ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ, ಜಾತಿ ನಿಂದನೆ ಆರೋಪದಲ್ಲಿ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂಕಷ್ಟಕ್ಕೀಡಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗುವ ಲಕ್ಷಣ ಇದೆ. ಇದಕ್ಕೆ ಕಾರಣ, ಮುನಿರತ್ನ ಪ್ರತಿನಿಧಿಸುತ್ತಿರುವ ಆರ್ಆರ್ ನಗರದ ಕಾಮಗಾರಿ ಸಂಬಂಧ ಬಿಬಿಎಂಪಿ ತನಿಖೆಗೆ ಆದೇಶಿಸಿರುವುದು. ಆ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 25: ಅತ್ಯಾಚಾರ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರ್ಆರ್ ನಗರ ಕ್ಷೇತ್ರದಲ್ಲಿ 2020 ರಿಂದ 2022ರ ವರೆಗೆ ನಡೆದ ಕಾಮಗಾರಿಗಳ ತನಿಖೆಗೆ ಪಾಲಿಕೆ ಆದೇಶ ಹೊರಡಿಸಿದೆ. 2020 ಸೆಪ್ಟೆಂಬರ್ನಿಂದ 2022 ರ ಜುಲೈ 19ರ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
ಕಾಮಗಾರಿ ನಡೆಸದೇ ಈ ಅವಧಿಯಲ್ಲಿ ಬಿಲ್ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಇದೀಗ ಬಿಬಿಎಂಪಿ ಕಂದಾಯ ವಿಶೇಷ ಮುನೀಶ್ ಮೌದ್ಗಿಲ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೆಪ್ಟೆಂಬರ್ 23 ರಂದೇ ತನಿಖೆಗೆ ಆದೇಶ ಹೊರಡಿಸಿದ್ದರು. ಅದರ ಆಧಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ತನಿಖಾ ಸಮಿತಿಯಲ್ಲಿ ಯೋಜನೆ ವಿಶೇಷ, ಹಣಕಾಸು ವಿಶೇಷ ಆಯುಕ್ತರು, ಕ್ವಾಲಿಟಿ ಚೆಕ್ ಚೀಫ್ ಇಂಜಿನಿಯರ್ ಹಾಗೂ ಟಿವಿಸಿಸಿ ಚೀಫ್ ಇಂಜಿನಿಯರ್ ಒಳಗೊಂಡಿದ್ದಾರೆ.
ಇದನ್ನೂ ಓದಿ: ಮುನಿರತ್ನ ಬಂಧನ: ಗೃಹ ಸಚಿವರು ಪ್ಲ್ಯಾನ್ ಮಾಡಿ ಅರೆಸ್ಟ್ ಮಾಡಿಸಿದ್ದಾರೆ ಎಂದ ಅಶೋಕ್
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಆರೋಪದಲ್ಲಿ ಮುನಿರತ್ನ ಮೊದಲು ಜೈಲು ಪಾಲಾಗಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆಯೇ, ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದರು. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದರಿಂದ ಸದ್ಯ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