TV9 Digital Exclusive: ಜನರ ನೀರಿನ ಹಣವನ್ನು ನುಂಗಿದ ಬೆಂಗಳೂರು ಜಲಮಂಡಳಿಯ ಭ್ರಷ್ಟ ಅಧಿಕಾರಿಗಳ ಕರ್ಮಕಾಂಡ ಬಯಲು
ನೋಟ್ ಬ್ಯಾನ್ ಹಾಗೂ ಕೋವಿಡ್ ಅನ್ನು ಬಂಡವಾಳ ಮಾಡಿಕೊಂಡ ಬೆಂಗಳೂರು ಜಲಮಂಡಳಿಯ ಭ್ರಷ್ಟ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಟಿ9 ಡಿಜಿಟಲ್ ಕನ್ನಡ ಬಟಾಬಯಲು ಮಾಡಿದೆ. ಬಿಡಬ್ಲ್ಯೂಎಸ್ಎಸ್ ನೌಕರರು ಹೇಗೆಲ್ಲಾ ಹಣ ಲಪಟಾಯಿಸುತ್ತಿದ್ರು? ಸಾರ್ವಜನಿಕರ ನೀರಿನ ಬಿಲ್ನಲ್ಲಿ ಹೇಗೆಲ್ಲಾ ಕಳ್ಳಾಟವಾಡಿದ್ರು ಎನ್ನುವ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.
ಗೆಜೆಟೆಡ್ ಅಧಿಕಾರಿಗಳ ಅಮಾನತ್ತಿನೊಂದಿಗೆ ಬೆಂಗಳೂರು ಜಲಮಂಡಳಿಯಲ್ಲಿ ನಡೆದಿದೆ ಎನ್ನಲಾದ ಕರ್ಮಕಾಂಡ ಹೊರಗೆ ಬಂತು ಎಂದರೂ, ಇದು ಇಂದಿಗೂ ನಿಂತಿಲ್ಲ. ಅಷ್ಟೇ ಅಲ್ಲ, ಕಳೆದ ಇಪ್ಪತ್ತು ವರ್ಷಗಳಿಂದ ಈ ಸ್ಕ್ಯಾಮ್ ನಡೆದಿರಬಹುದು ಎಂದು ಬಿಡ್ಲುಎಸ್ಎಸ್ಬಿ ಮೂಲಗಳಿಂದ ತಿಳಿದಿದೆ. ನಿನ್ನೆ (ಜ.3) ರಂದು ಬೆಂಗಳೂರು ಜಲಮಂಡಳಿ ಗುತ್ತಿಗೆ ನೌಕರರ ವಂಚನೆ ಪತ್ತೆಹಚ್ಚಲು ವಿಫಲರಾದ 13 ಗೆಜೆಟೆಡ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಈ ಪ್ರಕರಣದ ಜಾಡನ್ನು ಬೆನ್ನಹತ್ತಿದ ಟಿವಿ9 ಡಿಜಿಟಲ್ಗೆ ಬೆಂಗಳೂರು ಜಲಮಂಡಳಿಯಲ್ಲಿನ (Bangalore Water Supply and Sewerage Board-BWSSB) ಭ್ರಷ್ಟಾಚಾರದ ಕರ್ಮಕಾಂಡ ಬಟಾ ಬಯಲಾಗಿದೆ. ಮೇಲ್ ಅಧಿಕಾರಿಗಳ ನಿರ್ಲಕ್ಷ್ಯ, ಕೆಳ ಹಂತದ ಕಾರ್ಮಿಕರ ಹಣದ ಚಪಲದಿಂದ ಬೆಂಗಳೂರು ಜನರು ರೋಸಿ ಹೋಗಿದ್ದಾರೆ.
ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಸರ್ಕಾರದ ಮಟ್ಟದಲ್ಲಿ ಎಲ್ಲ ಇಲಾಖೆಗಳಲ್ಲೂ ವೆಚ್ಚವನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಕೆಲವು ಹುದ್ದೆಗಳನ್ನು (ಜವಾಬ್ದಾರಿಗಳು ಇಲ್ಲದಂಥದ್ದು) ಹೊರಗುತ್ತಿಗೆ ನೀಡಲಾಗುತ್ತಿದೆ. ಇದೆಲ್ಲ ಆರಂಭವಾದದ್ದು 2005ರ ಸುಮಾರಿಗೆ. ಆರಂಭದಲ್ಲಿ ಆಯೋಗದ ಶಿಫಾರಸಿನಂತೆಯೇ ಹೆಚ್ಚಿನ ಜವಾಬ್ದಾರಿಗಳಿಲ್ಲದ ಕೆಲಸಗಳನ್ನು ಮಾತ್ರ ಹೊರಗುತ್ತಿಗೆ ನೀಡಲಾಗುತ್ತಿತ್ತು. ನಾನಾ ಕಾರಣಗಳಿಗಾಗಿ ಸರ್ಕಾರದ ಮಟ್ಟದಲ್ಲಿ ನೇಮಕಾತಿ ವಿಳಂಬ ಆಗುತ್ತಾ ಬಂದಿದ್ದರಿಂದ ಅಧಿಕಾರಿಗಳು ಕೆಲಸದ ಒತ್ತಡದ ಕಾರಣಕ್ಕೆ ಹೊರಗುತ್ತಿಗೆ ನೌಕರರನ್ನೇ ಜವಾಬ್ದಾರಿಯುತ ಕೆಲಸಗಳಿಗೆ ಬಳಸಿಕೊಳ್ಳುವುದಕ್ಕೆ ಆರಂಭಿಸುತ್ತಾರೆ. ಹೀಗೆ ಹೆಚ್ಚಿನ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸುತ್ತಾ ಹಣಕಾಸಿನ ನಿರ್ವಹಣೆ (ಆದಾಯ ಹಾಗೂ ವೆಚ್ಚ ಎರಡೂ) ಸಹ ಹೊರಗುತ್ತಿಗೆ ನೌಕರರು ಮಾಡಲು ಆರಂಭಿಸುತ್ತಾರೆ. ಈ ಹಂತದಲ್ಲಿ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿ ಮಧ್ಯೆ ಕೆಲಸದ ಜತೆಗೆ ಅವಲಂಬನೆ, ಬಾಂಧವ್ಯ ಎರಡೂ ಬೆಳೆಯುತ್ತದೆ.
ಆರಂಭದಲ್ಲೇ ಹೇಳಿದಂತೆ ಹೊಸದಾಗಿ ನೇಮಕಾತಿ ಆಗದ ಕಾರಣಕ್ಕೆ ನಿವೃತ್ತಿ ಅಂಚಿನಲ್ಲಿ ಇರುವ ಅಧಿಕಾರಿಗಳಿಗೆ ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವುದು ರೇಜಿಗೆ, ಕಲಿಯುವುದು ಹಿಂಸೆ ಅನಿಸಲು ಆರಂಭವಾಗಿ, ಆಡಳಿತಾತ್ಮಕ ಕೆಲಸದಲ್ಲಿ ಬಳಕೆ ಆಗುವಂಥ ಕಂಪ್ಯೂಟರ್‌ಗೆ ಸಂಬಂಧಿಸಿದ ಕೆಲಸಗಳನ್ನು ಸಹ ಈ ಹೊರಗುತ್ತಿಗೆ ಸಿಬ್ಬಂದಿಗೆ ನಿರ್ವಹಿಸುವುದಕ್ಕೆ ಆರಂಭಿಸುತ್ತಾರೆ. ಇಲ್ಲಿ ಮತ್ತೊಂದು ಮುಖ್ಯ ವಿಚಾರ ಈ ಪ್ರಕರಣಕ್ಕೆ ಕಾರಣವಾಗಿದ್ದು, ಖಾಯಂ ಸಿಬ್ಬಂದಿಗಿಂತ ಹೆಚ್ಚಾಗಿ ಅಧಿಕಾರಿಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಮೇಲೆ ವಿಶ್ವಾಸ-ನಂಬಿಕೆ ಜಾಸ್ತಿ ಆಗುತ್ತದೆ. ಏಕೆಂದರೆ, ಕಾಯಂ ನೌಕರರಿಗಿಂತ ಈ ಹೊರಗುತ್ತಿಗೆ ಸಿಬ್ಬಂದಿ ಏನಿದ್ದಾರೋ ಅವರು ಅಧಿಕಾರಿಗಳ ಜತೆಗೆ ಹೆಚ್ಚು ವಿನಯ-ವಿಧೇಯತೆಯಿಂದ ನಡೆದುಕೊಳ್ಳುತ್ತಾರೆ. ಜತೆಗೆ ತಮ್ಮ ನೌಕರಿಯಲ್ಲಿ ಅಭದ್ರತೆಯ ಕಾರಣಕ್ಕೆ ಅಧಿಕಾರಿಗಳೊಂದಿಗೆ ಅನುಕೂಲವಾಗಿ ವರ್ತಿಸುತ್ತಾರೆ. ಈ ಹಂತದಲ್ಲಿ ಜವಾಬ್ದಾರಿಗಳಿಲ್ಲದ ಕೆಲಸ ಮಾತ್ರ ಗುತ್ತಿಗೆ ನೌಕರರಿಗೆ ನೀಡಬೇಕು ಎಂಬ ಶಿಫಾರಸು ಪಕ್ಕಕ್ಕೆ ಸರಿದುಹೋಗುತ್ತದೆ.
ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿ ಏಕೆ ಹೆಚ್ಚು ಆಕರ್ಷಣೀಯ ಅನ್ನೋದಿಕ್ಕೆ ಒಂದು ಆರೋಪ ಕೇಳಿಬರುತ್ತಿದೆ. ಅದೇನೆಂದರೆ, ಹೊರಗುತ್ತಿಗೆ ಎಂದು ಏಜೆನ್ಸಿಗಳ ಮೂಲಕ ನೇಮಕಾತಿ ಮಾಡಿಕೊಳ್ಳುವಾಗ ಆ ಸಿಬ್ಬಂದಿಗೆ, ಅಂದರೆ ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ವೇತನದಲ್ಲಿ ಏಜೆನ್ಸಿಗೆ ಐದರಿಂದ ಏಳು ಸಾವಿರ ರೂಪಾಯಿ (ಒಬ್ಬ ನೌಕರನಿಂದ) ಆದಾಯ ಆಗುತ್ತದೆ. ಇದನ್ನು ಹೆಚ್ಚುವರಿ ಕಮಾಯಿ ಅಂತಲೇ ಅಂದುಕೊಳ್ಳಬಹುದು. ಇನ್ನು ಹೀಗೆ ಬಂದ ಹಣದಲ್ಲಿ ದೊಡ್ಡ ಮೊತ್ತವು ಜಲಮಂಡಳಿ ಅಧಿಕಾರಿಗಳಿಗೆ (ಆಯಾ ಹುದ್ದೆಗೆ ತಕ್ಕಂತೆ ಸಂದಾಯ ಆಗುತ್ತದೆ) ತಲುಪುತ್ತದೆ ಎಂಬುದು ಆರೋಪ. ಇನ್ನು ಮಂಜೂರಾದ ಹುದ್ದೆಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ನೌಕರರನ್ನು ನೇಮಿಸಿಕೊಂಡು, ಪೂರ್ತಿ ಮೊತ್ತವನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದು, ಇಎಸ್‌ಐ, ಪಿಎಫ್ ಮೊತ್ತವೂ ಜಮೆ ಮಾಡದೆ ಅದರಲ್ಲೂ ಹಣ ವಂಚನೆ ಆಗುತ್ತಿದೆ ಹಾಗೂ ಇದನ್ನು ತನಿಖೆ ಮಾಡಿದರೆ ಇನ್ನೊಂದು ದೊಡ್ಡ ಹಗರಣ ಆಗುತ್ತದೆ ಎನ್ನಲಾಗುತ್ತಿದೆ.
