
ಬೆಂಗಳೂರು, ನವೆಂಬರ್ 22: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿದ್ದ ಮೂರು ಶಿಶುಗಳಲ್ಲಿ ಎರಡು ಸಾವನ್ನಪ್ಪಿದ್ದು, ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಹೌದು…ಒಂದು ವಾರದ ಹಿಂದೆ ಮಲಬದ್ದತೆ ಕಾರಣದಿಂದ ಎಂಟು ತಿಂಗಳು ಗರ್ಭಿಣಿ ಐಶ್ವರ್ಯ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಎಡವಟ್ಟಿನಿಂದ ಹೊಟ್ಟೆಯಲ್ಲಿ ಎರಡೂ ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ಮುಮದುವರೆದಿದೆ.
ಐಶ್ವರ್ಯ ಅವರು ಮಲಬದ್ದತೆ, ಹೊಟ್ಟೆ ನೋವು ಎಂದು ವಾರದ ಹಿಂದೆ ವಾಣಿವಿಲಾಸ ಆಸ್ಪತ್ರೆ ಬಂದಿದ್ದು, ಈ ವೇಳೆ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿ ಕಳುಹಿಸಿದ್ದರು. ಆದರೆ ನೋವು ಕಡಿಮೆಯಾಗದೆ ಮತ್ತೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಚಿಕಿತ್ಸೆ ನೀಡಿದಾಗ ನಿನ್ನೆ (ನ.21) ಬೆಳಗ್ಗೆ ಮೂರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದರೆ, ಇಂದು (ನ.22) ಮತ್ತೊಂದು ಮಗು ಸಹ ಸಾವನ್ನಪ್ಪಿದ್ದು, ಇನ್ನೊಂದು ಮಗು ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಹೀಗಾಗಿ ಒಂದು ಮಗು ಆದರೂ ಬದುಕುತ್ತಾ ಎನ್ನುವ ಆತಂಕದಲ್ಲಿ ಐಶ್ವರ್ಯಾ ಕುಟುಂಬ ಇದೆ.
ನಿನ್ನೆ (ನ.21) ಅಪರೇಷನ್ ಮಾಡೋದಾಗಿ ಹೇಳಿ ಮಹಿಳೆಯನ್ನು ಉಪವಾಸ ಇರಿಸಿದ್ದರು. ಆದ್ರೆ, ರಾತ್ರಿ ಅಪರೇಷನ್ ಆಗಲ್ಲ ಎಂದು ಮುಂದೂಡಿದ್ದು, ಕೊನೆಗೂ ಇಂದು (ನ.22) ಬೆಳಗ್ಗೆ ವೈದ್ಯರು, ಐಶ್ವರ್ಯಾಗೆ ಸರ್ಜರಿ ಮಾಡಿದ್ದಾರೆ. ಸದ್ಯ ಜೀವನ್ಮರಣದ ನಡುವೆ ಹೋರಾಟ ನಡೆಸಿರುವ ಒಂದು ಮಗುವಾದರೂ ಬದುಕಲಿ ಎಂದು ಕುಟುಂಬಸ್ಥರ ಪ್ರಾರ್ಥನೆ.