ಬೆಂಗಳೂರು: ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಜತೆ ಈಗ ಹೊಸದೊಂದು ಕಿರಿಕಿರಿ!
ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಸದಾ ಟ್ರಾಫಿಕ್ ಜಾಮ್ ಗೊಳು ಇದ್ದಿದ್ದೇ. ಆದರೆ, ಇದೀಗ ಸಂಚಾರ ದಟ್ಟಣೆ ಸಮಸ್ಯೆ ಜತೆಗೆ ಹೊಸದೊಂದು ಸೇರಿಕೊಂಡಿದೆ. ಜಯನಗರ, ಜೆಪಿ ನಗರ ವ್ಯಾಪ್ತಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ವಾಹನ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾದರೆ ಏನದು ಸಮಸ್ಯೆ? ತಿಳಿಯಲು ಮುಂದೆ ಓದಿ.
ಬೆಂಗಳೂರು, ಜುಲೈ 4: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಸಮಸ್ಯೆ ಇದ್ದಿದ್ದೇ. ಇದರ ನಡುವೆ ಇದೀಗ ಬೀದಿ ದನಗಳಿಂದಾಗಿ ವಾಹನ ಸವಾರರು ರೋಸಿ ಹೋಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಅತ್ತ ಟ್ರಾಫಿಕ್ ಪೊಲೀಸರು ಕೂಡ ಬೀದಿ ದನಗಳ ನಿಯಂತ್ರಣಕ್ಕೆ ಪಾಲಿಕೆಗೆ ಪತ್ರ ಬರೆದಿದ್ದಾರೆ.
ಈ ಬೀದಿ ಬದಿಯ ದನಗಳು ರಾಜಾರೋಷವಾಗಿ ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ಹೇಗೆ ಬೇಕೊ ಹಾಗೇ ಓಡಾಡುವುದರಿಂದ, ಮಲಗುವುದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನ ಸವಾರರು ರಸ್ತೆಯಲ್ಲಿ ಓಡಾಡಲು ಕೂಡ ಭಯ ಪಡುವಂತಾಗಿದೆ. ಈ ದನಗಳಿಗೆ ಯಾರು ಇಲ್ಲ ಅಂತ ಅಲ್ಲ, ಇವುಗಳಿಗೆ ಮಾಲೀಕರು ಕೂಡ ಇದ್ದಾರೆ. ಅವರು ಅವುಗಳನ್ನ ಲಂಗು ಲಗಾಮು ಇಲ್ಲದ ಹಾಗೇ ಬಿಟ್ಟು ಬಿಡುತ್ತಾರೆ. ಇದರಿಂದ ದನಗಳು ಆಹಾರ ಅರಸಿ ಮಾರುಕಟ್ಟೆ ಪ್ರದೇಶ, ಸಾರ್ವಜನಿಕರು ಕಸ ಎಸೆಯುವಂತಹ ಪ್ರದೇಶಗಳಲ್ಲಿ ಓಡಾಡುವುತ್ತವೆ.
ರಸ್ತೆಯಲ್ಲಿ ಓಡಾಡುವ ದನಗಳು ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುವುದಲ್ಲದೇ ಇನ್ನಿತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ವಾಹನ ಸವಾರ ಮಹೇಶ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯನಗರ ವ್ಯಾಪ್ತಿಯಲ್ಲಿ ಅಪಘಾತ ಹೆಚ್ಚಳ, ದನಗಳೇ ಕಾರಣ
ಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ಹೆಚ್ಚುತ್ತಿರುವುದರಿಂದ ಪೊಲೀಸರಿಗೆ ಟೆನ್ಷನ್ ಹೆಚ್ಚಾಗಿದೆ. ಈ ಬಗ್ಗೆ ತಲೆ ಕೆಡಿಸಿಕೊಂಡು ರಹಸ್ಯ ಭೇದಿಸಲು ಹೊರಟ ಸಂಚಾರಿ ಪೊಲೀಸರಿಗೆ ಕಂಡಿದ್ದು ದನಗಳ ಕಾಟದ ದೃಶ್ಯ. ರಸ್ತೆಯಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಸವಾರರಿಗೆ ತೊಂದರೆಗಳಾಗುತ್ತಿವೆ. ದನಗಳ ಕಾಟ ತಪ್ಪಿಸಲು ಹೋಗಿ ಚಾಲಕರು, ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಇಂತಹ ಬಿಡಾಡಿ ದನಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವಂತೆ ಜಯನರ ಟ್ರಾಫಿಕ್ ಇನ್ಸೆಕ್ಟರ್ ಪತ್ರ ಮೂಲಕ ಬಿಬಿಎಂಪಿ ಮುಖ್ಯ ಪಶು ವೈಧ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಬೆಲೆ ಹೆಚ್ಚಳಕ್ಕೆ ಕಡಿವಾಣ; ಡೆಂಗ್ಯೂ ಪರೀಕ್ಷೆಗೆ ದರ ನಿಗದಿಗೊಳಿಸಿದ ರಾಜ್ಯ ಸರ್ಕಾರ
ಟ್ರಾಫಿಕ್ ಸಮಸ್ಯೆ ಮಧ್ಯೆ ಬಿಬಿಎಂಪಿ ಅಧಿಕಾರಿಗಳ ಜಾಣಕುರುಡುತನದಿಂದ ಬೀದಿ ಬದಿಯ ದನಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯಲ್ಲಿ ಓಡಾಡುವ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