ಈ ಎಲ್ಲ ಕಾರಣಗಳಿಗೆ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯನ್ನೇ ಆದ್ಯತೆ ಮೇಲೆ ಮಾಡಲಾಗುತ್ತಿದೆ. ಇವರಿಗೆ ಉತ್ತರದಾಯಿತ್ವ ಇಲ್ಲ, ಹೆಚ್ಚಿನ ಜವಾಬ್ದಾರಿ ನೀಡಬಾರದು ಎಂದಿದ್ದರೂ ಹಣಕಾಸಿನ ವ್ಯವಹಾರವನ್ನೂ ಇವರಿಗೆ ನೀಡಿರುವುದು ಇವತ್ತಿನ ಜಲಮಂಡಳಿ ಹಗರಣ ಎದ್ದು ನಿಲ್ಲುವುದಕ್ಕೆ ದೊಡ್ಡ ಕೊಡುಗೆ ನೀಡಿದೆ. ಹೊರಗುತ್ತಿಗೆ ಎಂಬುದು ಇಲ್ಲಿಗೇ ನಿಲ್ಲುವುದಿಲ್ಲ, ಬಿಲ್ಲಿಂಗ್ ಹಾಗೂ ಜಲಮಂಡಳಿಯ ಸಾಫ್ಟ್‌ವೇರ್ ನಿರ್ವಹಣೆಯನ್ನೂ ಎನ್‌ಸಾಫ್ಟ್ ಎಂಬ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ. ಮತ್ತು ವಿಚಿತ್ರ ಏನೆಂದರೆ, ಪ್ರತಿ ಬಾರಿಯೂ ಇದೇ ಕಂಪನಿಗೆ ಗುತ್ತಿಗೆ ದೊರೆಯುತ್ತದೆ ಎಂಬುದು ಮತ್ತೊಂದು ಪ್ರಮುಖ ಆರೋಪ.
ಏನಿದು ಈಗಿನ ಜಲಮಂಡಳಿ ಹಗರಣ?
ನೋಟು ನಿಷೇಧದ ಸಂದರ್ಭದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ನೋಟುಗಳು ಬರುತ್ತವೆ. ಆ ವೇಳೆ ನೋಟುಗಳನ್ನು ಸ್ವೀಕಾರ ಮಾಡುವಂತ ಎಟಿಎಂಗಳು ಸಿದ್ಧವಿರುವುದಿಲ್ಲ. ಆ ಕಾರಣಕ್ಕೆ ಮ್ಯಾನ್ಯುಯಲ್ ಆಗಿಯೇ ಹಣ ಪಡೆದು, ಆ ನಂತರ ಉಪವಿಭಾಗ ಮಟ್ಟದ ಎಇಇ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್) ಹಾಗೂ ರೆವಿನ್ಯೂ ಮ್ಯಾನೇಜರ್ ಈ ಎರಡು ಹುದ್ದೆಯಲ್ಲಿ ಇರುವಂಥವರು ತಮ್ಮ ಬಳಿ ಇರುವ ಪಾಸ್‌ವರ್ಡ್ ಬಳಸಿ, ಕಂಪ್ಯೂಟರೈಸ್ಟ್ ಲೆಡ್ಜರ್‌ಗೆ ಎಂಟ್ರಿ ಮಾಡಬೇಕಿರುತ್ತದೆ. ಇದಕ್ಕೆ ಆರ್‌ಬಿಐಟಿ (ರೆವಿನ್ಯೂ ಬಿಲ್ಲಿಂಗ್ ಇನ್‌ಫರ್ಮೇಷನ್ ಟೆಕ್ನಾಲಜಿ) ಅವಕಾಶ ನೀಡುತ್ತದೆ. ನಿಮಗೆ ನೆನಪಿರಲಿ, ಇದೊಂದು ತಾತ್ಕಾಲಿಕ ವ್ಯವಸ್ಥೆ ಆಗಿರಬೇಕಿತ್ತು. ನೋಟು ನಿಷೇಧದ ಎಲ್ಲ ಸವಾಲು ಮುಗಿದ ನಂತರದಲ್ಲಿ ಈ ವ್ಯವಸ್ಥೆ ಕೊನೆಗೊಳ್ಳಬೇಕಿತ್ತು. ಆದರೆ ಇದು ಆರ್‌ಬಿಐಟಿ ಕಡೆಯಿಂದ ಆನಂತರ ಈ ಬಗ್ಗೆ ಬದಲಾವಣೆಯ ಸೂಚನೆ ಬರಲಿಲ್ಲವೋ ಅಥವಾ ಜಲಮಂಡಳಿಯ ಸಂಬಂಧ ಪಟ್ಟ ಅಧಿಕಾರಿಗಳೇ ಗಮನ ನೀಡಲಿಲ್ಲವೋ ಈ ವ್ಯವಸ್ಥೆಯು ಮುಂದುವರಿಯುತ್ತದೆ.
