕೊಂಡು ರೈತರು ಇತ್ತ ಪರಿಹಾರವು ಇಲ್ಲದೆ, ಜಮೀನು ಇಲ್ಲದೆ ಪರದಾಡುತ್ತಿದ್ದು, ಅಧಿಕಾರಿಗಳ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