ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ: 7 ಚಿರತೆ ಮರಿ ಸಾವು ಬೆನ್ನಲ್ಲೇ 13 ಚಿಂಕೆಗಳು ಬಲಿ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸೂತಕದ ಛಾಯೆ ಆವರಿಸಿದೆ. ಇದುವರೆಗೂ 7 ಚಿರತೆ ಮರಿಗಳು ಹಾಗೂ 13 ಚಿಂಕೆಗಳು ಮೃತಪಟ್ಟಿವೆ. ತಿಂಗಳ ಹಿಂದೆಯಷ್ಟೇ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳನ್ನು ತರಲಾಗಿತ್ತು. ಆದರೆ ಈಗ ನಾನಾ ಕಾರಣದಿಂದಾಗಿ 13 ಜಿಂಕೆಗಳು ಮೃತಪಟ್ಟಿವೆ.
ಆನೇಕಲ್, ಸೆ.20: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ(Bannerghatta Biological Park) ಜಿಂಕೆ(Deer) ಹಾಗೂ ಚಿರತೆ ಮರಿಗಳ(Leopard Cubs) ಸಾವು ಮುಂದುವರೆದಿದೆ. ಈ ವರೆಗೂ ಹದಿಮೂರು ಜಿಂಕೆಗಳ ದಾರುಣ ಸಾವಾಗಿದೆ. ತಿಂಗಳ ಹಿಂದೆಯಷ್ಟೇ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳನ್ನು ತರಲಾಗಿತ್ತು. ಆದರೆ ಈಗ ನಾನಾ ಕಾರಣದಿಂದಾಗಿ 13 ಜಿಂಕೆಗಳು ಮೃತಪಟ್ಟಿವೆ.
ಸರಿಯಾದ ರೀತಿಯಲ್ಲಿ ಆರೈಕೆ ಮಾಡದೆ ಜಿಂಕೆಗಳು ಸೊರಗಿದ್ದ ಹಿನ್ನೆಲೆ ಇದನ್ನು ಕಂಡ ಡಿಸಿಎಫ್ ಪ್ರಭಾಕರ್ ಅವರು ಜಿಂಕೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಿದ್ದರು. 37 ಜಿಂಕೆಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ಹತ್ತು ದಿನಗಳ ಕ್ವಾರೆಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ ಜಿಂಕೆಗಳು ಮೃತಪಡುತ್ತಿವೆ. ಕೆಲ ಜಿಂಕೆಗಳು ಹೃದಯಾಘಾತದಿಂದ ಮರಣ ಹೊಂದುತ್ತಿವೆ. ಇದುವರೆಗೂ 13 ಜಿಂಕೆಗಳು ಪ್ರಾಣ ಬಿಟ್ಟಿವೆ.
ಬನ್ನೇರುಘಟ್ಟದಲ್ಲಿ ಚಿರತೆ ಮರಿಗಳ ಸರಣಿ ಸಾವು
ಇನ್ನು ಮತ್ತೊಂದೆಡೆ ಕೆಲವು ದಿನಗಳ ಹಿಂದೆಯಷ್ಟೇ ಮಾರಕ ವೈರಸ್ನಿಂದಾಗಿ ಚಿರತೆ ಮರಿಗಳು ಮೃತ ಪಟ್ಟಿದ್ದವು. ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ನಡುವೆ ಏಳು ಚಿರತೆ ಮರಿಗಳು ವೈರಸ್‌ಗೆ ತುತ್ತಾಗಿ ಬಲಿಯಾಗಿವೆ. ಇದರ ಬೆನ್ನಲ್ಲೇ ಇದೀಗ ಜಿಂಕೆಗಳ ಸರಣಿ ಸಾವಾಗುತ್ತಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ಬಂಡೀಪುರ ಅರಣ್ಯ ಮುಂಚೂಣಿ ಸಿಬ್ಬಂದಿ ದಿನಾಚರಣೆ; ಇಂದು ಸಫಾರಿ ನಿರ್ಬಂಧ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಮರಿಗಳ ಸಾವಿಗೆ ಫೆಲೈನ್ ಪ್ಯಾನ್ ಲ್ಯುಕೋಪೆನಿಯಾ ಕಾರಣ ಎನ್ನಲಾಗಿದೆ. ಈ ವೈರಸ್ ಸಾಮಾನ್ಯವಾಗಿ ಬೆಕ್ಕುಗಳ ಮೂಲಕ ಹರಡುವ ವೈರಲ್ ಕಾಯಿಲೆಯಾಗಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ ಸುಮಾರು 25 ಮರಿಗಳಿದ್ದು ಅವುಗಳಲ್ಲಿ 15 ಚಿರತೆ ಮರಿಗಳಿಗೆ ಸೋಂಕು ಹರಡಿದೆ. ಮತ್ತು ಏಳು ವೈರಸ್‌ಗೆ ಬಲಿಯಾಗಿವೆ. ಅಲ್ಲದೆ ಒಂದು ಸಿಂಹದ ಮರಿಗೂ ಸೋಂಕು ತಗುಲಿದ್ದು, ಇದೀಗ ಅದು ಚೇತರಿಸಿಕೊಳ್ಳುತ್ತಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ ವಿ ಸೂರ್ಯ ಸೇನ್ ತಿಳಿಸಿದ್ದಾರೆ.
ಆಗಸ್ಟ್ 22 ರಂದು ಸಫಾರಿ ಪ್ರದೇಶಗಳಲ್ಲಿ ಮೊದಲ ಸೋಂಕಿನ ಪ್ರಕರಣ ವರದಿಯಾಗಿತ್ತು. ಮೃತ ಏಳು ಮರಿಗಳಲ್ಲಿ ನಾಲ್ಕು ಸಫಾರಿ ಪ್ರದೇಶದಲ್ಲಿದ್ದವು ಮತ್ತು ಮೂರನ್ನು ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿತ್ತು ಎಂದು ಸೂರ್ಯ ಸೇನ್ ಅವರು ಹೇಳಿದರು. ವೈರಸ್‌ಗೆ ಬಲಿಯಾದ ಮರಿಗಳು ಮೂರು ತಿಂಗಳಿಂದ ಒಂದು ವರ್ಷದೊಳಗಿನವು. ಆಶ್ಚರ್ಯವೆಂದರೆ, ಎಲ್ಲಾ ಮರಿಗಳಿಗೆ ಲಸಿಕೆ ಹಾಕಲಾಗಿತು. ಆದರೂ ವೈರಸ್‌ಗೆ ತುತ್ತಾಗಿವೆ. ಅಪರೂಪದ ಸಂದರ್ಭಗಳಲ್ಲಿ, ವ್ಯಾಕ್ಸಿನೇಷನ್ ವೈಫಲ್ಯವಾಗುತ್ತದೆ. ಲಸಿಕೆಯನ್ನು ನಿಷ್ಪರಿಣಾಮಕಾರಿಯನ್ನಾಗಿ ಮಾಡುವ ಮೂಲಕ ವೈರಸ್ ರೂಪಾಂತರಗೊಂಡಿರುವ ಸಾಧ್ಯತೆಯಿದೆ ಎಂದು ಸೂರ್ಯ ಸೇನ್ ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