2016ರ ನವೆಂಬರ್ ಹೊತ್ತಿಗೆ ಬಂದಂಥ ಈ ವ್ಯವಸ್ಥೆ ಬದಲಾಗದೆ ಉಳಿದಿದ್ದರಿಂದ ಆಡಿಟಿಂಗ್ (ಲೆಕ್ಕ ಪರಿಶೋಧನೆ) ವೇಳೆ ಆಗಿರುವ ವಂಚನೆ ಬಯಲಿಗೆ ಬಾರದೆ ಉಳಿದುಹೋಯಿತು. ಆರ್‌ಬಿಐಟಿ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿದರೆ ಅದು ತಮಾಷೆ ಎನಿಸುತ್ತದೆ. ಅದನ್ನು ಉದಾಹರಣೆ ಸಹಿತ ವಿವರಿಸುವುದಾದರೆ, ಒಬ್ಬ ವ್ಯಕ್ತಿ ಸೇವಾ ಠಾಣೆಗಳಲ್ಲಿ ಅಳವಡಿಸಿರುವ ಎಟಿಎಂನಲ್ಲಿ ಬಿಲ್ ಕಟ್ಟುತ್ತಾರೆ ಅಂದುಕೊಳ್ಳಿ. ಆ ಹಣ ಅಥವಾ ಚೆಕ್ ಅಥವಾ ಡಿಡಿ ಸಂಗ್ರಹಿಸಿ, ಆ ನಂತರ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. ಆ ನಂತರ ಜಮೆ ಆದ ಹಣದ ವಿವರಗಳನ್ನು ಆರ್‌ಆರ್ ನಂಬರ್ ಹಾಗೂ ಮೊತ್ತದ ಸಹಿತ ಪೆನ್‌ಡ್ರೈವ್‌ಗೆ ಕಾಪಿ ಮಾಡಿಕೊಂಡು, ಉಪವಿಭಾಗ ಮಟ್ಟದ ಕ್ಯಾಷಿಯರ್ ಸರ್ವರ್‌ಗೆ ಅಪ್‌ಲೋಡ್ ಮಾಡುತ್ತಾರೆ. ಆದರೆ ಮ್ಯಾನ್ಯುಯಲ್ ಆಗಿ ಸಂಗ್ರಹ ಮಾಡಿದರಲ್ಲ, ಅಂದರೆ ಎಇಇ ಹಾಗೂ ರೆವಿನ್ಯೂ ಮ್ಯಾನೇಜರ್‌ಗಳ ಸಹಾಯಕರು (ಹೊರಗುತ್ತಿಗೆ ಸಿಬ್ಬಂದಿ) ಅದನ್ನು ಮ್ಯಾನ್ಯುಯಲ್ ಆಗಿ ಸರ್ವರ್‌ಗಳಿಗೆ ಎಂಟ್ರಿ ಮಾಡಿದ್ದಾರೆ ವಿನಾ ಹಣವನ್ನು ಬ್ಯಾಂಕ್‌ಗೆ ಕಟ್ಟುವುದೇ ಇಲ್ಲ.
