AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷ ಅಧಿಕಾರಿಯ ವಿರುದ್ಧ ರಾಜಕೀಯ ಆಟ ಸರಿಯೇ ? ಐಪಿಎಸ್ ಅಧಿಕಾರಿ ರಿಷ್ಯಂತ್ ವಿಚಾರದಲ್ಲಿ ಸತ್ಯದ ಮುಖಾಮುಖಿ

ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಪ್ರೋಟೋಕಾಲ್ ಪಾಲಿಸಿದ ದಕ್ಷ ಐಪಿಎಸ್ ಅಧಿಕಾರಿ ರಿಷ್ಯಂತ್ ವಿರುದ್ಧ ರಾಜಕೀಯ ದಾಳ ಉರುಳಿಸಲಾಗುತ್ತಿದೆಯೇ? ನಿಯಮ ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಯ ಪರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಪ್ರೋಟೋಕಾಲ್ ಪಾಲಿಸಿದ ಐಪಿಎಸ್ ಅಧಿಕಾರಿ ರಿಷ್ಯಂತ್ ವಿರುದ್ಧ ರಾಜಕೀಯ ದಾಳ ನಡೆದಿರುವುದು ಖಂಡನೀಯ. ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನಗಳು ಕೈಬಿಡಬೇಕು.

ದಕ್ಷ ಅಧಿಕಾರಿಯ ವಿರುದ್ಧ ರಾಜಕೀಯ ಆಟ ಸರಿಯೇ ? ಐಪಿಎಸ್ ಅಧಿಕಾರಿ ರಿಷ್ಯಂತ್ ವಿಚಾರದಲ್ಲಿ ಸತ್ಯದ ಮುಖಾಮುಖಿ
ಐಪಿಎಸ್ ಅಧಿಕಾರಿ ರಿಷ್ಯಂತ್
ರಾಮ್​, ಮೈಸೂರು
| Edited By: |

Updated on: Oct 23, 2026 | 2:31 PM

Share

ಮುಖ್ಯಾಂಶಗಳು

  • ಮೇಲಾಧಿಕಾರಿಗಳ ಆದೇಶದಂತೆ ರಿಷ್ಯಂತ್ ಶಿಷ್ಟಾಚಾರ ಪಾಲಿಸಿ ಕರ್ತವ್ಯ ನಿರ್ವಹಿಸಿದ್ದಾರೆ.
  • ದಕ್ಷ ಅಧಿಕಾರಿಯ ಮೇಲಿನ ರಾಜಕೀಯ ಆರೋಪಗಳು ಪೊಲೀಸ್ ಸಿಬ್ಬಂದಿಯ ಸ್ಥೈರ್ಯ ಕುಗ್ಗಿಸುತ್ತವೆ.
  • ನಂದಿಧ್ವಜ ಪೂಜೆ ವೇಳೆಯ ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಹೊರಬರಬೇಕಾಗಿದೆ.

ಪೊಲೀಸ್ ಇಲಾಖೆಯಲ್ಲಿ ಅಧಿಕಾರ, ಖಾಕಿ ಮತ್ತು ಕಾನೂನಿನ ಜೊತೆಗೆ ಮಾನವೀಯತೆಗೂ ಬೆಲೆ ಕೊಡುವ ಅಧಿಕಾರಿಗಳು ಅಪರೂಪ. ಅಧಿಕಾರದ ದರ್ಪ ತೋರದೆ, ಸಿಬ್ಬಂದಿಯನ್ನು ಗೌರವದಿಂದ ಕಾಣುತ್ತಾ, ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚುವ ಅಧಿಕಾರಿಗಳು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅಂತಹ ಅಧಿಕಾರಿಗಳ ಸಾಲಿನಲ್ಲಿ ಗುರುತಿಸಿಕೊಂಡವರು ಐಪಿಎಸ್ ಅಧಿಕಾರಿ ರಿಷ್ಯಂತ್.

