ಚೆಕ್ಬೌನ್ಸ್ ಪ್ರಕರಣ: ಕೋರ್ಟ್ ಆದೇಶವನ್ನೇ ಧಿಕ್ಕರಿಸಿದ ಆರೋಪಿ ಜೈಲು ಪಾಲು
ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನವಾಗಿದ್ದ ವ್ಯಕ್ತಿಗೆ ಕೋರ್ಟ್ ಹಣ ಪಾವತಿ ಮಾಡುವಂತೆ ತಿಳಿಸಿ ಹೇಳಿ ಕಳುಹಿಸಿತ್ತು. ಆದ್ರೆ, ಆರೋಪಿ ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ನೀಡದೇ ಹಣ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಪೊಲೀಸರು ಮತ್ತೆಮ್ಮೊ ಆರೋಪಿಯನ್ನು ಬಂಧಿಸಿದ್ದು, ಇದೀಗ ಆರೋಪಿ ಜೈಲು ಪಾಲಾಗಿದ್ದಾನೆ. ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಫೆಬ್ರವರಿ 26): ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆಹಾರ ಉತ್ಪಾದನಾ ಕಂಪನಿಯೊಂದಕ್ಕೆ 7.5 ಲಕ್ಷ ರೂಪಾಯಿ ಮೋಸ ಮಾಡಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಸತ್ಯನಾರಾಯಣ ಎನ್ ಬಂಧಿತ ಆರೋಪಿ. ನ್ಯೂಟ್ರಿ ಫೀಡ್ಸ್ ಆ್ಯಂಡ್ ಫಾರ್ಮ್ಸ್ ಪ್ರೈ ಲಿ. ಕಂಪನಿಯಿಂದ ಕೋಳಿ ಮಾಂಸ ಖರೀದಿಸಿ ಅಂಗಡಿಗಳಿಗೆ ಸರಬರಾಜು ಮಾಡುವುದಾಗಿ ಹೇಳಿದ್ದ ಆರೋಪಿ ಸತ್ಯನಾರಾಯಣ, ಲೋಡ್ ತೆಗೆದುಕೊಂಡು ಹೋಗುವಾಗ ನೀಡಿದ್ದ ಚೆಕ್ ನೀಡಿದ್ದರು. ಆದ್ರೆ, ಖಾತೆಯಲ್ಲಿ ಹಣ ಇರದ ಕಾರಣ ಬೌನ್ಸ್ ಆಗಿತ್ತು. ಹಣ ಪಾವತಿಸುವಂತೆ ಕಂಪನಿ ಸೂಚನೆ ನೀಡಿದರೂ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಕೊನೆಗೆ ಕಂಪನಿ ಪ್ರತಿನಿಧಿಗಳು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು,
ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡ ಯಲಹಂಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಹಣ ಪಾವತಿ ಮಾಡುವಂತೆ ಸೂಚಿಸಿತ್ತು. ಆದರೂ ಆತ ಹಣ ನೀಡದೇ ಮೋಸ ಮಾಡಿದ್ದ.ಈ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದು, ಇದೀಗ ಹೆಚ್ಚುವರಿ ಮ್ಯಾಜಿಸ್ಟ್ರೇಜ್ ನ್ಯಾಯಾಲಯವು ಆರೋಪಿ ಸತ್ಯನಾರಾಯಣಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೋರ್ಟ್ ಹಣ ಪಾವತಿ ಮಾಡುವಂತೆ ಸೂಚಿಸಿದ್ದರೂ ಸಹ ಡೋಂಟ್ ಕೇರ್ ಎಂದಿದ್ದವ ಇದೀಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಯುವಕ ಆತ್ಮಹತ್ಯೆಗೆ ಯತ್ನ
ಮತ್ತೊಂದಡೆ ಪೊಲೀಸ್ ಠಾಣೆಯಲ್ಲಿ ಯುವಕನೋರ್ವ ಪಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿದೆ. ಸರಗಳ್ಳತನ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ರವಿ ಅಲಿಯಾಸ್ ರಾಬಿನ್ ಎನ್ನುವ ಯುವಕನನ್ನ ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ (ಫೆ.25) ರಾತ್ರಿಯಿಂದಲೇ ಯುವಕ ಪೊಲೀಸ್ ಕಸ್ಟಡಿಯಲ್ಲಿದ್ದ. ಆದ್ರೆ, ಇಂದು ಭಯಗೊಂಡು ಬಾತ್ರೂಮ್ ನಲ್ಲಿದ್ದ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಯುವಕನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಬಳಿಕ ಯುವಕನನ್ನ ಬಿಟ್ಟು ಕಳುಹಿಸಿದ್ದಾರೆ.




