ಬೆಂಗಳೂರಿನಲ್ಲಿ ಇಬ್ಬರು ಶಂಕಿತ ವ್ಯಕ್ತಿ ಉಗ್ರರ ಬಂಧನ ಕೇಸ್; ಅಖ್ತರ್ ಹುಸೇನ್ ಮೊಬೈಲ್ನಲ್ಲಿ ಸ್ಫೋಟಕ ಮಾಹಿತಿ ಲಭ್ಯ
ಶಂಕಿತ ಉಗ್ರ ಅಖ್ತರ್ ಮತ್ತು ಅವನ ಸಹಚರನ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿಗಳು ಕೂಡ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ವ್ಯಕ್ತಿ ಉಗ್ರರ (Suspected Terrorists) ಬಂಧನ ಕೇಸ್ ಹಿನ್ನೆಲೆ ಅಖ್ತರ್ ಹುಸೇನ್ ಮೊಬೈಲ್ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, 5-6 ಗ್ರೂಪ್ಗಳಲ್ಲಿ ಆರೋಪಿ ಅಖ್ತರ್ ಹುಸೇನ್ ಇದ್ದ ಎನ್ನಲಾಗುತ್ತಿದೆ. ಬಾಂಗ್ಲಾ, ಪಾಕ್, ಅಫ್ಘನ್, ಕಾಶ್ಮೀರದ ವ್ಯಕ್ತಿಗಳಿದ್ದ ಗ್ರೂಪ್ ಆಗಿದ್ದು, ಒಂದೊಂದು ಗ್ರೂಪ್ನಲ್ಲಿ 20-25 ಜನರು ಇರುವುದು ಪತ್ತೆಯಾಗಿದೆ. ಕೆಲ ದಾಖಲೆಗಳು ಮೊಬೈಲ್ನಲ್ಲಿ ಡಿಲೀಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಸೈಬರ್ ಎಕ್ಸ್ಪರ್ಟ್ಗಳ ಮೂಲಕ ಮತ್ತೊಂದಷ್ಟು ಡಾಟಾ ರಿಟ್ರೀವ್ ಮಾಡಲು ಸಿಸಿಬಿ ಟೀಮ್ ಯತ್ನಿಸುತ್ತಿದೆ. ತಲೆಮರೆಸಿಕೊಂಡಿದ್ದ ಅಸ್ಸಾಂ ಮೂಲದ ಶಂಕಿತ ಉಗ್ರ (Suspected Terrorist) ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ನಗರ ಅಪರಾಧ ದಳ ವಿಭಾಗದ ಪೊಲೀಸರು ಭಾನುವಾರ ರಾತ್ರಿ (ಜುಲೈ 24) 7 ಗಂಟೆ ವೇಳೆಯಲ್ಲಿ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ; ಅಧಿಕಾರಿಗಳಿಂದ ತೀವ್ರ ವಿಚಾರಣೆ
ತಿಲಕ್ ನಗರದ ಬಿಟಿಪಿ ಪ್ರದೇಶದಲ್ಲಿ ಕಟ್ಟಡವೊಂದರ ಮೂರನೇ ಮಹಡಿಯಲ್ಲಿದ್ದ ಕೋಣೆಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕೆಲ ಯುವಕರೊಂದಿಗೆ ಶಂಕಿತ ಉಗ್ರನೂ ವಾಸ್ತವ್ಯ ಹೂಡಿದ್ದ. ಖಚಿತ ಮಾಹಿತಿ ಮೇರೆಗೆ 30ಕ್ಕೂ ಹೆಚ್ಚು ಸಿಬ್ಬಂದಿಯಿದ್ದ ಸಿಸಿಬಿ ಪೊಲೀಸರ ತಂಡವು ದಾಳಿ ನಡೆಸಿತ್ತು. ಪ್ರಕರಣ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ
ಶಂಕಿತ ಉಗ್ರ ಅಖ್ತರ್ ಮತ್ತು ಅವನ ಸಹಚರನ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿಗಳು ಕೂಡ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇವು ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುವ ವ್ಯಕ್ತಿ ಕಳಿಸಿದ್ದ ದಾಖಲೆಗಳು ಎಂದು ಪೊಲೀಸರು ಹೇಳಿದ್ದಾರೆ. ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳು ಇವೆ. ಈ ಕುರಾನ್ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
ಸದ್ಯ ಸಿಸಿಬಿ ಪೊಲೀಸರು, ಆದಿಲ್ ಅಲಿಯಾಸ್ ಜುಬಾನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಅಖ್ತರ್ ಹುಸೇನ್ ಜೊತೆ ಆತನ ತಮ್ಮ ಕೂಡ ರೂಂನಲ್ಲಿ ವಾಸವಿದ್ದ. ಆತನನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ರೂಂನಲ್ಲಿ ಅಖ್ತರ್ ಜೊತೆಯಿದ್ದ ನಾಲ್ವರು ಯುವಕರನ್ನೂ ವಿಚಾರಣೆ ಮಾಡಿ ವಾಪಸ್ ಕಳಿಸಿದ್ದಾರೆ. ಸಿಸಿಬಿ ಅಧಿಕಾರಿ ನೀಡಿದ ದೂರಿನನ್ವಯ ಅಖ್ತರ್ ಹುಸೇನ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 123, 121, 120B ಹಾಗೂ ಐಪಿಸಿ ಸೆಕ್ಷನ್ 15, 16, 18 UAPA ಅಡಿ ಪ್ರಕರಣ ದಾಖಲಾಗಿದೆ.