ಆದರೆ, ದಕ್ಷ ಅಧಿಕಾರಿಗಳ ಸುತ್ತ ರಾಜಕೀಯ ಲೆಕ್ಕಾಚಾರಗಳು ಸುಳಿದಾಡಿದಾಗ ಸಹಜವಾಗಿಯೇ ಹಲವು ಪ್ರಶ್ನೆಗಳು ಮೂಡುತ್ತವೆ. ಒಬ್ಬ ಅಧಿಕಾರಿಯ ವಿರುದ್ಧ ಕೇಳಿ ಬರುವ ಆರೋಪಗಳ ಹಿಂದೆ ಇರುವ ವಾಸ್ತವವೇನು ? ಅವರ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆಯೇ ? ಅಥವಾ ರಾಜಕೀಯ ಬೆಳವಣಿಗೆಗಳ ನಡುವೆ ಅಧಿಕಾರಿಯ ವ್ಯಕ್ತಿತ್ವವೇ ಚರ್ಚೆಯ ವಿಷಯವಾಗುತ್ತಿದೆಯೇ ? ಇಂತಹ ಪ್ರಶ್ನೆಗಳಿಗೆ ಭಾವನೆಗಳಿಗಿಂತ ವಾಸ್ತವಾಂಶಗಳೇ ಉತ್ತರ ನೀಡಬೇಕು.

ದಕ್ಷತೆಯೇ ಶಾಪವೇ?

​ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಧೋರಣೆಗಳು ಇಂದು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮೈಸೂರು ಜಿಲ್ಲೆಯ ಎಸ್ ಪಿಯಾಗಿ ಜನಸ್ನೇಹಿ ಆಡಳಿತ ನೀಡಿದ್ದ, ಸಹೃದಯಿ ಅಧಿಕಾರಿ ರಿಷ್ಯಂತ್ ಅವರ ಹೆಸರನ್ನು ಈಗ ಅನಗತ್ಯ ವಿವಾದಗಳಿಗೆಳೆದು ತರಲಾಗುತ್ತಿದೆ. ಇತ್ತೀಚೆಗೆ ನಡೆದ ದಸರಾ ನಂದಿಧ್ವಜ ಸ್ತಂಭ ಪೂಜೆ ವೇಳೆ ಸಚಿವರು ಹಾಗೂ ಶಾಸಕರ ಪ್ರವೇಶದ ಕುರಿತು ಸೃಷ್ಟಿಯಾಗಿರುವ ವಿವಾದವು, ದಕ್ಷ ಅಧಿಕಾರಿಗಳ ಕಾರ್ಯವೈಖರಿಗೆ ಎದುರಾಗುತ್ತಿರುವ ಸವಾಲುಗಳ ಮುಖಾಮುಖಿಯಾಗಿದೆ.

ಸತ್ಯದ ಮರೆಯಲ್ಲಿರುವ ವಾಸ್ತವವೇನು ?

​ನಂದಿಧ್ವಜ ಸ್ತಂಭ ಪೂಜೆಯ ಸಂದರ್ಭದಲ್ಲಿ ಸಚಿವರನ್ನು ಶಾಸಕರನ್ನು ತಡೆಯಲಾಗಿದೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ, ಇಲ್ಲಿ ರಿಷ್ಯಂತ್ ಅಥವಾ ಸ್ಥಳದಲ್ಲಿದ್ದ ಯಾವುದೇ ಪೊಲೀಸ್ ಅಧಿಕಾರಿಗಳು ತಮ್ಮ ಸ್ವಯಂ ಇಚ್ಛೆಯಿಂದ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಸ್ಪಷ್ಟವಾಗುತ್ತದೆ. ಮೈಸೂರು ಭಾಗದಲ್ಲಿ ಎಸ್ ಪಿಯಾಗಿ ಸೇವೆ ಸಲ್ಲಿಸಿರುವ ರಿಷ್ಯಂತ್ ಅವರಿಗೆ ಘಟನೆಯಲ್ಲಿ ಚರ್ಚೆಗೆ ಬಂದಿರುವ ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಶಾಸಕರು ಮುಖ ಪರಿಚಯದವರೇ ಹಾಗೂ ಆಪ್ತರೇ ಆಗಿದ್ದಾರೆ. ಅದರಲ್ಲೂ ಮೈಸೂರು ಭಾಗದ ಎಲ್ಲಾ ಶಾಸಕರು ವೈಯಕ್ತಿಕವಾಗಿ ಅವರಿಗೆ ಪರಿಚಯವಿದ್ದಾರೆ. ಎಲ್ಲರನ್ನೂ ಗೌರವಿಸುವ ಅವರಿಗೆ ಜನ ಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯವಿತ್ತು.

