ಬೆಂಗಳೂರು, ಏಪ್ರಿಲ್ 05: ಅನಧಿಕೃತವಾಗಿ ಕಟ್ಟಡ ನಿರ್ಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಕ್ (BBMP) ಕೊಟ್ಟಿದೆ. ಇನ್ಮುಂದೆ, ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (BESCOM) ಕ್ಕೆ ಸೂಚನೆ ನೀಡಿದೆ. 2024ರ ಡಿಸೆಂಬರ್ 17ರ ಸುಪ್ರೀಂಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಪಾಲಿಕೆಯಿಂದ ಈಗಾಗಲೇ ಅನಧಿಕೃತ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆಯ ಕಲಂ 248(1), (2) ಮತ್ತು (3) ರಡಿಯಲ್ಲಿ ಆದೇಶವನ್ನು ಮತ್ತು ಕಲಂ 356(1) & (2) ರಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಆದುದರಿಂದ ಇನ್ನು ಮುಂದೆ ಯಾವುದೇ ಅನಧಿಕೃತ ಕಟ್ಟಡದ ವಿರುದ್ಧ ಬಿಬಿಎಂಪಿ ಕಾಯ್ದೆ 2020ರ ಕಲಂ 248(3) ಅಡಿಯಲ್ಲಿ ಪಾಲಿಕೆಯಿಂದ ಆದೇಶ ಹೊರಡಿಸಿದ ತಕ್ಷಣ, ನಿಗಮದಿಂದ ಇಂತಹ ಕಟ್ಟಡಗಳಿಗೆ ತಾತ್ಕಾಲಿಕ/ಶಾಶ್ವತ ವಿದ್ಯುತ್ ಸಂಪರ್ಕವನ್ನು ಕೂಡಲೇ ಸ್ಥಗಿತಗೊಳಿಸಿ ಅನಧಿಕೃತ ನಿರ್ಮಾಣಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಅವಶ್ಯವಿರುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖವಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕವನ್ನು ನೀಡಬೇಕೆಂದು ಬೆಸ್ಕಾಂಗೆ ಬಿಬಿಎಂಪಿ ಸೂಚಿಸಿದೆ.
Published On - 10:12 pm, Sat, 5 April 25