ನೆಲಮಂಗಲ: ಕೆಜಿಗಟ್ಟಲೆ ಚಿನ್ನ ಕೊಂಡೊಯ್ದು ಆಭರಣ ಅಂಗಡಿ ಮಾಲೀಕರಿಗೇ ಧಮ್ಕಿ ಹಾಕಿದ ಮಹಿಳೆ!
ಸೆಲೆಬ್ರಿಟಿಗಳ ಜತೆಗಿನ ಒಡನಾಟವನ್ನೇ ಬಂಡವಾಳ ಮಾಡಿಕೊಂಡ ಮಹಿಳೆಯೊಬ್ಬಳು ನೆಲಮಂಗದ ಜ್ಯುವೆಲ್ಲರಿ ಶಾಪ್ಗೆ ಕೋಟ್ಯಂತ ರೂಪಾಯಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ, ಒಂದು ಅಂಗಡಿಯಿಂದ ಕೊಂಡೊಯ್ದಿದ್ದ ಚಿನ್ನವನ್ನು ಮತ್ತೊಂದರಲ್ಲಿ ಅಡವಿಟ್ಟು ಕೋಟ್ಯಂತರ ರೂ. ಹಣ ಪಡೆದಿರುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ವಿವರ ಇಲ್ಲಿದೆ.
ನೆಲಮಂಗಲ, ಡಿಸೆಂಬರ್ 19: ಸದಾ ಸೆಲೆಬ್ರಿಟಿಗಳ ಜತೆ ಗುರುತಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬಳು ಜ್ಯುವೆಲ್ಲರಿಯೊಂದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಕೊಂಡೊಯ್ದು ವಂಚನೆ ಎಸಗಿದ್ದಾಳೆ. ಇಷ್ಟೇ ಅಲ್ಲದೆ, ಆಭರಣ ಅಂಗಡಿ ಮಾಲೀಕರಿಗೇ ಧಮ್ಕಿ ಹಾಕಿರುವುದು ತಿಳಿದು ಬಂದಿದೆ. ಸದ್ಯ, ಆರೋಪಿ ಶ್ವೇತಗೌಡ ವಶಕ್ಕೆ ಪಡೆದಿರುವ ಪೊಲೀಸರು, 2 ಕೆಜಿ ಚಿನ್ನ ಹಾಗೂ ಡೈಮಂಡ್ ಜಪ್ತಿ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಚಿನ್ನ ಕೊಂಡೊಯ್ದು ವಂಚಿಸಿದ ಪ್ರಕರಣದ ವಿವರ
ಸದಾ ಸೆಲೆಬ್ರಿಟಿಗಳ ಜತೆ ಕಾಣಿಸಿಕೊಳ್ಳುತ್ತಿದ್ದ ಮತ್ತು ಗುರುಸಿಕೊಳ್ಳುತ್ತಿದ್ದ ಶ್ವೇತಾಗೌಡ, ಅವೆನ್ಯೂ ರಸ್ತೆಯಲ್ಲಿರುವ ನವರತನ್ ಗೋಲ್ಡ್ ಅಂಡ್ ಡೈಮಂಡ್ ಜ್ಯುವೆಲರಿ ಶಾಪ್ನಿಂದ ಚಿನ್ನ ಖರೀದಿಸುವ ನೆಪದಲ್ಲಿ ಇತ್ತೀಚೆಗೆ ಬರೊಬ್ಬರಿ 2 ಕೆಜಿ 940 ಗ್ರಾಂ ಚಿನ್ನಾಭರಣ ಹಾಗೂ ಡೈಮಂಡ್ ಕೊಂಡೊಯ್ದಿದ್ದಾಳೆ. ಆಗಾಗ್ಗೆ ಜ್ಯುವೆಲರಿ ಶಾಪ್ನ ಕೇಂದ್ರ ಕಚೇರಿಯಿಂದ ಪರ್ಮಿಷನ್ ತರುತ್ತಿದ್ದ ಆಕೆ, ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದಳು. ಇಷ್ಟವಾದ ಚಿನ್ನಾಭರಣ ಖರೀದಿಸಿ, ಉಳಿಕೆ ಆಭರಣ ವಾಪಸ್ ಮಾಡುತ್ತಿದ್ದಳು. ಅದರಂತೆ ಈ ಬಾರಿಯೂ ಚಿನ್ನ, ಡೈಮಂಡ್ ಕೊಂಡೊಯ್ದಿದ್ದಾಳೆ. ಆದರೆ, ಆಗಸ್ಟ್ 26 ರಿಂದ ನವೆಂಬರ್ 8 ರವರೆಗೆ ತೆಗೆದುಕೊಂಡು ಹೋದ ಚಿನ್ನಾಭರಣ ಖರೀದಿಸಿಯೂ ಇಲ್ಲ, ವಾಪಸ್ ಕೂಡ ಕೊಟ್ಟಿಲ್ಲ.
ಚಿನ್ನಾಭರಣ ವಾಪಸ್ ಕೇಳಿದ ಜ್ಯುವೆಲ್ಲರಿ ಮಾಲೀಕರಿಗೆ ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಕೊನೆಗೆ ಬೇಸತ್ತ ಮಾಲೀಕ ಸಂಜಯ ಭಾಪ್ನ ಪೊಲೀಸರ ಮೊರೆ ಹೋಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 318(4),351(2), 351(3)352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ
ಅವೆನ್ಯೂ ರಸ್ತೆಯಲ್ಲಿರುವ ನವರತನ್ ಗೋಲ್ಡ್ ಅಂಡ್ ಡೈಮಂಡ್ ಜ್ಯುವೆಲರಿ ಶಾಪ್ನಿಂದ ಚಿನ್ನ ಕೊಂಡೊಯ್ದಿದ್ದ ಶ್ವೇತಾಗೌಡ, ಹೆಸರುಘಟ್ಟ ರಸ್ತೆ ಸಿಡೇದಹಳ್ಳಿಯಲ್ಲಿರುವ ರಾಮ್ ದೇವ್ ಜ್ಯುವೆಲ್ಲರಿಯಲ್ಲಿ ಚಿನ್ನಾಭರಣ ಒತ್ತೆ ಇಟ್ಟು ಕೋಟ್ಯಂತರ ಹಣ ಪಡೆದಿರುವುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಇದೀಗ ಹಣ ಕೊಟ್ಟ ವ್ಯಾಪಾರಿ ಚೈನಾರಾಮ್ ಅನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