ಹಿರಿಯ ಅಧಿಕಾರಿಗಳ ಸಮ್ಮುಖ ಮತ್ತು ಪ್ರೋಟೋಕಾಲ್

ಇನ್ನು ಈ ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಮಹಾನಿರ್ದೇಶಕರಾದ ಸಲೀಮ್ ಹಾಗು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಒಂದು ವೇಳೆ ರಿಷ್ಯಂತ್ ತಪ್ಪು ಮಾಡಿದ್ದರೆ ಅವರು ಅದನ್ನು ಅಲ್ಲಿಯೇ ತಮ್ಮ ಕಿರಿಯ ಅಧಿಕಾರಿಗೆ ಹೇಳುತ್ತಿದ್ದರು ಅಲ್ಲವೇ ? ಇಲ್ಲ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರತುಪಡಿಸಿ, ಭದ್ರತಾ ನಿಯಮಾವಳಿಗಳ ಅನ್ವಯ ನಿರ್ದಿಷ್ಟ ವ್ಯಕ್ತಿಗಳನ್ನು ಮಾತ್ರ ಒಳಗೆ ಬಿಡಬೇಕು ಎಂಬ ಸ್ಪಷ್ಟ ಮೇಲಾಧಿಕಾರಿಗಳ ಅಥವಾ ಸರ್ಕಾರದ ನಿಖರ ನಿರ್ದೇಶನವಿರಲೇಬೇಕು ಅಲ್ಲವೇ ? ಇಲ್ಲದಿದ್ದರೆ, ಕರ್ತವ್ಯನಿಷ್ಠ ಅಧಿಕಾರಿಯೊಬ್ಬರು ಅತಿಥಿಗಳನ್ನು ತಡೆಯುವ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ ಅಲ್ಲವೇ ? ಇದು ಒಬ್ಬ ಚಿಕ್ಕ ಮಗುವಿಗೂ ಅರ್ಥವಾಗುವ ವಿಚಾರ ಅಲ್ಲವೇ ? ಆದರೆ ಇದನ್ನು ಬಿಟ್ಟು ಅದು ಇದು ಅಂದ್ರೆ ಅದು ​ದಕ್ಷ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನವಾಗದೇ ಮತ್ತಿನ್ನೇನು ?

​ಒಬ್ಬ ಪ್ರಾಮಾಣಿಕ ಅಧಿಕಾರಿ ಸರ್ಕಾರದ ನಿಯಮಗಳು ಮತ್ತು ಹಿರಿಯ ಅಧಿಕಾರಿಗಳ ಆದೇಶದಂತೆ ತನ್ನ ಕರ್ತವ್ಯವನ್ನು ನಿರ್ವಹಿಸಿದಾಗ, ಆತನನ್ನು ನೇರವಾಗಿ ಗುರಿಯಾಗಿಸಿ ರಾಜಕೀಯ ದಾಳವಾಗಿ ಬಳಸುವುದು ಖಂಡನೀಯ. ರಿಷ್ಯಂತ್ ಅವರಂತಹ ದಕ್ಷ ಅಧಿಕಾರಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಇಂತಹ ಪ್ರಯತ್ನಗಳು ಇಡೀ ಪೊಲೀಸ್ ಇಲಾಖೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ​ಯಾರು ಈ ನಿರ್ದೇಶನವನ್ನು ನೀಡಿದ್ದರು ಅಥವಾ ಯಾವ ಶಿಷ್ಟಾಚಾರದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂಬ ಸತ್ಯವನ್ನು ಸಂಬಂಧಪಟ್ಟವರೇ ಮುಂದೆ ಬಂದು ಸ್ಪಷ್ಟಪಡಿಸಬೇಕು. ಅದನ್ನು ಬಿಟ್ಟು, ನಿಯಮ ಪಾಲಿಸಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡುವುದು ಅಥವಾ ಅನುಮಾನದ ದೃಷ್ಟಿಯಿಂದ ನೋಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ.

