ಕರ್ನಾಟಕದಲ್ಲಿ ಮಳೆಯಿಂದಾಗಿ 13 ಜನರು ಸತ್ತಿದ್ದಾರೆ, ಈಗ ಇಂಥ ಸಂಭ್ರಮ ಬೇಕಿತ್ತೆ? ಕಾಂಗ್ರೆಸ್ಗೆ ರವಿಕುಮಾರ್ ಪ್ರಶ್ನೆ
ಇಂದು ರಾಜ್ಯದಲ್ಲಿ ಮಳೆಯಿಂದಾಗಿ 13 ಜನ ಸಾವನ್ನಪ್ಪಿದ್ದಾರೆ, ಸಾವಿರಾರು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಂದು ಸಂಭ್ರಮ ಆಚರಿಸಬೇಕಿತ್ತಾ ಎಂದು ಪ್ರಶ್ನಿಸಿದರು.
ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಿಂದಾಗಿ 13 ಜನ ಮೃತಪಟ್ಟಿದ್ದಾರೆ. ಮಳೆ, (rain) ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ನೆರವು ನೀಡಲಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನೀಡಿದರು. ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ಮಳೆಯಿಂದಾಗಿ ಸಾವಿರಾರರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ. ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮ ಆಚರಿಸಿಕೊಳ್ತಿದ್ದಾರೆ. ಜನ್ಮದಿನ ಮಾಡಿಕೊಳ್ಳಲಿ, ನಾನು ಶುಭ ಕೋರುತ್ತೇನೆ. ರಾಜ್ಯದಲ್ಲಿ ಈಗ ಸೂತಕದ ವಾತಾವರಣ ಇದೆ. ಈ ಸಂದರ್ಭದಲ್ಲಿ ಸಂಭ್ರಮ ಬೇಕಿತ್ತಾ ಎಂದು ರವಿಕುಮಾರ್ ಪ್ರಶ್ನಿಸಿದರು.
ನಾವು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜಿಸಿದ್ದೆವು. ಮಂಗಳೂರು ಘಟನೆ ನಡೆದ ಬಳಿಕ ರಾತ್ರಿ ಸುದ್ದಿಗೋಷ್ಟಿ ಕರೆದು ರದ್ದು ಮಾಡಿದೆವು. ಇಂದು 13ಜನ ಸಾವನ್ನಪ್ಪಿದ್ದಾರೆ, ಸಾವಿರಾರು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಂದು ಸಂಭ್ರಮ ಆಚರಿಸಬೇಕಿತ್ತಾ. ಅದನ್ನು ಸ್ವಲ್ಪ ಯೋಚಿಸಲಿ ಎಂದರು. ಬಿಜೆಪಿಗೆ ಪರ್ಯಾಯವಾಗಿ ಹಿಂದು ಸಂಘಟನೆ ಪಕ್ಷ ಕಟ್ಟುವ ವಿಚಾರ ಹಿನ್ನೆಲೆ ದೇಶದಲ್ಲಿ ಅನೇಕ ಪಕ್ಷಗಳು ಇವೆ. ಆದ್ರೆ ಪಕ್ಷ ಹೊಸದಾಗಿ ರಾಜ್ಯದಲ್ಲಿ ಕಟ್ಟುವ ವಿಚಾರ ನನ್ನ ಗಮನಕ್ಕೆ ಇಲ್ಲ. ಹೊಸ ಪಾರ್ಟಿ ಯಾರೇ ಮಾಡಿದ್ರೂ, ಅದರಲ್ಲಿ ಯಾರು ಇದ್ದಾರೆ, ಎಂಥವರು ಇದ್ದಾರೆ, ಅವರ ಯೋಜನೆ ಏನು ಇದೆಲ್ಲಾ ಮುಖ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ 75 ಲಕ್ಷ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಗುರಿ
ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ್’ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಕಾರ್ಯಕ್ರಮಗಳ ಭಾಗವಾಗಿ ದೇಶದ ಎಲ್ಲ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಭಾರತದ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಪಟಪಟಿಸುವ ನಿರೀಕ್ಷೆಯಿದ್ದು, ಕರ್ನಾಟಕದ 75 ಲಕ್ಷ ಮನೆಗಳ ಮೇಲೆ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸಲಾಗುವುದು ಎಂದು ಬಿಜೆಪಿ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.