ಮೇಕೆದಾಟು ಯೋಜನೆಗೆ ವಿರೋಧ: ಅತ್ತಿಬೆಲೆ ಗಡಿಯಲ್ಲಿ ಖಾಲಿ ಕೊಡ ಚಳವಳಿ; ತಮಿಳುನಾಡು ವಾಹನಗಳಿಗೆ ನಿರ್ಬಂಧ

Mekedatu Project: ಮೇಕೆದಾಟು ಕುಡಿಯುವ ನೀರು ಯೋಜನೆಗೆ ತಮಿಳುನಾಡು ವಿರೋಧ ಖಂಡಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ಬೃಹತ್ ಖಾಲಿ ಕೊಡ ಚಳುವಳಿ ನಡೆಸಿತು. ರಾಜ್ಯದಲ್ಲಿ ತೀವ್ರ ಬರಗಾಲದಿಂದ ನೀರಿನ ಅಭಾವವಿದ್ದು, ಯೋಜನೆ ಜಾರಿಗೆ ಅಡ್ಡಿಪಡಿಸುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ತಮಿಳುನಾಡು ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು.

ಮೇಕೆದಾಟು ಯೋಜನೆಗೆ ವಿರೋಧ: ಅತ್ತಿಬೆಲೆ ಗಡಿಯಲ್ಲಿ ಖಾಲಿ ಕೊಡ ಚಳವಳಿ; ತಮಿಳುನಾಡು ವಾಹನಗಳಿಗೆ ನಿರ್ಬಂಧ
ಖಾಲಿ ಕೊಡ ಚಳವಳಿ
Image Credit source: tv9 kannada
Edited By:

Updated on: Jul 26, 2026 | 3:01 PM

ಮುಖ್ಯಾಂಶಗಳು

  • ಮೇಕೆದಾಟು ಕುಡಿಯುವ ನೀರು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ
  • ಕನ್ನಡ ಜಾಗೃತಿ ವೇದಿಕೆಯಿಂದ ಬೃಹತ್ ಖಾಲಿ ಕೊಡ ಚಳುವಳಿ
  • ತಮಿಳುನಾಡು ವಾಹನಗಳಿಗೆ ನಿರ್ಬಂಧ

ಆನೇಕಲ್​, ಜುಲೈ 26: ಮೇಕೆದಾಟು ಕುಡಿಯುವ ನೀರಿನ ಯೋಜನೆ (Mekedatu project) ಜಾರಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ, ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹೆದ್ದಾರಿ ತಡೆ ಬೃಹತ್ ಖಾಲಿ ಕೊಡ ಚಳವಳಿ (Empty Pot protest) ಮಾಡಲಾಯಿತು.

ರಾಜಕೀಯ ದುರುದ್ದೇಶದ ವಿರುದ್ಧ ಆಕ್ರೋಶ

ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಜಲಾಶಯಗಳು ಖಾಲಿಯಾಗಿವೆ. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಅಭಾವ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡು ಸರ್ಕಾರ ರಾಜಕೀಯ ದುರುದ್ದೇಶದಿಂದ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ; ಜುಲೈ 22ರಂದು CWMA ಮೀಟಿಂಗ್​

ಇನ್ನು ಪ್ರತಿಭಟನೆ ವೇಳೆ ಹೊಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆಯಲು ಮತ್ತು ವಾಹನಗಳನ್ನು ತಡೆಯಲು ಹೋರಾಟಗಾರರು ಮುಂದಾದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಿದ ಅತ್ತಿಬೆಲೆ ಪೊಲೀಸರು, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋದರು.

ತಮಿಳುನಾಡು ಸಾರಿಗೆ ಬಸ್‌ಗಳ ಸಂಚಾರ ನಿರ್ಬಂಧ

ಇನ್ನು ಅತ್ತಿಬೆಲೆ ಗಡಿಯಲ್ಲಿ ಚಳವಳಿ ತೀವ್ರಗೊಂಡ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೊಸೂರಿನಿಂದ ಕರ್ನಾಟಕಕ್ಕೆ ಆಗಮಿಸುವ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ವಾಹನಗಳ ಸಂಚಾರವನ್ನು ಹೊಸೂರು ಪೊಲೀಸರು ಬೆಳಗಿನಿಂದಲೇ ನಿರ್ಬಂಧಿಸಿದ್ದರು. ಪ್ರತಿಭಟನೆ ಮುಕ್ತಾಯಗೊಂಡು ಪರಿಸ್ಥಿತಿ ತಿಳಿಯಾದ ಬಳಿಕ ವಾಹನಗಳ ಸಂಚಾರ ಎಂದಿನಂತೆ ಪುನರಾರಂಭಗೊಂಡಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us