​ಸಮಾಜದ ಮೇಲಾಗುವ ಗಂಭೀರ ಪರಿಣಾಮ

​ಆಡಳಿತ ಯಂತ್ರದ ಬೆನ್ನೆಲುಬಾಗಿರುವ ಪ್ರಾಮಾಣಿಕ ಅಧಿಕಾರಿಗಳಿಗೆ ಈ ರೀತಿಯ ಮುಜುಗರ ಹಾಗೂ ಒತ್ತಡಗಳು ಎದುರಾದರೆ, ಮುಂದೊಂದು ದಿನ ರಿಷ್ಯಂತ್ ಅವರಂತಹ ಧೈರ್ಯಶಾಲಿ ಮತ್ತು ದಕ್ಷ ಅಧಿಕಾರಿಗಳೂ ಸಹ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಹಿಂಜರಿಯುವ ಅಥವಾ ಅಲಿಪ್ತವಾಗಿರುವ ಪ್ರಭುತ್ವದ ಮೆಚ್ಚುಗೆಗಾಗಿ ಮಾತ್ರ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಕಾನೂನು ಸುವ್ಯವಸ್ಥೆಗೆ ಹಾನಿಕಾರಕ.

ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಜಾರಿ ಮಾಡಿದ ಅಧಿಕಾರಿ ರಿಷ್ಯಂತ

ರಿಷ್ಯಂತ್ ಅವರು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಆದ್ಯತೆ ನೀಡಿದ್ದನ್ನು ಮರೆಯುವಂತಿಲ್ಲ. ಪೊಲೀಸ್ ಇಲಾಖೆಯ ಕೆಲಸದ ಒತ್ತಡ, ನಿರಂತರ ಕರ್ತವ್ಯ ಮತ್ತು ವೈಯಕ್ತಿಕ ಬದುಕಿನ ನಡುವಿನ ಸಂಘರ್ಷವನ್ನು ಅರ್ಥಮಾಡಿಕೊಂಡು, ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ವ್ಯವಸ್ಥೆ ಜಾರಿಗೊಳಿಸಿದ್ದ ಅವರ ಕ್ರಮ ಗಮನಾರ್ಹವಾಗಿತ್ತು. ಅದು ಸಹಾ ಸಾರ್ವಜನಿಕರ ಕೆಲಸಕ್ಕೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಂಡ ರೀತಿ‌ ನಿಜಕ್ಕೂ ಅದ್ಬುತ ಒಬ್ಬ ಠಾಣೆಯ ಇನ್ಸಪೆಕ್ಟರ್ ಅಥವಾ ಸಿಬ್ಬಂದಿ‌ ವಾರದ ರಜೆ ಪಡೆದರೆ ಪಕ್ಕದ ಠಾಣೆಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಬ್ಯಾಲೆನ್ಸ್ ಮಾಡಿದ ರೀತಿ ಸೂಪರ್ ಆಗಿತ್ತು. ಹಗಲು ರಾತ್ರಿ ಎನ್ನದೆ ಸಾರ್ವಜನಿಕರ ರಕ್ಷಣೆಗೆ ದುಡಿಯುವ ಪೊಲೀಸ್ ಸಿಬ್ಬಂದಿಗೂ ಕುಟುಂಬವಿದೆ, ವೈಯಕ್ತಿಕ ಬದುಕಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮನೋಭಾವ ಪ್ರತಿಯೊಬ್ಬ ಅಧಿಕಾರಿಯಲ್ಲೂ ಇರುವುದಿಲ್ಲ. ಸಿಬ್ಬಂದಿಯ ಮಾನಸಿಕ ನೆಮ್ಮದಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶಕ್ಕೂ ಮಹತ್ವ ನೀಡಿದ ಅಧಿಕಾರಿಯ ಆಡಳಿತದ ದೃಷ್ಟಿಕೋನವನ್ನು ಇಲ್ಲಿ ಸ್ಮರಿಸಬೇಕಿದೆ.

ಪ್ರತಿಯೊಬ್ಬ ಸಿಬ್ಬಂದಿಗೂ ಗೌರವ ನೀಡುತ್ತಿದ್ದ ಅಪರೂಪದ ಅಧಿಕಾರಿ.

