ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡಬಹುದು! ಭವಿಷ್ಯ ನುಡಿದ ಗೂಗಲ್ ಎಕ್ಸ್ ಸ್ಥಾಪಕ ಸೆಬಾಸ್ಟಿಯನ್ ಥ್ರನ್
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೂರನೇ ದಿನವಾದ ಗುರುವಾರ ಸಹ ಬಂಡವಾಳ ಹೂಡಿಕೆಯ ಮಹಾಪೂರವೇ ಹರಿದು ಬಂದಿದೆ. ಸಾವಿರಾರು ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿರುವ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು, ಗೂಗಲ್ ಎಕ್ಸ್‌ನ ಸೆಬಾಸ್ಟಿಯನ್ ಮಾತುಗಳು. ಏನದು ಎಂದು ತಿಳಿಯಲು ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 13: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಮೂರನೇ ದಿನವಾದ ಗುರುವಾರ ಅನೇಕ ಸೆಮಿನಾರ್‌ಗಳು, ಉದ್ಯಮಿಗಳ ಜೊತೆ ಸಂವಾದಗಳು, ವಿವಿಧ ಇಲಾಖೆಗಳ ಸಚಿವರ ಜೊತೆ ರೌಂಡ್ ಟೇಬಲ್‌ಗಳು ಸಹ ನಡೆದಿವೆ. ‘ಪ್ರವರ್ತಕ ಎಐ: ಅಮೋಘ ಕಲ್ಪನೆಯಿಂದ ನೈಜ ಪ್ರಭಾವದವರೆಗೆ’ ಎಂಬ ಗೋಷ್ಠಿಯಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ಥ್ರನ್ ಭಾಗವಹಿಸಿದ್ರು. ‘ಭವಿಷ್ಯದ ಹೆಜ್ಜೆ: ಸರಕು ಸಾಗಣೆ ಭವಿಷ್ಯ ರೂಪಿಸುತ್ತಿರುವ ನಾವೀನ್ಯತೆಗಳು’ ಎಂಬ ಗೋಷ್ಠಿಯಲ್ಲಿ ವೋಲ್ವೋ ಗ್ರೂಪ್‌ನ ಅಧ್ಯಕ್ಷ ಮಾರ್ಟಿನ್ ಲಾಂಡ್ಸ್‌ಟೆಡ್ಜ್ ಪಾಲ್ಗೊಂಡಿದ್ದರು.
‘ಭಾರತದ ಮುಂದಿನ ನಾವೀನ್ಯತೆಯ ಶಕ್ತಿಕೇಂದ್ರ: ಕ್ವಿನ್‌ಸಿಟಿ’ ಅಭಿವೃದ್ಧಿಗೆ ಕರ್ನಾಟಕದ ನೀಲನಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಖ್ಯಾತ ವೈದ್ಯ ಡಾ.ದೇವಿಪ್ರಸಾದ್ ಶೆಟ್ಟಿ ಭಾಗಿಯಾದರು. ಉದ್ಯಮ 5.0- ಮಾನವ ಕೇಂದ್ರಿತ ಕ್ರಾಂತಿಯಾಗಿ ತಯಾರಿಕಾ ವಲಯದ ಮರು ವ್ಯಾಖ್ಯಾನ ಕುರಿತ ಗೊಷ್ಠಿಯಲ್ಲಿ ಮಹಿಂದ್ರ ಗ್ರೂಪ್‌ನ ಎಐ ವಿಭಾಗದ ಸಿಇಓ ಭುವನ್ ಲೋಧಾ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು.
ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡಬಹುದು!
ಎಐ ಕ್ಷೇತ್ರದ ಅನಂತ ಸಾಧ್ಯತೆ ತೆರೆದಿಟ್ಟ ಗೂಗಲ್ ಎಕ್ಸ್‌ನ ಸೆಬಾಸ್ಟಿಯನ್, ಎಐ ಪ್ರಗತಿಯನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. 3 ವರ್ಷಕ್ಕೂ ಮೊದಲು ಚಾಟ್ ಜಿಪಿಟಿಯನ್ನು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಹಾಗೆಯೇ ಮುಂದಿನ 3 ವರ್ಷಗಳಲ್ಲಿ ಎಐ ಸ್ವರೂಪ ಹೇಗಿರುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ. ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡುವಂಥ ಸಾಧ್ಯತೆಯನ್ನು ಎಐ ಹೊತ್ತು ತರಬಹುದು ಎಂದರು.
ಸ್ವಯಂಚಾಲಿತ ಕಾರುಗಳು ಎಷ್ಟು ಸ್ವತಂತ್ರವಾಗಿವೆ ಎಂದರೆ, ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಮ್ಮ ಸಂಪೂರ್ಣ ಸ್ವಯಂಚಾಲಿತ ‘ವೇಮೋ’ ಕಾರು ಯಾರ ಮೇಲ್ವಿಚಾರಣೆಯೂ ಇಲ್ಲದೆ ಜನರನ್ನು ಓಡಾಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ ಎಂದರು.