ಈ ಹಂತದಲ್ಲಿ ಪ್ರಶ್ನೆಗಳು ಉದ್ಭವಿಸುತ್ತದೆ, ಹಾಗಿದ್ದರೆ ಈ ಮೊತ್ತದ ಆಡಿಟಿಂಗ್ ಆಗಿಲ್ಲವಾ? ಎಇಇ, ರೆವಿನ್ಯೂ ಮ್ಯಾನೇಜರ್ ಹಾಗೂ ಆರ್‌ಬಿಐಟಿ ಗಮನಕ್ಕೆ ಬಂದಿಲ್ಲವಾ? ಪ್ರತಿ ತಿಂಗಳು ಜಲಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಉಪವಿಭಾಗಗಳ ಎಇಇಗಳು ಮತ್ತು ಮೇಲ್ಮಟ್ಟದ ಅಧಿಕಾರಿಗಳ ಜತೆ ಡಿಸಿಬಿ (ಡಿಮ್ಯಾಂಡ್ ಕಲೆಕ್ಷನ್ ಬ್ಯಾಲೆನ್ಸ್) ಸಭೆ ನಡೆಯುತ್ತದೆ. ಈ ಸಭೆ ನಡೆಯುವುದೇ ಜಲಮಂಡಳಿಯಲ್ಲಿನ ಲೆಕ್ಕಾಚಾರಗಳ ಪರಿಶೀಲನೆಗಾಗಿ. ಆದರೆ ಇದು ಅಧ್ಯಕ್ಷರೂ ಸೇರಿದಂತೆ ಯಾರ ಗಮನಕ್ಕೂ ಬರಲಿಲ್ಲವಾ? ಅದಕ್ಕೆ ಉತ್ತರವನ್ನು ಎಇಇ ಹಾಗೂ ರೆವಿನ್ಯೂ ಮ್ಯಾನೇಜರ್ ಮತ್ತು ಅದಕ್ಕಿಂತ ಮೇಲ್ಮಟ್ಟದ ಅಧಿಕಾರಿಗಳು ನೀಡಬೇಕು.
ಸಾಲು ಸಾಲು ಲೋಪ
ಮೊದಲನೆಯದಾಗಿ ನೋಟು ನಿಷೇಧದ ಅವಧಿಯಲ್ಲಿ ತಂದ ವ್ಯವಸ್ಥೆ 6 ವರ್ಷಗಳ ತನಕ ಮುಂದುವರಿದಿದೆ. ಜವಾಬ್ದಾರಿಯುತವಾದ ಕೆಲಸಗಳನ್ನು ಹೊರಗುತ್ತಿಗೆ ಸಿಬ್ಬಂದಿಗೆ ನೀಡಲಾಗಿದೆ. ಎಇಇ ಹಾಗೂ ರೆವಿನ್ಯೂ ಮ್ಯಾನೇಜರ್ ಬಳಿ ಮಾತ್ರ ಇರಬೇಕಾದ ಪಾಸ್‌ವರ್ಡ್ ಹೊರಗುತ್ತಿಗೆ ಸಿಬ್ಬಂದಿಗೆ ನೀಡಲಾಗಿದೆ. ಸರಿ, ಅದಾದ ಮೇಲೆ ಆಡಿಟಿಂಗ್ ಮಾಡುವಾಗ ಕಂಡುಬರಬೇಕಿತ್ತು. ಆದರೆ ಅಲ್ಲೂ ಸಹ ತಾತ್ಕಾಲಿಕ ವ್ಯವಸ್ಥೆ ಎಂದು ಹೊಸ ಕಾಲಂ ತೆರೆದು, ಅದು ಆಡಿಟಿಂಗ್ ಆಗಿಯೇ ಇಲ್ಲ.
ವಂಚನೆ ಹೇಗೆ ಆಗಿದೆ?
