ನೆಲಮಂಗಲ: ರೈತರಿಂದ ವಶಪಡಿಸಿಕೊಂಡ ಜಮೀನಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ; ಕೈಕಟ್ಟಿ ಕುಳಿತ ಗಣಿ ಇಲಾಖೆ ಅಧಿಕಾರಿಗಳು
ಅದು ಸಿಲಿಕಾನ್ ಸಿಟಿ ಹೊರ ವಲಯದ ಅತಿ ದೊಡ್ಡ ಕೈಗಾರಿಕೆ ಪ್ರದೇಶ, ಅಲ್ಲಿ ಕೈಗಾರಿಕೆ ಪ್ರದೇಶಕ್ಕಾಗಿ ರೈತರಿಂದ ಕೆಐಡಿಬಿ ಸಾವಿರಾರು ಏಕರೆ ಪ್ರದೇಶ ವಶ ಪಡಿಸಿಕೊಂಡಿದೆ. ವಶ ಪಡಿಸಿಕೊಂಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ಕರಿ ಛಾಯೆ ಆವರಿಸಿದೆ. ಇದರ ವಿರುದ್ದ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಕೈಗಾರಿಕೆ ಪ್ರದೇಶಕ್ಕಾಗಿ ಕೆಐಡಿಬಿ(Karnataka Industrial Area Development Board)ರೈತರ ಜಮೀನುಗಳನ್ನ ವಶ ಪಡಿಸಿಕೊಂಡಿದೆ. ಈ ವಶ ಪಡಿಸಿಕೊಂಡ ಪ್ರದೇಶದಲ್ಲಿ ಬಂಡೆ ಕಲ್ಲುಗಳಿದ್ದು, ಇವುಗಳನ್ನ ತಗೆದು ಸಮತಟ್ಟಾದ ಪ್ರದೇಶ ಮಾಡಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ. ಆದರೆ ಬಂಡೆ ಕಲ್ಲು ತಗೆಯುವಾಗ ಕೆಳ ಭಾಗದಲ್ಲಿ ಗ್ರಾನೈಟ್ ಕಲ್ಲು ಬಂಡೆಗಳು ಸಿಗುತ್ತಿದ್ದು, ಇದನ್ನೆ ಬಂಡವಾಳವಾಗಿಸಿಕೊಂಡು ಅಕ್ರಮವಾಗಿ ಗ್ರಾನೈಟ್ ಕಲ್ಲುಗಳನ್ನ ಹೊರ ತಗೆಯುತ್ತಿದ್ದಾರೆ. ಇನ್ನು ದಾಬಸ್‌ಪೇಟೆ ಕೈಗಾರಿಕೆ ಪ್ರದೇಶ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹೀಗಾಗಿ ಇಲ್ಲಿ ಸ್ಥಳೀಯರು ಅಲ್ಲದೇ ಹೊರ ರಾಜ್ಯದ ಅದೆಷ್ಟೋ ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ. ಹೀಗಾಗಿ ಕೆಐಡಿಬಿ(KIDB) ಪ್ರದೇಶ ಕೂಡ ವಿಸ್ತೀರ್ಣಗೊಂಡಿದ್ದು, ಇಷ್ಟು ದಿವಸ 3 ಹಂತದಲ್ಲಿದ್ದ ಪ್ರದೇಶ ಇದೀಗ ಹೊನ್ನೆನಹಳ್ಳಿ ವ್ಯಾಪ್ತಿಯಲ್ಲಿ 4-5 ಹಂತಕ್ಕೆ ವಿಸ್ತೀರ್ಣಗೊಂಡಿದೆ.
ಇದೀಗ ಇದೇ ಪ್ರದೇಶದಲ್ಲಿ ನೂರಾರು ಏಕರೆ ಭೂಮಿ ಗುಡ್ಡಗಾಡು ಪ್ರದೇಶದಂತಿದೆ. ಹೀಗಾಗಿ ಹೊರ ಗುತ್ತಿಗೆಯವರಿಗೆ ಕಲ್ಲು ಬಂಡೆ ತಗೆದು ಸಮತಟ್ಟಾದ ಪ್ರದೇಶ ಮಾಡಲು ಗುತ್ತಿಗೆ ನೀಡಿದೆಯಾದರೆ ಅವರು ಇದರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಸ್ಥರಿಗೂ ತೊಂದರೆಯಾಗುತ್ತಿದೆ, ಇದಕ್ಕೆ ಸಂಬಂಧಪಟ್ಟ ಕೆಐಡಿಬಿ, ಗಣಿ ಭೂ ವಿಜ್ಞಾನ ಇಲಾಖೆ ಎನು ಮಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಇಲ್ಲಿ ಕೈಗಾರಿಕೆ ಪ್ರದೇಶ ವಿಕ್ಷಕರಾಗಿ ಗ್ರೌಂಡ್ ವರ್ಕರ್ ಇರಬೇಕು. ಆದರೆ ಇಲ್ಲಿ ಯಾರೊಬ್ಬರು ಕೂಡ ಇಲ್ಲ, ಹೀಗಾಗಿ ಇಲ್ಲಿ ಏನೇ ಮಾಡಿದರು ಯಾರು ಹೇಳುವವರು ಇಲ್ಲ, ಕೇಳುವವರು ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಕೆಐಡಿಬಿ ಕೈಗಾರಿಕೆ ಪ್ರದೇಶಕ್ಕೆ ರೈತರ ಜಮೀನುಗಳನ್ನ ತಗೆದುಕೊಂಡು ವಿವಿಧ ಕಂಪನಿಗಳಿಗೆ ಜಾಗ ನೀಡುತ್ತಿದೆ. ಇದರಿಂದ ಸ್ಥಳೀಯರಿಗೆ ಏನು ಅನುಕೂಲವಾಗಿದೆ. ರೈತರಿಂದ ಸ್ವಾಧೀನ ಪಡಿಸಿಕೊಂಡ ಹೊಸ ಭೂ ಪ್ರದೇಶಗಳಲ್ಲಿ ಬಂಡೆಗಳಿದ್ದು ಅವುಗಳನ್ನ ಸಮತಟ್ಟಾದ ಪ್ರದೇಶ ಮಾಡಲು ಗುತ್ತಿಗೆಯನ್ನ ನೀಡಲಾಗಿದೆ. ಆದರೆ ಇದನ್ನೆ ಬಂಡವಾಳವಾಗಿಸಿಕೊಂಡು ಗುತ್ತಿಗೆದಾರರು ತಮ್ಮ ಸ್ವಂತ ಲಾಭಕ್ಕಾಗಿ ಹೀಗೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಇರುವುದು ವಿಪರ್ಯಾಸವೇ ಸರಿ.!
ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