ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ: ಸಿಕ್ಕಿಬಿದ್ದ ಅಪ್ರಾಪ್ತ ವಿದ್ಯಾರ್ಥಿ, ಚುರುಕುಗೊಂಡ ತನಿಖೆ
ರಾಜಾಜಿನಗರದ ಎನ್ಪಿಎಸ್ ಶಾಲೆಗೆ ನಿನ್ನೆ(ಜ.6) ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಇದೀಗ ಬೇರೆ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಯಿಂದ ಸಂದೇಶ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ರಾಜಾಜಿನಗರದ ಎನ್ಪಿಎಸ್ ಶಾಲೆಗೆ ನಿನ್ನೆ(ಜ.6) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು, ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಬೇರೆ ಶಾಲೆಯ ವಿದ್ಯಾರ್ಥಿ ಗೂಗಲ್ ಮೂಲಕ ಎನ್ಎಎಫ್ಎಲ್ ಶಾಲೆಯ ಐಡಿಯನ್ನ ಪಡೆದು ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಿರುವ ಅಂಶ ಪತ್ತೆಯಾಗಿದೆ. ಯಾಕೆ ಬೆದರಿಕೆ ಸಂದೇಶ ಕಳುಹಿಸಿದ್ದ ಎಂಬುದರ ಬಗ್ಗೆ ಬಸವೇಶ್ವರನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಶಾಲೆ ಆವರಣದಲ್ಲಿ 4 ಜಿಲೆಟಿನ್ ಕಡ್ಡಿ ಇಟ್ಟಿರುವುದಾಗಿ ಇ-ಮೇಲ್ ಮಾಡಿದ್ದ ವಿದ್ಯಾರ್ಥಿ, ಬೆಳಗ್ಗೆ 11.30 ಕ್ಕೆ ಮೇಲ್ ನೋಡಿದ ಶಾಲೆ ಸಿಬ್ಬಂದಿ, ತಕ್ಷಣ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಬಾಂಬ್ ಪತ್ತೆ ದಳ, ಶ್ವಾನ ದಳದಿಂದ ಶಾಲೆಯಲ್ಲಿ ಪರಿಶೀಲನೆ ನಡೆಸಿ, ತಪಾಸಣೆ ನಂತರ ಹುಸಿ ಬೆದರಿಕೆ ಇ-ಮೇಲ್ ಎಂಬುದು ದೃಢವಾಗಿದ್ದು, ಈ ಬಗ್ಗೆ ಪಶ್ಚಿಮ ವಿಭಾಗ ಪೊಲೀಸರು ತನಿಖೆ ಮುಂದುವರಿಸಿದ್ದರು.
ಬೆಂಗಳೂರಿನಲ್ಲಿ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾಲೀಕತ್ವದ ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಪೊಲೀಸರ ತನಿಖೆ ವೇಳೆ ಅದೇ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದು ಗೊತ್ತಾಗಿತ್ತು. ಮೇಲ್ ಬಂದ ಐಪಿ ಅಡ್ರೆಸ್ ಜಾಡು ಹಿಡಿದು ವಿದ್ಯಾರ್ಥಿಯ ಕಿಡಿಗೇಡಿತನವನ್ನು ಪೊಲೀಸರು ಪತ್ತೆ ಮಾಡಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