ಎಟಿಎಂ ಕಾರ್ಡ್​ ವಂಚನೆ ಬಯಲಿಗೆಳೆದ ಬೆಂಗಳೂರು ಪೊಲೀಸರು: ಮೂವರ ಬಂಧನ, 69 ಕಾರ್ಡ್​ಗಳು ವಶಕ್ಕೆ

ಎಟಿಎಂ ಬಗ್ಗೆ ಹೆಚ್ಚು ಗೊತ್ತಿಲ್ಲದ ಅಥವಾ ಹಣ ಡ್ರಾ ಮಾಡಲು ಒದ್ದಾಡುತ್ತಿರುವವರನ್ನೇ ಗುರಿಯಾಗಿಸಿ ವಂಚನೆ ಎಸಗುವ ಜಾಲವನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಶಿವಮೊಗ್ಗದವನಾದರೆ ಇನ್ನಿಬ್ಬರು ಬಿಹಾರ ಮೂಲದವರಾಗಿದ್ದಾರೆ. ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂ ಕಾರ್ಡ್​ ವಂಚನೆ ಬಯಲಿಗೆಳೆದ ಬೆಂಗಳೂರು ಪೊಲೀಸರು: ಮೂವರ ಬಂಧನ, 69 ಕಾರ್ಡ್​ಗಳು ವಶಕ್ಕೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Aug 07, 2024 | 8:11 AM

ಬೆಂಗಳೂರು, ಆಗಸ್ಟ್ 7: ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎಟಿಎಂ ಬಳಕೆದಾರರಿಗೆ ವಂಚನೆ ಮಾಡುತ್ತಿದ್ದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ, ಎಟಿಎಂ ಬಳಕೆದಾರರನ್ನು ವಂಚಿಸಲು ಬೆಂಗಳೂರಿಗೆ ಬಂದಿದ್ದ ಶಿವಮೊಗ್ಗ ನಿವಾಸಿ “ದಡಿಯಾ ದಿಲೀಪ್” ಎಂದು ಕರೆಯಲ್ಪಡುವ ಸಾಗರ್ ಅಲಿಯಾಸ್ ದಿಲೀಪ್​​ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಪ್ರಸ್ತುತ ನಗರದೊಳಗೆ ಕನಿಷ್ಠ ಮೂರು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ.

ಸಾಗರ್ ಎಟಿಎಂ ಕಿಯೋಸ್ಕ್‌ಗಳ ಹೊರಗೆ ಅಡ್ಡಾಡುತ್ತಿದ್ದ. ಹಣವನ್ನು ಹಿಂಪಡೆಯಲು ಹೆಣಗಾಡುತ್ತಿರುವ ಬಳಕೆದಾರರನ್ನು ಗಮನಿಸುತ್ತಿದ್ದ. ನಂತರ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಕಾರ್ಡ್ ತೆಗೆದುಕೊಂಡು ಗೊತ್ತಾಗದಂತೆ ಅದರ ಬದಲು ಬೇರೆ ಕಾರ್ಡ್ ಸ್ವೈಪ್ ಮಾಡಿ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ ಸಾಗಹಾಕುತ್ತಿದ್ದ. ಬಳಿಕ ಎಟಿಎಂ ಕಾರ್ಡ್​ನಿಂದ ಹಣ ದೋಚುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಬೇಗೂರು ಪೊಲೀಸರು ಎಟಿಎಂ ಕಿಯೋಸ್ಕ್‌ನ ಹೊರಗೆ ಕಾಯುತ್ತಿದ್ದಾಗ ಸಾಗರ್​​ನನ್ನು ಬಂಧಿಸಿದ್ದಾರೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಆತನ ಬಳಿಯಿಂದ ಸದ್ಯ ಸ್ಥಗತಗೊಂಡಿರುವ 32 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ್ ಆಗಾಗ ಬೆಂಗಳೂರಿಗೆ ಬರುತ್ತಿದ್ದು, ಒಂದೆರಡು ದಿನ ಇಲ್ಲಿದ್ದು, ವಂಚನೆ ಕೃತ್ಯ ಎಸಗಿದ ಬಳಿಕ ಶಿವಮೊಗ್ಗಕ್ಕೆ ತೆರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಾರಪೇಟೆ ಹಾಗೂ ಚಂದ್ರಾ ಲೇಔಟ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲೂ ಈತ ಶಾಮೀಲಾಗಿದ್ದಾನೆ.

ಮತ್ತೊಂದು ಘಟನೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಎಟಿಎಂ ಬಳಕೆದಾರರನ್ನು ವಂಚಿಸಲು ಇದೇ ವಿಧಾನವನ್ನು ಬಳಸಿಕೊಂಡ ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನು ಕೊಂದು ಫೇಸ್‌ಬುಕ್‌ ಲೈವ್‌ ಮಾಡಿದ್ದ ಕ್ರೂರ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಸಾವು

ಶಂಕಿತ ಆರೋಪಿಗಳಾದ ವಿವೇಕ್ ಕುಮಾರ್ (28) ಮತ್ತು ಚುನಿಲಾಲ್ ಕುಮಾರ್ (24) ಇಬ್ಬರೂ ಬಿಹಾರ ಮೂಲದವರಾಗಿದ್ದಾರೆ. ಅವರ ಬಳಿಯಿದ್ದ 37 ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