
ದೇವನಹಳ್ಳಿ, ಆಗಸ್ಟ್ 26: ಹತ್ತಾರು ವರ್ಷಗಳಿಂದ ಸೂರು ಕಟ್ಟಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದ ಬಡ ಕುಟುಂಬಗಳಿಗೆ ದಿಢೀರ್ ತೆರವು ಕಾರ್ಯಾಚರಣೆಯ ಬಿಸಿ ತಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ (bengaluru rural) ಯಲಹಂಕ ತಾಲೂಕಿನ ಮುದ್ದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗ ತೆರವುಗೊಳಿಸಲು (Land Dispute) ಬಂದ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಪೊಲೀಸರ ಬದಲು ಪುಡಿ ರೌಡಿಗಳನ್ನು ಕರೆತಂದು ಮನೆ ಕೆಡವಲು ಬಂದಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಕೈಯಲ್ಲಿ ಡೀಸೆಲ್ ಮತ್ತು ವಿಷದ ಬಾಟಲಿ ಹಿಡಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಯಲಹಂಕ ತಾಲೂಕಿನ ಮುದ್ದನಹಳ್ಳಿ ಗ್ರಾಮದ ಸರ್ವೆ ನಂಬರ್ 1ರಲ್ಲಿ 29 ಎಕರೆ ಜಾಗವಿದ್ದು, ಅದರಲ್ಲಿ 13.5 ಎಕರೆ ಜಾಗವನ್ನ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಿದೆಯಂತೆ. ಹೀಗಾಗಿ ವಸತಿ ನಿಗಮದ ಅಧಿಕಾರಿಗಳು ಗುತ್ತಿಗೆದಾರರು ಜಿ ಪ್ಲಸ್ 3 ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೆ ಜಮೀನಿನ ಪಕ್ಕದಲ್ಲಿ ಗ್ರಾಮದ ಬಡ ಜನರು ಕಟ್ಟಿಕೊಂಡಿರುವ ಮನೆಗಳು ಸಹ ನಿಗಮಕ್ಕೆ ಮಂಜೂರಾದ ಜಾಗ ಅಂತ ಕಟ್ಟಿರುವ ಮನೆಗಳನ್ನ ಕೆಡವಲು ಜೆಸಿಬಿ ತಂದಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳಿಯರು ‘ಇದು ನಾವು ದಶಕಗಳಿಂದ ವಾಸ ಮಾಡುತ್ತಿರುವ ಜಾಗ ಯಾವುದೇ ಕಾರಣಕ್ಕೂ ಕೆಡವಲು ಬಿಡುವುದಿಲ್ಲ.’ ಎಂದಿದ್ದಾರೆ. ಅಷ್ಟೇ ಅಲ್ಲದೆ ಮನೆ ಕೆಡವಲು ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೈಯಲ್ಲಿ ವಿಷದ ಬಾಟಲ್ ಮತ್ತು ಡೀಸೆಲ್ ಹಿಡಿದು ಆಕ್ರೋಶ ಹೊರ ಹಾಕಿದ್ದಾರೆ.
‘ಸರ್ವೆ ನಂಬರ್ 1ರಲ್ಲಿನ ಸರ್ಕಾರಿ ಜಾಗದಲ್ಲಿ ಸಾಕಷ್ಟು ಜನ ಮನೆ ಕಟ್ಟಿಕೊಂಡು 94 ಸಿಸಿಗೆ ಅರ್ಜಿ ಹಾಕಿಕೊಂಡಿದ್ದು, ಎಲ್ಲಾ ಮನೆಗಳನ್ನು ಬಿಟ್ಟು ಬಡವರು, ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಧಿಕಾರಿಗಳು ನೋಟಿಸ್ ನೀಡಿ ಪೊಲೀಸರೊಂದಿಗೆ ಬರುವುದು ಬಿಟ್ಟು ಕೆಲ ಪುಡಿರೌಡಿಗಳನ್ನ ಕರೆದುಕೊಂಡು ಮನೆ ಖಾಲಿ ಮಾಡಿಸುತ್ತಿದ್ದಾರೆ’ ಎಂದು ರಾಜೀವ ಗಾಂಧಿ ವಸತಿ ನಿಗಮ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿ ಹನುಮಂತರೆಡ್ಡಿ ಪ್ರತಿಕ್ರಿಯಿಸಿದ್ದು, ‘ಇದು ನಮಗೆ ಮಂಜೂರಾಗಿರುವ ಜಮೀನು, ಅದನ್ನ ನಾವು ರಕ್ಷಣೆ ಮಾಡಬೇಕು. ರಾತ್ರೋರಾತ್ರಿ ಮನೆಗಳನ್ನ ಕಟ್ಟಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಬೇಕಾದರೆ ತಹಶೀಲ್ದಾರ್ ಅವರನ್ನ ಕೇಳಲಿ. ಇನ್ನೂ ಪುಡಿ ರೌಡಿಗಳು ಯಾರು ಅಂತ ಕೇಳಿದರೆ, ಅವರೆಲ್ಲಾ ಕಾರ್ಮಿಕರು’ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಹಳ್ಳ ಹಿಡಿದ ಬಿ-ಖಾತೆಯಿಂದ ಎ-ಖಾತೆ ನೀಡುವ ಯೋಜನೆ: ಆಗಿದ್ದೇನು?
ಇನ್ನು ಸ್ಥಳಿಯರ ತೀವ್ರ ವಿರೋಧದಿಂದ ತಾತ್ಕಾಲಿಕವಾಗಿ ಬಡ ಜನರು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿರುವ ಮನೆ ಕೆಡುವುದನ್ನ ಅಧಿಕಾರಿಗಳು ನಿಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ತಾಲೂಕು ಆಡಳಿತ ಮಂಡಳಿ ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.