ಒಬ್ಬ ಗ್ರಾಹಕರು ತಮ್ಮ ಬಿಲ್‌ನ ಮೊತ್ತ ತಂದು ಕಟ್ಟಿದ್ದಾರೆ. ಆ ಮೊತ್ತವನ್ನು ತೆಗೆದುಕೊಂಡ ಸಿಬ್ಬಂದಿ ಅದನ್ನು ತಾವೇ ಬಳಸಿಕೊಂಡಿದ್ದಾರೆ. ಆ ನಂತರ ಸಾಫ್ಟ್‌ವೇರ್‌ನಲ್ಲಿ ಮೊತ್ತ ಬಂದಿದೆ ಎಂದು ಎಂಟ್ರಿ ಆಗಿದೆ. ಆದರೆ ಗ್ರಾಹಕರಿಗೆ ರಸೀದಿ ಮಾತ್ರ ಕೊಟ್ಟಿಲ್ಲ. ಹೀಗೆ ಪ್ರತಿ ತಿಂಗಳ ರಸೀದಿಯಲ್ಲಿ ಮಾತ್ರ ಆಗಿದೆಯೋ ಅಥವಾ ಜಲ ಮಂಡಳಿಯ ಇತರ ಆದಾಯ ಮೂಲವಾದ ಪ್ರೊರೇಟಾ ಶುಲ್ಕ ವಸೂಲಿಯಲ್ಲೂ (ಇದು ಸಾವಿರಾರು- ಲಕ್ಷಾಂತರ ರೂಪಾಯಿ ಒಂದೊಂದು ಕಟ್ಟಡಕ್ಕೆ ಬರುತ್ತದೆ) ಆಗಿದೆಯೋ ಎಂಬ ಬಗ್ಗೆ ತನಿಖೆ ಕೂಡ ಶುರು ಮಾಡಿದಂತೆ ಕಾಣುತ್ತಿಲ್ಲ.
ಹಗರಣ ಬಯಲಿಗೆ ಬಿದ್ದಿದ್ದು ಹೇಗೆ?
ಈ ಹಿಂದೆ ಉದಾಹರಣೆ ನೀಡಿದಂತೆ, ಗ್ರಾಹಕರೊಬ್ಬರು ಬಿಲ್ ಮೊತ್ತ ಕಟ್ಟಿದ್ದಾರೆ, ಆದರೆ ಅವರು ಎಷ್ಟು ಬಾರಿ ಕೇಳಿದರೂ ರಸೀದಿ ನೀಡಿಲ್ಲ. ಆಗ ಅನುಮಾನಗೊಂಡ ಅವರು ಮೇಲಧಿಕಾರಿಗಳಿಗೆ ದೂರು ನೀಡಿದಾಗ ಈ ಹಗರಣ ಬೆಳಕಿಗೆ ಬಂದಿದೆ ಎಂಬುದು ನೌಕರರ ವಲಯದಿಂದಲೇ ಕೇಳಿಬರುತ್ತಿರುವ ಮಾತು.
ಬಲಿಪಶುಗಳಿಗಾಗಿ ಹುಡುಕಾಟ
ಈ ಹಗರಣವನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಏಕೆಂದರೆ, ನಿಜವಾಗಲೂ ಜವಾಬ್ದಾರಿ ಇರುವವರು, ಆ ಜವಾಬ್ದಾರಿಯ ಹೊಣೆ ಹೊರಬೇಕಿಲ್ಲದ ಮೀಟರ್ ರೀಡರ್, ವಾಟರ್ ಇನ್‌ಸ್ಪೆಕ್ಟರ್‌ಗಳ ಮೇಲೆ ದೂರು ದಾಖಲಿಸಿದ್ದಾರೆ. ಬಸವನಗುಡಿ, ಬೊಮ್ಮನಹಳ್ಳಿ, ಕೊಡಿಗೇಹಳ್ಳಿ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಎಇಇ, ಇಇಯಂಥ ಉನ್ನತ ಅಧಿಕಾರಿಗಳೂ ಸೇರಿ ಕೆಳ ಹಂತದ ಕಾಯಂ ಸಿಬ್ಬಂದಿಯೇ ಈಗ ಜಾಮೀನು ತೆಗೆದುಕೊಳ್ಳುವಂತಾಗಿದೆ. ಇತ್ತ ಗುತ್ತಿಗೆ ಸಿಬ್ಬಂದಿ ಮೇಲೂ ದೂರು ದಾಖಲಾಗಿದೆ.
ಆಗಬೇಕಾದ್ದು ಏನು?
ಜಲ ಮಂಡಳಿಯಲ್ಲಿ ಆಗಿರುವ ಈ ಹಗರಣದ ಆಳ- ಅಗಲ ಏನು? ಎಷ್ಟು ಮೊತ್ತ ದುರ್ಬಳಕೆ ಆಗಿದೆ? ಈ ಹಗರಣದಲ್ಲಿ ಹಣ ತೆಗೆದುಕೊಂಡು ವಂಚನೆಯಲ್ಲಿ ನೇರವಾಗಿ ಭಾಗಿ ಆಗಿಲ್ಲದಿದ್ದರೂ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡವರ ಹೊಣೆಗಾರಿಕೆ ಏನು? ಹೊರಗುತ್ತಿಗೆ ವ್ಯವಸ್ಥೆಯಲ್ಲಿನ ಲೋಪ- ದೋಷಗಳೇನು, ಇದಕ್ಕೆ ಕಾರಣ ಏನು ಎಂದು ಸರಿಪಡಿಸಬೇಕಿದೆ. ಸಾವಿರ-ಲಕ್ಷಗಳಲ್ಲಿ ಲೆಕ್ಕ ತೋರಿಸಿ, ಮುಚ್ಚಿ ಹಾಕುವುದಕ್ಕೆ ನೋಡುತ್ತಿರುವ ಈ ಪ್ರಕರಣದ ತನಿಖೆಯನ್ನು ಜಲಮಂಡಳಿಯ ಆಂತರಿಕ ಸಮಿತಿಯಿಂದ ಬೇರೆ ತನಿಖಾ ಸಂಸ್ಥೆಗೆ ವಹಿಸಬೇಕಿದೆ. 13 ಗೆಜೆಟೆಡ್ ಅಧಿಕಾರಿಗಳ ಅಮಾನತಿನೊಂದಿಗೆ ಇದು ಮುಗಿಯಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಜಲಮಂಡಳಿಯಲ್ಲಿ ಎಂಥೆಂಥ ಅನಾಹುತ ಆಗುತ್ತದೆ ಅಂದರೆ, ನಿವೃತ್ತಿ ಆದ ನೌಕರರೊಬ್ಬರು ಹೆಚ್ಚುವರಿಯಾಗಿ ಸುಮಾರು ಎರಡು ತಿಂಗಳು ಸೇವೆ ಮುಂದುವರಿದು, ಅವರು ಪೂರ್ಣ ಸಂಬಳವನ್ನೇ ಪಡೆದುಕೊಂಡಿದ್ದಾರೆ. ಹೀಗೆ ನಿವೃತ್ತಿ ಆಗಬೇಕಿತ್ತು ಎಂಬುದನ್ನು ಉಪವಿಭಾಗ ಮಟ್ಟದ ಸಿಬ್ಬಂದಿ ನಿರ್ವಾಹಕರು ಎಇಇ ಗಮನಕ್ಕೆ ತರಬೇಕು. ಆದರೆ ಇದ್ಯಾವುದೂ ಆಗದೆ ಸುಮಾರು ಎರಡು ತಿಂಗಳು ವೇತನ ಪಡೆದಿದ್ದಾರೆ. ಬಯಲಿಗೆ ಬಂದಿದ್ದು ಜಲಮಂಡಳಿ ಹಗರಣದ ಹನಿಯಷ್ಟು ಮಾತ್ರ, ಸೋರಿಹೋಗುತ್ತಿದೆ ಗ್ಯಾಲನ್‌ನಷ್ಟು ಸತ್ಯ ಸಂಗತಿ.
ವಿವೇಕ ಬಿರಾದಾರ ಟಿವಿ9 ಡಿಜಿಟಲ್
Published On - 5:45 pm, Wed, 4 January 23