ಅಧಿಕಾರಿಯೊಬ್ಬರ ನಿಜವಾದ ವ್ಯಕ್ತಿತ್ವ ಅವರು ತಮ್ಮ ಮೇಲಧಿಕಾರಿಗಳೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದರಲ್ಲಿ ಮಾತ್ರವಲ್ಲ, ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರಲ್ಲೂ ವ್ಯಕ್ತವಾಗುತ್ತದೆ. ರಿಷ್ಯಂತ್ ಅವರ ಬಗ್ಗೆ ವೈಯಕ್ತಿಕವಾಗಿ ಗಮನ ಸೆಳೆದ ಮತ್ತೊಂದು ಗುಣವೆಂದರೆ, ಪೊಲೀಸ್ ಸಿಬ್ಬಂದಿಯನ್ನು ಏಕವಚನದಲ್ಲಿ ಸಂಬೋಧಿಸದೆ ಬಹುವಚನದಲ್ಲಿ ಮಾತನಾಡಿಸುತ್ತಿದ್ದ ಅವರ ನಡೆ. ಹುದ್ದೆ ಮತ್ತು ಅಧಿಕಾರದ ಅಂತರವನ್ನು ಬದಿಗಿಟ್ಟು, ಪ್ರತಿಯೊಬ್ಬ ಸಿಬ್ಬಂದಿಗೂ ಗೌರವ ನೀಡುತ್ತಿದ್ದ ಅವರ ಈ ಗುಣ ಅಪರೂಪದ್ದು.

ಖಾಕಿ ತೊಟ್ಟ ಪ್ರತಿಯೊಬ್ಬರಿಗೂ ಸ್ವಾಭಿಮಾನವಿದೆ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ತೋರಿಸಿಕೊಡುವುದು ಸಣ್ಣ ವಿಚಾರವಲ್ಲ. ಮೇಲಾಧಿಕಾರಿಗಳಿಂದ ಸಿಗುವ ಗೌರವವು ಸಿಬ್ಬಂದಿಯ ಆತ್ಮವಿಶ್ವಾಸ ಮತ್ತು ಕರ್ತವ್ಯನಿಷ್ಠೆಯ ಮೇಲೂ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಂತಹ ನಡೆ ಉತ್ತಮ ಉದಾಹರಣೆ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ತಿಳಿಯದಂತೆ ನೋಡಿಕೊಂಡ ಸಹೃದಯಿ. ರಿಷ್ಯಂತ್ ಅವರ ವ್ಯಕ್ತಿತ್ವದ ಮತ್ತೊಂದು ಮುಖ ಅವರ ಮಾನವೀಯತೆ. ಸಂಕಷ್ಟದಲ್ಲಿದ್ದು ನೆರವು ಕೋರಿ ಬಂದವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡುತ್ತಿದ್ದ ಅವರು, ಅದನ್ನು ಪ್ರಚಾರದ ಸಾಧನವನ್ನಾಗಿ ಮಾಡಿಕೊಳ್ಳದೆ ಗೌಪ್ಯವಾಗಿ ನೆರವಾಗುತ್ತಿದ್ದರು ಎಂಬುದು ಅವರನ್ನು ಹತ್ತಿರದಿಂದ ಕಂಡವರ ಅಭಿಪ್ರಾಯ. ಸಹಾಯ ಮಾಡುವುದಕ್ಕಿಂತಲೂ, ನೆರವು ಪಡೆದವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ದೊಡ್ಡ ಗುಣ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ತಿಳಿಯಬಾರದು ಎಂಬ ಮಾತಿಗೆ ತಕ್ಕಂತೆ, ತಮ್ಮ ನೆರವಿನ ಬಗ್ಗೆ ಅನಗತ್ಯ ಪ್ರಚಾರವಾಗದಂತೆ ನೋಡಿಕೊಳ್ಳುತ್ತಿದ್ದ ಅವರ ನಡೆ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿ.

ಅಧಿಕಾರವೆಂದರೆ ಕೇವಲ ಆದೇಶ ನೀಡುವುದು, ಕಾನೂನು ಜಾರಿಗೊಳಿಸುವುದು ಮತ್ತು ಆಡಳಿತ ನಡೆಸುವುದಷ್ಟೇ ಅಲ್ಲ. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಮನಸು ಅಧಿಕಾರಿಯ ವ್ಯಕ್ತಿತ್ವದ ಭಾಗವಾಗಬೇಕು. ಈ ದೃಷ್ಟಿಯಿಂದ ರಿಷ್ಯಂತ್ ಅವರ ಮಾನವೀಯ ಗುಣಗಳನ್ನು ನಿರ್ಲಕ್ಷಿಸಲಾಗದು.

