2ನೇ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಮಹತ್ವದ ಸಭೆ: ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರ ಒಲವು

ಬೆಂಗಳೂರಿನ ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವೇಗ ನೀಡಿದೆ. ಈ ಕುರಿತಾಗಿ ಇಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ಮಾಡಲಾಗಿದೆ. ಆ ಮೂಲಕ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ.

2ನೇ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಮಹತ್ವದ ಸಭೆ: ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರ ಒಲವು
ಸಿಎಂ ಡಿಕೆ ಶಿವಕುಮಾರ್​
Image Credit source: tv9 kannada
Edited By:

Updated on: Jul 08, 2026 | 8:27 PM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಯಾರಿ
  • ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
  • ಬೆಂಗಳೂರು ದಕ್ಷಿಣದಲ್ಲೇ 2ನೇ ಏರ್​ಪೋರ್ಟ್ ಮಾಡಲಾಗುವುದು ಎಂದ ಸಿಎಂ

ಬೆಂಗಳೂರು, ಜುಲೈ 08: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆಗೆ ವೇಗ ನೀಡಿದೆ. ಈ ಸಂಬಂಧ ಇಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮಹತ್ವದ ಸಭೆ ಮಾಡಲಾಗಿದ್ದು, ಎರಡನೇ ಏರ್ಪೋರ್ಟ್ (2nd airport) ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ಬೆಂಗಳೂರು ನಗರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರದ ಒಲವು

ರಾಜ್ಯ ಸರ್ಕಾರ ಈಗಾಗಲೇ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಒಂದು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಚುಡಹಳ್ಳಿ–ಸೋಮನಹಳ್ಳಿ ಪ್ರದೇಶ. ಮತ್ತೊಂದು ತುಮಕೂರು ರಸ್ತೆಯ ಕುಣಿಗಲ್–ನೆಲಮಂಗಲ ನಡುವಿನ ಪ್ರದೇಶ. ಈ ಎರಡೂ ಸ್ಥಳಗಳಲ್ಲಿ ಸುಮಾರು 4,500 ರಿಂದ 5,200 ಎಕರೆ ಭೂಮಿಯನ್ನ ಗುರುತು ಮಾಡಲಾಗಿದ್ದು, ಇದರ ಸಾಧಕ ಬಾಧಕ ಹಾಗೂ ತಾಂತ್ರಿಕ ಕಾರ್ಯ ಸಾಧ್ಯತೆ, ಬಗ್ಗೆ ಚರ್ಚೆ ಮಾಡಲಾಗಿದೆ. ಇದರ ನಡುವೆ ಬೆಂಗಳೂರಿನ ದಕ್ಷಿಣ ಜಿಲ್ಲೆ ವಿಮಾನ ನಿಲ್ದಾಣದ ಬಗ್ಗೆ ಸರ್ಕಾರ ಒಲವು ಹೊಂದಿದೆ.

ಬೆಂಗಳೂರು ದಕ್ಷಿಣದಲ್ಲೇ 2ನೇ ಏರ್​ಪೋರ್ಟ್ ಮಾಡಲಾಗುವುದು ಎಂದ ಸಿಎಂ 

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಸಭೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘‘ಎರಡನೇ ಏರ್ಪೋರ್ಟ್ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಟೆಕ್ನಿಕಲ್ ಸಾಧ್ಯತೆ ಇರುವ ಕಡೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಲ್ಯಾಂಡ್ ದರ ಕೂಡ ಕಡಿಮೆ ಇರಬೇಕು. ಒಂದೊಂದು ಮನೆ ಇದ್ದರೆ ಪರವಾಗಿಲ್ಲ, ಅವರಿಗೂ ಪರಿಹಾರ ಕೊಡಬೇಕು’’ ಎಂದರು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.09 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

‘‘ಹೆಚ್ಚು ಊರು ಇರುವ ಕಡೆ ಬೇಡ ಎಂದು ಹೇಳಿದ್ದೇವೆ. ದಕ್ಷಿಣದಲ್ಲಿಯೇ ಏರ್ಪೋರ್ಟ್​ ಮಾಡಲಾಗುವುದು. ಜಾಗ ಯಾವುದು ಅಂತಿಮ ಆಗಿಲ್ಲ. ಆದರೆ ಹೆಚ್ಚು ಜನ ವಸತಿ ಪ್ರದೇಶಗಳನ್ನ ಹೊರತುಪಡಿಸಿ. ಖಾಲಿ ಪ್ರದೇಶವನ್ನ ಗುರುತಿಸಲು ಸೂಚಿಲಾಗಿದೆ’’ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಹೊಸ ಅವಕಾಶಗಳು ಸೃಷ್ಟಿ ಸಾಧ್ಯತೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಎದುರಾಗಿದೆ. ಮುಂದಿನ ಹಲವು ದಶಕಗಳ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಈ ಯೋಜನೆಗೆ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರದ ಶಿಫಾರಸಿನ ಬಳಿಕ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ತಾಂತ್ರಿಕ ಪರಿಶೀಲನೆ ನಡೆಸಲಿದೆ. ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆಯೊಂದಿಗೆ ಯೋಜನೆ ಮುಂದಿನ ಹಂತಕ್ಕೆ ಸಾಗಲಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ಬೆಂಗಳೂರಿನ ವಿಮಾನ ಸಂಚಾರದ ಒತ್ತಡ ಕಡಿಮೆಯಾಗುವುದರ ಜೊತೆಗೆ, ಕೈಗಾರಿಕೆ, ಲಾಜಿಸ್ಟಿಕ್ಸ್, ಹೂಡಿಕೆ, ಉದ್ಯೋಗ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.

