ಯುಗಾದಿ ಹೊಸ ವರ್ಷದ ದಿನವೇ ರೈತನ ಮನೆಯಲ್ಲಿ ಸೂತಕದ ಛಾಯೆ; ಕಣ್ಮುಂದೆಯೆ ಸುಟ್ಟು ಕರಕಲಾದ ಹಸುಗಳು
ಯುಗಾದಿ ಹಿಂದೂಗಳ ಹೊಸ ವರ್ಷ ಹೀಗಾಗಿ ಆ ಕುಟುಂಬ ಸಹ ನಿನ್ನೆ(ಮಾ.21) ರಾತ್ರಿ ಹಬ್ಬದ ಸಡಗರದಲ್ಲಿದ್ದು ವಿಜೃಂಭಣೆಯ ಹಬ್ಬ ಆಚರಿಸುವ ಪ್ಲಾನ್ನಲ್ಲಿದ್ರು. ಆದರೆ ಅಷ್ಟರಲ್ಲೆ ಆ ಮನೆ ಬಳಿಗೆ ಬಂದ ಅದೊಂದು ಕಿಡಿ ಹಬ್ಬದ ಮನೆಯಲ್ಲಿ ಸೂತಕದ ಛಾಯೆಯನ್ನ ಮೂಡಿಸಿದ್ದು ಕಣ್ಣೀರಿನಲ್ಲಿ ಕೈತೊಳೆಯುವಂತ ದುಸ್ಥಿತಿಯನ್ನ ತಂದೊಡಿದೆ.
ಬೆಂಗಳೂರು ಗ್ರಾಮಾಂತರ: ಮನೆ ಮುಂದಿನ ಕೊಟ್ಟಿಗೆ ಸುಟ್ಟು ಕರಕಲಾಗಿದೆ. ಲಕ್ಷ್ಮಿಯಂತೆ ಮನೆಯವರಿಂದ ಹಬ್ಬದಂದು ಪೂಜೆ ಮಾಡಿಸಿಕೊಳ್ಳಬೇಕಾದ ಗೋಮಾತೆಗಳು ಮನೆ ಮುಂದೆಯೆ ಸುಟ್ಟು ಕರಕಲಾಗಿದ್ರೆ ಇತ್ತ ಜಾನುವಾರುಗಳ ರಕ್ಷಣೆಗೆ ಹೋದ ವೃದ್ದ ರೈತ ಸಹ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆಸ್ವತ್ರೆ ಪಾಲಾಗಿದ್ದಾನೆ. ಹೊಸ ವರ್ಷದ ಯುಗಾದಿ ದಿನವೆ ಇಂತಹ ಘೋರ ಘಟನೆ ನಡೆದಿದೆ. ಹೌದು ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ ಹಾಗೂ ಎರಡು ಜಾನುವಾರುಗಳು ಸುಟ್ಟು ಕರಕಲಾಗಿರುವ ಇಂತಹ ದೃಶ್ಯಗಳೆಲ್ಲ ಕಂಡು ಬಂದಿದ್ದು. ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಾಘಟ್ಟ ಗ್ರಾಮದಲ್ಲಿ. ಹೊನ್ನಾಘಟ್ಟ ಗ್ರಾಮದ ಮುನಿಹನುಮಯ್ಯ ಎನ್ನುವ ಈ ರೈತ ತೋಟದ ಮನೆ ಮುಂದೆ ಧನದ ಕೊಟ್ಟಿಗೆಯನ್ನ ನಿರ್ಮಾಣ ಮಾಡಿಕೊಂಡು, ಹೈನುಗಾರಿಕೆಯಿಂದಲೆ ಜೀವನ ರೂಪಿಸಿಕೊಂಡಿದ್ದ.
