
ಬೆಂಗಳೂರು, ಅಕ್ಟೋಬರ್ 03: ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (AI) ಈ ಯುಗದಲ್ಲೂ ಮಹಾತ್ಮಾ ಗಾಂಧೀಜಿಯವರ ತತ್ತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಎಂಬುದನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾಯಕದಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಹಿರಿಯ ಉಪನ್ಯಾಸಕಿ ಅಬಿದಾ ಬೇಗಂ ತೊಡಗಿಸಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಉಚಿತವಾಗಿ ಗಾಂಧೀಜಿ ಜೀವನ ಹಾಗೂ ವಿಚಾರಗಳ ಕುರಿತು ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿರುವ ಇವರು, ಒಂದೇ ಒಂದು ರೂಪಾಯಿ ಶುಲ್ಕ ಪಡೆಯದೆ ಕರ್ನಾಟಕದ 31 ಜಿಲ್ಲೆಗಳ 400ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ. ಗಾಂಧೀವಾದಿಯಾಗಿದ್ದ ತಮ್ಮ ತಂದೆ ಅಫ್ತಾಬ್ ಅಹಮದ್ ಖಾನ್ ಅವರಿಂದ ಪ್ರೇರಣೆ ಪಡೆದ ಇವರು, 2016ರಲ್ಲಿ ರಾಮನಗರದ ಕಾಲೇಜೊಂದರಲ್ಲಿ ಮೊದಲ ಬಾರಿಗೆ ಈ ಕಾರ್ಯಾಗಾರ ಆರಂಭಿಸಿದ್ದರು.
ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಸ್ವಾವಲಂಬನೆ ಹಾಗೂ ಅಹಿಂಸೆಯ ಮೌಲ್ಯಗಳನ್ನು ಮೂಡಿಸುವುದು ಇವರ ಮುಖ್ಯ ಉದ್ದೇಶ. “ಇಂದಿನ ಯುವಜನತೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಂಬಿ ಗಾಂಧೀಜಿಯವರ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಸತ್ಯಾಂಶ ಹಾಗೂ ಸೂಕ್ತ ಪುಸ್ತಕಗಳನ್ನು ಶಿಫಾರಸು ಮಾಡುವ ಮೂಲಕ ಅವರ ಗೊಂದಲ ನಿವಾರಿಸುತ್ತೇನೆ,” ಎನ್ನುತ್ತಾರೆ ಅಬಿದಾ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಎನ್‌ಎಸ್‌ಎಸ್ ಸಹಯೋಗದೊಂದಿಗೆ ‘ಗಾಂಧಿವಾದಿ ಆಲೋಚನೆಗಳ ಮೂಲಕ ಮಾನವೀಯ ಮೌಲ್ಯಗಳು’ ಎಂಬ ಏಳು ದಿನಗಳ ರಾಜ್ಯಮಟ್ಟದ ಯುವ ಶಿಬಿರಗಳನ್ನು ಇವರು ಆಯೋಜಿಸುತ್ತಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ, ಸಂವಹನ ಕೌಶಲ ಮತ್ತು ರಾಟೆಯಲ್ಲಿ ನೂಲು ತೆಗೆಯುವ ತರಬೇತಿ ನೀಡಲಾಗುತ್ತದೆ.
ಅಲ್ಲದೆ, ಮಹಾರಾಷ್ಟ್ರದ ಜಲಗಾಂವ್‌ನಲ್ಲಿರುವ ಗಾಂಧಿ ರಿಸರ್ಚ್ ಫೌಂಡೇಶನ್ ನಡೆಸುವ ‘ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆ’ಯ ರಾಜ್ಯ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ಈ ಪರೀಕ್ಷೆಗೆ ಉಚಿತ ಅಧ್ಯಯನ ಸಾಮಗ್ರಿ ನೀಡಲಾಗುತ್ತದೆ. ಈ ವರ್ಷ ನೋಂದಾಯಿಸಿಕೊಂಡಿದ್ದ 8000 ವಿದ್ಯಾರ್ಥಿಗಳಲ್ಲಿ 325 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Sat, 3 October 26