ಎರಡನೇ ವಿಮಾನ ನಿಲ್ದಾಣ ಅನುಕೂಲಗಳು

  • ಬೆಂಗಳೂರಿನ ಈಗಿನ ವಿಮಾನ ನಿಲ್ದಾಣದ ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದೆ. ಭವಿಷ್ಯದಲ್ಲಿ ಹೆಚ್ಚುತ್ತಿರುವ ವಿಮಾನ ಸಂಚಾರವನ್ನು ಸುಲಭವಾಗಿ ನಿರ್ವಹಿಸಲು ನೆರವಾಗಲಿದೆ.
  • ಕೈಗಾರಿಕೆ, ಐಟಿ, ಲಾಜಿಸ್ಟಿಕ್ಸ್ ಮತ್ತು ರಫ್ತು ವಲಯಕ್ಕೆ ಉತ್ತೇಜನ ಸಿಗಲಿದೆ.
  • ನೇರವಾಗಿ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
  • ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ, ಮೆಟ್ರೋ, ರೈಲು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.
  • ಹೊಸ ಕೈಗಾರಿಕಾ ವಲಯ, ಏರೋಸಿಟಿ, ಗೋದಾಮು ಮತ್ತು ವಾಣಿಜ್ಯ ಕೇಂದ್ರಗಳು ಬೆಳೆಯುವ ಸಾಧ್ಯತೆ.
  • ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ದೀರ್ಘಾವಧಿಯಲ್ಲಿ ಪೂರಕವಾಗಲಿದೆ.
  • ತುರ್ತು ಪರಿಸ್ಥಿತಿಗಳಲ್ಲಿ ಪರ್ಯಾಯ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ.

ಅನಾನುಕೂಲತೆ ಏನು?

  • 4,500–5,200 ಎಕರೆ ಭೂಸ್ವಾಧೀನ ದೊಡ್ಡ ಸವಾಲು.
  • ರೈತರಿಂದ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ.
  • ಭೂ ಪರಿಹಾರ ವೆಚ್ಚ ಮತ್ತು ಯೋಜನೆಯ ಒಟ್ಟು ವೆಚ್ಚ ಸಾವಿರಾರು ಕೋಟಿ ರೂ ಹೆಚ್ಚಾಗುತ್ತದೆ.
  • ಪರಿಸರ, ಅರಣ್ಯ ಮತ್ತು ಪರಿಸರ ಅನುಮತಿಗಳನ್ನು ಪಡೆಯಲು ತೊಡಕು.
  • ಸುತ್ತಮುತ್ತಲಿನ ಗ್ರಾಮಗಳ ಪುನರ್ವಸತಿ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಸಾಧ್ಯತೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಸದ್ಯ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆ ಇದೀಗ ಮಹತ್ವದ ಹಂತ ತಲುಪಿದೆ. ಸರ್ಕಾರ ಎರಡು ಸ್ಥಳಗಳನ್ನು ಗುರುತಿಸಿದ್ದು, ಇಂದಿನ ಸಭೆಯಲ್ಲಿ ಅವುಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದು, ಸರ್ಕಾರ ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲು ಒಲವು ಹೊಂದಿದೆ. ಆದರೆ ರಾಜ್ಯ ಸರ್ಕಾರದ ಶಿಫಾರಸಿನ ಆಧಾರದಲ್ಲಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಂತಿಮ ಸ್ಥಳವನ್ನು ಆಯ್ಕೆ ಮಾಡಲಿದೆ ಕಾದು ನೋಡಬೇಕು.

DK Shivakumar on Airport: ಬೆಂಗಳೂರು ದಕ್ಷಿಣದಲ್ಲೇ 2ನೇ ಏರ್​ಪೋರ್ಟ್ ಮಾಡಲಾಗುವುದು ಎಂದ ಸಿಎಂ ಡಿಕೆಶಿ | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us