ನಿನ್ನೆ(ಮಾ.21) ರಾತ್ರಿ ಸಹ ಎಂದಿನಂತೆ ಹಸುಗಳಿಗೆ ಮೇವನ್ನ ಹಾಕಿ ಮನೆಯಲ್ಲಿದ್ದ ವೇಳೆ ಏಕಾಏಕಿ ಧನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿದ್ದು ಕೂಡಲೆ ಬೆಂಕಿಯನ್ನ ನಂದಿಸುವ ಯತ್ನ ಮಾಡಿದ್ದಾರೆ. ಆದರೆ ಈ ವೇಳೆ ಕೊಟ್ಟಿಗೆಗೆ ಒಣಗಿದ ತೆಂಗಿನ ಗರಿಗಳನ್ನ ಹಾಕಿದ್ದ ಕಾರಣ ಸಂಪೂರ್ಣ ಕೊಟ್ಟಿಗೆಗೆ ಕ್ಷಣ ಮಾತ್ರದಲ್ಲೆ ಬೆಂಕಿ ವ್ಯಾಪಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಲಕ್ಷ ಲಕ್ಷ ಬೆಲೆ ಬಾಳುವ ಎರಡು ಹಸುಗಳು ಬೆಂಕಿಯಲ್ಲಿ ಬೆಂದು ಸ್ಥಳದಲ್ಲೆ ಸಾವನ್ನಪಿವೆ. ದನದ ಕೊಟ್ಟಿಗೆಗೆ ಬೆಂಕಿ ಬೀಳುತ್ತಿದ್ದಂತೆ ಮನೆಯಲ್ಲಿದ್ದ ವೃದ್ದ ಮುನಿಹನುಮಯ್ಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ನಾಲ್ಕು ಜಾನುವಾರುಗಳನ್ನ ರಕ್ಷಿಸಿ ಹೊರಗಡೆ ಕಳಿಸಿದ್ದಾನೆ. ಉಳಿದ ಮತ್ತೆರಡು ಹಸುಗಳನ್ನ ರಕ್ಷಿಸಲು ಹೋದ ವೇಳೆ ರೈತ ಸಹ ಬೆಂಕಿಗೆ ಸಿಲುಕಿ ಶೇ.50 ರಷ್ಟು ಸುಟ್ಟಿದ್ದು ಸ್ಥಳಿಯರು ರೈತನನ್ನ ರಕ್ಷಿಸಿ ಆಸ್ವತ್ರೆಗೆ ಸಾಗಿಸುವ ಯತ್ನ ಮಾಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಅರಸೀಕೆರೆಯಲ್ಲೂ ಎಕ್ಸಪ್ರೆಸ್ ರೈಲನ್ನು ಹತ್ತಬಹುದು
ಈ ವೇಳೆ ಸಮಯಕ್ಕೆ ಸರಿಯಾಗಿ ಆ್ಯಂಬುಲೇನ್ಸ್ ಸಿಗದೆ ಒಂದೂವರೆ ಗಂಟೆಗೂ ಅಧಿಕ ಕಾಲ ಪರದಾಡಿದ್ದು, ನಂತರ ಖಾಸಗಿ ಆ್ಯಂಬುಲೇನ್ಸ್ ನಲ್ಲಿ ಬೆಂಗಳೂರಿನ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನ ಕಳೆದುಕೊಂಡು ಕುಟುಂಬಸ್ಥರ ನೋವು ತಾರಕಕ್ಕೇರಿದ್ದು, ಯುಗಾದಿ ಹಬ್ಬದ ದಿನವೆ ಇಂತಹ ದುರಂತ ಘಟನೆ ನಡೆದಿದ್ದನ್ನ ಕಂಡು ಸ್ಥಳಿಯರು ಕಣ್ಣೀರು ಹಾಕಿದ್ದಾರೆ. ಒಟ್ಟಾರೆ ಬೇಸಿಗೆ ಶುರುವಾಗುತ್ತಿದ್ದಂತೆ ಎಲ್ಲೆಡೆ ಬೆಂಕಿ ಅನಾಹುತಗಳು ಹೆಚ್ಚಾಗಿದ್ದು, ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು ಮಾತ್ರ ನಿಜಕ್ಕೂ ದುರಂತ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