
ಬೆಂಗಳೂರು, ನವೆಂಬರ್ 28: ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ 2000 ರೂ ಹೆಚ್ಚಿಸುವುದಾಗಿ ಒಪ್ಪಿಕೊಂಡಿದೆ. ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ಮಾಡಿ ಸದ್ಯಕ್ಕೆ 2000 ರೂ. ಹೆಚ್ಚಳ ಮಾಡುತ್ತೇವೆ. ಇನ್ನುಳಿದಿರುವುದನ್ನು ಬಜೆಟ್ನಲ್ಲಿ ಘೋಷಿಸಿಸುವುದಾಗಿ ಭರವಸೆ ನೀಡಿ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳಿಗೆ ಮನವೊಲಿಸಿದ್ದರು. ಆದ್ರೆ, ಇದೀಗ ಪ್ರತಿಭಟನೆ ನಿರತ ಆಶಾ ಕಾರ್ಯಕರ್ತೆಯರು ಇದಕ್ಕೆ ಸುತರಾಂ ಒಪ್ಪುತ್ತಿಲ್ಲ. ಹೀಗಾಗಿ ಫ್ರೀಡಂಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು,ಸಿಎಂ ಸಭೆಯ ತೀರ್ಮಾನಕ್ಕೆ ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ . ಆ ಕಾರಣಕ್ಕೆ ಸಂಘಟನೆಯ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ. ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಮುಂದುವರೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ನಮ್ಮ ಬೇಡಿಕೆ ಬಗ್ಗೆ ಲಿಖಿತ ರೂಪದಲ್ಲಿ ನಾವು ಕೇಳಿದ್ವಿ. ಲಿಖಿತ ರೂಪದಲ್ಲಿ ನಮಗೆ ಸ್ಪಷ್ಟ ಸಂದೇಶ ಬರುವವರೆಗೂ ಹೋರಾಟ ಮಾಡುತ್ತೇವೆ. ಯಾರೋ ಕೊಟ್ಟ ಹೂಗುಚ್ಛವನ್ನ ನಾವು ಸಿಎಂಗೆ ಕೊಟ್ಟಿದ್ದೇವೆ. ಕೆಲವು ತಪ್ಪು ಸಂದೇಶ ರವಾನೆಯಾಗಿದೆ. ನಾವು ಗುಟ್ಟಾಗಿ ಮಾಡುವಂತಹದ್ದು ಏನೂ ಇಲ್ಲ. ಕೆಲ ಆಶಾ ಕಾರ್ಯಕರ್ತೆಯರಿಗೂ ತಪ್ಪು ಸಂದೇಶ ಹೋಗಿದೆ. ನಾನು ತಪ್ಪು ಮಾಡಿದ್ರೆ ನಾಡಿನ ಜನತೆಗೆ ಕ್ಷಮೆ ಕೋರಲು ಸಿದ್ಧ. ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಕಣ್ಣೀರಿಟ್ಟರು.

ಗುಲಾಬಿ ಸೀರೆಯುಟ್ಟು ಒಗ್ಗಟ್ಟಿನಿಂದ ಆಶಾ ಕಾರ್ಯಕರ್ತೆಯರ ಹೋರಾಟ ಸಂಬಂಧ ಸಿಎಂ ಹಾಗೂ ಆರೋಗ್ಯ ಸಚಿವರು ಈ ಹಿಂದೆ ನಡೆಸಿದ ಸಂಧಾನಗಳು ವಿಫಲ ಆಗಿದ್ದವು. ಲಿಖಿತ ಆದೇಶದವರೆಗೂ ಹೋರಾಟ ಕೈಬಿಡಲ್ಲ ಅಂತಾ ಆಶಾ ಪಡೆ ಪಟ್ಟು ಹಿಡಿದಿತ್ತು. ಇದೇ ಹೋರಾಟ ಇಂದು 12 ದಿನಕ್ಕೆ ಕಾಲಿಟ್ಟಿತ್ತು. ಹೀಗಾಗಿ ಇಂದು ಮುಖ್ಯಮಂತ್ರಿಗಳೇ ಅಖಾಡಕ್ಕೆ ಇಳಿದು 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಆಶಾ ಮುಖಂಡರ ಜತೆ ಸಂಧಾನ ನಡೆಸಿದರು. ಸಿಎಂ ಮುಂದೆ ಸಂಘದ ಪ್ರತಿನಿಧಿಗಳು ತಲೆ ಆಡಿಸಿ ಬಂದರು. ಆದ್ರೆ, ಪ್ರತಿಭಟನೆ ನಿತರ ಕಾರ್ಯಕರ್ತೆಯರು ಮಾತ್ರ ಯಾವುದೇ ಕಾರಣಕ್ಕೂ ಒಪ್ಪಿಲ್ಲ. ಹೀಗಾಗಿ ಧರಣಿ ಮುಂದುವರೆಯಲಿದೆ.
ಒಟ್ಟಿನಲ್ಲಿ ಆರೋಗ್ಯ ಸಚಿವ ಖಾದರ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಮನವೊಲಿಕೆಗೂ ಬಗ್ಗದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಇನ್ನೇನು ಎಲ್ಲವೂ ಅಂತ್ಯವಾಯ್ತು ಎನ್ನುವಷ್ಟರಲ್ಲಿ ಸರ್ಕಾರಕ್ಕೆ ಮತ್ತೆ ಶಾಕ್ ಕೊಟ್ಟಿದ್ದಾರೆ.
Published On - 9:27 pm, Sat, 28 November 26