ವೈಯಕ್ತಿಕ ಅಭಿಪ್ರಾಯಗಳು ನ್ಯಾಯದ ಮಾನದಂಡವಾಗಬಾರದು

ಸಾರ್ವಜನಿಕ ಜೀವನದಲ್ಲಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಮೂಡುವುದು ಸಹಜ. ತಪ್ಪು ನಡೆದಿದ್ದರೆ ಕಾನೂನು ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸಬೇಕು. ಆದರೆ, ಆರೋಪ ಕೇಳಿಬಂದ ಮಾತ್ರಕ್ಕೆ ಯಾರನ್ನಾದರೂ ತಪ್ಪಿತಸ್ಥರೆಂದು ಪರಿಗಣಿಸುವುದು ನ್ಯಾಯಸಮ್ಮತವಲ್ಲ.

ವಿಶೇಷವಾಗಿ ಪೊಲೀಸ್ ಇಲಾಖೆಯಂತಹ ಸೂಕ್ಷ್ಮ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿಚಾರದಲ್ಲಿ, ಅವರ ವಿರುದ್ಧದ ಆರೋಪಗಳ ಸ್ವರೂಪ, ಲಭ್ಯವಿರುವ ಸಾಕ್ಷ್ಯಗಳು ಮತ್ತು ತನಿಖೆಯ ವಾಸ್ತವಾಂಶಗಳನ್ನು ಆಧರಿಸಿಯೇ ನಿರ್ಧಾರಕ್ಕೆ ಬರಬೇಕು. ರಾಜಕೀಯ ಬೆಳವಣಿಗೆಗಳು ಅಥವಾ ವೈಯಕ್ತಿಕ ಅಭಿಪ್ರಾಯಗಳು ನ್ಯಾಯದ ಮಾನದಂಡವಾಗಬಾರದು.

ರಿಷ್ಯಂತ್ ಅವರ ವಿಚಾರದಲ್ಲೂ ಇದೇ ತತ್ವ ಅನ್ವಯಿಸಬೇಕು. ರಾಜಕೀಯ ಗೇಮ್‌ಗಳಿಗಾಗಿ ಅಧಿಕಾರಿಯೊಬ್ಬರ ಪ್ರಾಮಾಣಿಕತೆಯನ್ನು ಬಲಿಪಶು ಮಾಡುವುದು ಸರಿಯಲ್ಲ. ತಪ್ಪಿತಸ್ಥರ ಅಥವಾ ನಿರ್ದೇಶನ ನೀಡಿದವರ ಸ್ಪಷ್ಟನೆ ಹೊರಬಂದು, ನೈಜ ಸತ್ಯ ಜನರಿಗೆ ತಿಳಿಯಬೇಕು. ಆಗ ಮಾತ್ರ ಅಧಿಕಾರಿಯ ಮಾನಸಿಕ ಸ್ಥೈರ್ಯ ಮರುಕಳಿಸಲು ಮತ್ತು ನಿರ್ಭೀತಿಯಿಂದ ಕಾನೂನು ಪಾಲಿಸಲು ಸಾಧ್ಯವಾಗುತ್ತದೆ. ದಸರಾ ನಂದಿಧ್ವಜ ಪೂಜೆಯ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ರಿಷ್ಯಂತ್ ಅವರ ಕ್ರಮ ಸರಿಯಿತ್ತೇ ಎಂಬುದನ್ನು ನಿರ್ಧರಿಸಬೇಕಾದದ್ದು ರಾಜಕೀಯ ಚರ್ಚೆಗಳಲ್ಲ. ಆ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿಯಮಗಳು ಮತ್ತು ಲಭ್ಯವಿರುವ ಸಾಕ್ಷ್ಯಗಳು. ಖಡಕ್ಕಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ ಅನ್ಯಾಯವಾಗಬಾರದು. ನ್ಯಾಯದ ತಕ್ಕಡಿಯಲ್ಲಿ ವ್ಯಕ್ತಿಗಳ ಪ್ರಭಾವವಲ್ಲ, ವಾಸ್ತವಾಂಶಗಳೇ ತೂಗಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More