ಈ ನಡುವೆ ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್ ಮೂಲದ ವೋಲ್ವೊ ಕಂಪನಿಯು ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 1,400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಅಂಕಿತ ಬಿದ್ದಿದೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನೆರವೇರಿದ್ದು ಒಡಂಬಡಿಕೆಗೆ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದ್ದಾರೆ.
ಸಮಾವೇಶದ ನೇತೃತ್ವ ವಹಿಸಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಇನ್ವೆಸ್ಟ್ ಕರ್ನಾಟಕದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದ್ದೇವೆ, ಅರ್ಥಪೂರ್ಣವಾಗಿ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯಕ್ಕೆ ಕೊಡುಗೆ ನೀಡಿದವರಿಗೆ ಪ್ರಶಸ್ತಿ ನೀಡಿದ್ದೇವೆ. ನೆನ್ನೆ ಆರೋಗ್ಯ ಸಂಬಂಧ ರೌಂಡ್ ಟೇಬಲ್‌ನಡೆಯಿತು. ಇವತ್ತು ಉನ್ನತ ಶಿಕ್ಷಣ ಕುರಿತು ರೌಂಡ್ ಟೇಬಲ್ ನಡೆದಿದೆ ಎಂದು ಹೇಳಿದರು.
ಸಂಜೆ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಭಾಗಿಯಾದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ಸಾಧನೆಗೈದವರಿಗೆ ಬೆಸ್ಟ್ ಫರ್‌ಫಾರ್ಮರ್ ಇನ್ ದ ಡಿಸ್ಟ್ರಿಕ್, ಸೆಕ್ಟರ್ ಎಕ್ಸೆಲೆನ್ಸ್ ಅವಾರ್ಡ್, ಔಟ್‌ಸ್ಟ್ಯಾಂಡಿಂಗ್ ವುಮೆನ್ ಎಂಟರ್‌ಪ್ರಿನರ್ ಅವಾರ್ಡ್, ಎಂಪರ್‌ಮೆಂಟ್ ಅಚೀವ್‌ಮೆಂಟ್ ಅವಾರ್ಡ್‌ಗಳನ್ನು ನೀಡಿ ಗೌರವಿಸಲಾಯಿತು.
ಪೈಲೆಟ್ ಇಲ್ಲದೆ ಶತ್ರು ದೇಶಕ್ಕೆ ನುಗ್ಗಲಿದೆ ಈ ಬಾಂಬರ್!
ಪೈಲೆಟ್ ಇಲ್ಲದೆ ಶತ್ರು ದೇಶಕ್ಕೆ ನುಗ್ಗಲಿದೆ ಬಾಂಬರ್ ಯುದ್ಧ ವಿಮಾನ. AI ತಂತ್ರಜ್ಞಾನ ಮೂಲಕ ಸಿದ್ದಪಡಿಸಿರುವ ಬಾಂಬರ್, ಮಾನವ ರಹಿತ FWD ಬಾಂಬರ್ ಯುದ್ಧ ವಿಮಾನ ಇದಾಗಿದೆ. ಒಮ್ಮೆ ಇಂಧನ ತುಂಬಿಸಿದ್ರೆ 24 ಗಂಟೆ ಕಾಲ 1500 ಕಿ.ಲೋ ಮೀಟರ್ ಸಂಚರಿಸಬಹುದು. ಇನ್ವೆಸ್ಟ್ ಕರ್ನಾಟಕದಲ್ಲಿ ಗಮನ ಸೆಳೆದ ಬಾಂಬರ್, ಭಾರತದ ಪ್ರಥಮ ಇಂಡೀಜಿನಿಯಸ್ – ಏರ್ ಕ್ರಾಫ್ಟ್ ಎಂಬ ಖ್ಯಾತಿ ಪಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಫೈಯಿಂಗ್ ವೆಡ್ಜ್ ಈ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಕಂಪನಿ ಸಹಯೋಗದೊಂದಿಗೆ ಬಾಂಬರ್ ತಯಾರಿಸಲಾಗಿದೆ. ಭದ್ರತೆ, ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದಾಗಿದೆ. ಇದು 6.5 ಮೀಟರ್ ಉದ್ದ ಇರುವ ಬಾಂಬರ್ 102 ಕೆ.ಜಿ ಭಾರ ಹೊರುತ್ತೆ. ಯುದ್ಧ ಸಂದರ್ಭ ಮಾತ್ರವಲ್ಲದೆ, ತುರ್ತು ಸ್ಥಿತಿಯಲ್ಲಿ ಅತಿವೇಗದಲ್ಲಿ ಔಷಧ ಸಾಗಾಟಕ್ಕೂ ಬಳಕೆಯಾಗಲಿದೆ. ಫೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೊಸ್ಪೇಸ್ ಕಂಪನಿಯೇ ತಯಾರಿಸಿದೆ. ಬಾಂಬರ್ ನ ಅಂತರರಾಷ್ಟ್ರೀಯ ಬೆಲೆ ಬರೋಬ್ಬರಿ 250 ಕೋಟಿ ರೂ. ಆದರೆ ಕರ್ನಾಟಕದ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿರುವುದರಿಂದ 25 ಕೋಟಿ ರೂ.ಗೆ ಇದರ ಬೆಲೆ. ಇದು ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು ಮತ್ತು ಗಂಟೆಗೆ 320 ಕಿ.ಮೀ. ವೇಗದಲ್ಲಿ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.
ಈ ನಡುವೆ ಹೊಸ ಹೊಸ ಆವಿಷ್ಕಾರಗಳನ್ನ ಅನಾವರಣಗೊಳಿಸಿರುವ ವಸ್ತುಪ್ರದರ್ಶನದಲ್ಲಿ ನ್ಯೂವ್ ಕಮ್ಯೂಟ್ ವೆಹಿಕಲ್ ಕಮಾಲ್ ಮಾಡುತ್ತಿತ್ತು. ಡ್ರೈವರ್ ಸಹಾಯವಿಲ್ಲದೆ ಸಂಚರಿಸುತ್ತೆ ಈ ನ್ಯೂವ್ ಕಮ್ಯೂಟ್, ಬೆಂಗಳೂರಿನ ಸೆಲ್ ಪ್ರೊಪಲ್ಷನ್ ಸಂಸ್ಥೆಯಿಂದ ಯುವಕರಿಂದಲೇ ಆವಿಷ್ಕಾರ ಕಂಡಿದೆ. ನೋಡೋಕೆ ಮೆಟ್ರೋ ರೈಲಿನ ಮಾದರಿ ಕಾಣುವ ನ್ಯೂವ್ ಕಮ್ಯೂಟ್ ವಾಹನ, ಹಾರಿಜಾಂಟಲ್ ಲಿಫ್ಟ್ ಅಂತಲೂ ಕರೆಯುತ್ತಾರೆ. ಗಾಜಿನ ಬಾಗಿಲಿನ ಮುಂಭಾಗ ನಿಂತರೆ ತಂತಾನೇ ಡೋರ್ ಓಪನ್ ಆಗುತ್ತೆ. ಮೆಟ್ರೋ ರೀತಿ ಹಳಿಗಳ ಮೇಲೆ ಸಂಚರಿಸು ವಿದ್ಯುತ್ ಚಾಲಿತ ವಾಹನ. ಒಮ್ಮೆ 6 ರಿಂದ 8 ಜನ ನ್ಯೂವ್ ಕಮ್ಯುಟ್ ವಾಹನದಲ್ಲಿ ತೆರಳಬಹುದು. ರೆಸ್ಟೋರೆಂಟ್, ಯೂನಿವರ್ಸಿಟಿ, ಹೋಟೆಲ್, ಏರ್ಪೋರ್ಟ್, ಐಟಿ ಕಂಪನಿಗಳ ಕಾರಿಡಾರ್, ದೊಡ್ಡ ಟೌನ್ ಶಿಫ್ಟ್ ಸೇರಿದಂತೆ. ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಹೋಗಲು ಇದನ್ನ ಸ್ಥಾಪನೆ ಮಾಡಬಹುದು.ಕೇಬಲ್ ಕಾರ್, ಮೆಟ್ರೋದ ಚಿಕ್ಕ ಭೋಗಿಯ ರೀತಿ ಕಾಣುತ್ತಿರುವ ವಾಹನ, ಸಂಪೂರ್ಣ ಹವಾನಿಯಂತ್ರಿತ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕದಲ್ಲಿ ಏರ್ ಟ್ಯಾಕ್ಸಿ ಅನಾವರಣ: 10 ನಿಮಿಷದಲ್ಲೇ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ
ಒಟ್ಟಾರೆ ಮೂರನೇ ದಿನವಾದ ಗುರುವಾರ ಭರಪೂರ ಹೂಡಿಕೆಯ ಜೊತೆಗೆ ಹಲವು ವಿಚಾರ ಸಂಕಿರಣಗಳು, ಸಂವಾದಗಳು, ರೌಂಡ್‌ಟೇಬಲ್‌ಗಳಿಗೆ ಇನ್ವೆಸ್ಟ್ ಕರ್ನಾಟಕಕ್ಕೆ ಸಾಕ್ಷಿಯಾಗಿದ್ದು, ಶುಕ್ರವಾರ ಅದ್ದೂರಿ ತೆರೆ ಬೀಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