AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪುಟ ಸಭೆಯಲ್ಲೂ ಸದ್ದು ಮಾಡಿದ ದರ್ಶನ್ ಆ್ಯಂಡ್ ಗ್ಯಾಂಗ್ ಕೃತ್ಯ: ಸಚಿವರಿಗೆ ಸಿಎಂ ಖಡಕ್​ ಎಚ್ಚರಿಕೆ

ಸ್ಯಾಂಡಲ್​ವುಡ್ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ನಿಂದ ದಾರುಣವಾಗಿ ಕೊಲೆಗೀಡಾದ ರೇಣುಕಾಸ್ವಾಮಿ ಪ್ರಕರಣ ತೀವ್ರ ಸ್ವೂರಪ ಪಡೆದುಕೊಂಡಿದ್ದು, ಇಂದು (ಜೂನ್ 20) ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಈ ಪ್ರಕರಣ ಸದ್ದು ಮಾಡಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಂಪುಟ ಸಭೆಯಲ್ಲೂ ಸದ್ದು ಮಾಡಿದ ದರ್ಶನ್ ಆ್ಯಂಡ್ ಗ್ಯಾಂಗ್ ಕೃತ್ಯ: ಸಚಿವರಿಗೆ ಸಿಎಂ ಖಡಕ್​ ಎಚ್ಚರಿಕೆ
ಸಿದ್ದರಾಮಯ್ಯ- ದರ್ಶನ್
ರಮೇಶ್ ಬಿ. ಜವಳಗೇರಾ
|

Updated on: Jun 20, 2024 | 5:22 PM

Share

ಬೆಂಗಳೂರು (ಜೂ.20): ದರ್ಶನ್‌ & ಗ್ಯಾಂಗ್‌ನಿಂದ ದಾರುಣವಾಗಿ ಕೊಲೆಗೀಡಾದ ರೇಣುಕಾಸ್ವಾಮಿ ವಿಚಾರ ಗುರುವಾರ ಕ್ಯಾಬಿನೆಟ್‌ ಸಭೆಯಲ್ಲೂ ಸದ್ದು ಮಾಡಿದೆ. ದರ್ಶನ್ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ನನ್ನ ಬಳಿ ಸುಳಿಯಬೇಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದಿನ ಸಭೆಯಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಿಂತ ಕ್ರೂರ ಕೃತ್ಯ ಮತ್ತೊಂದಿಲ್ಲ. ಯಾರೂ ಈ ವಿಚಾರದಲ್ಲಿ ನನ್ನ ಹತ್ತಿರ ಬರುವ ಕೆಲಸ ಮಾಡಬೇಡಿ. ಯಾರೂ ಒತ್ತಡ ಹಾಕುವುದಾಗಲಿ, ಮನವಿ ಮಾಡುವುದಕ್ಕಾಗಲೀ ಬರಬೇಡಿ. ಈ ಘಟನೆ ಎಂಥದ್ದು ಎಂದು ನಾನು ನೋಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಆ ಮೂಲಕ ದರ್ಶನ್ ಪರ ಲಾಬಿ ಮಾಡಲು ಮುಂದಾದ ಕೆಲ ಸಂಪುಟ ಸಹೋದ್ಯೋಗಿಗಳಿಗೆ ಖಡಕ್​ ಆಗಿ ಹೇಳಿದ್ದಾರೆ,

ಇನ್ನು ಪ್ರಕರಣದ ಕುರಿತು ಯಾರೂ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ. ಅನಗತ್ಯವಾಗಿ ಮಾತಿಗೆ ಸಿಲುಕಿಕೊಳ್ಳಬೇಡಿ. ಪರ – ವಿರೋಧ ಯಾವ ಚರ್ಚೆ ಕೂಡ ಬೇಡ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಕಿವಿ ಮಾತು ಹೇಳಿದ್ದಾರೆ. ಸಿದ್ದರಾಮಯ್ಯ ಖಡಕ್​ ಸೂಚನೆ ನಂತರ ಸಚಿವರು, ತುಟಿಕ್ ಪಿಟಿಕ್ ಎನ್ನದೇ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಎಸ್​ಪಿಪಿ ಬದಲಾವಣೆ ಇಲ್ಲ: ದರ್ಶನ್​ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಮಾತು

ಅದರಂತಹ ಕ್ರೂರತನ ನಾನು ನೋಡೇ ಇಲ್ಲ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲಿ ಸಿದ್ಧರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಪೊಲೀಸರು ತಮಗೆ ತೋರಿಸಿದ ದೃಶ್ಯಾವಳಿಯನ್ನೂ ಕೂಡ ಸಿಎಂ ಸಿದ್ಧರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ದೃಶ್ಯಗಳನ್ನು ತೋರಿಸಿದ ಬಳಿಕವೇ ಸಿಎಂ ಪ್ರಕರಣದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕೆಲಸ ಮಾಡಲು ಸೂಚನೆ ನೀಡಿದ್ದರು.

ದರ್ಶನ್‌ರನ್ನು ಬಂಧನ ಮಾಡುವ ಮುನ್ನ ಪೊಲೀಸ್‌ ಕಮೀಷನರ್‌ ದಯಾನಂದ್‌, ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಕೊಲೆಗೆ ಸಂಬಂಧಪಟ್ಟ ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಎಂಗೆ ತೋರಿಸಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ನೋಡಿದ ಸಿಎಂ, ಇವನು ಮನುಷ್ಯನಾ? ರಾಕ್ಷಸನಾ? ಯಾವುದೇ ಕಾರಣಕ್ಕೂ ದರ್ಶನ್‌ನ ಬಿಡಬೇಡಿ. ಆರೋಪಿಗಳು ಯಾರೆಲ್ಲಾ ಇದ್ದಾರೆ ಎಲ್ಲರನ್ನೂ ಒದ್ದು ಹೆಡೆಮುರಿ ಕಟ್ಟಿಒಳಗೆ ಕಳಿಸಿ ಎಂದು ಸಿಎಂ ಪೊಲೀಸರಿಗೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಸಿಕ್ಕ ಮರುದಿನವೇ ಪೊಲೀಸರು ಕಾರ್ಯಪ್ರವೃತ್ತರಾಗಿ ನಟ ದರ್ಶನ್‌ ಬಂಧನ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರ ಮಾಡಿದ್ದರು. ಅದೇ ದಿನವೇ ದರ್ಶನ್‌ ಬಂಧನವೂ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