ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಗುಡ್​​ ನ್ಯೂಸ್ : ಒಸಿ ಸಿಕ್ಕ ಮೇಲೆ ಬಿಲ್ಡರ್‌ಗಳ ಇಷ್ಟದಂತೆ ನಕ್ಷೆ ಬದಲಾಯಿಸುವಂತಿಲ್ಲ

ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಬಿಡಿಎ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡ ಬಳಿಕ, ಮಾಲೀಕರ ಅನುಮತಿಯಿಲ್ಲದೆ ಕಟ್ಟಡ ನಕ್ಷೆ ಪರಿಷ್ಕರಣೆ ಮಾಡುವಂತಿಲ್ಲ. ಕನಿಷ್ಠ ಶೇ. 66 ಮಾಲೀಕರ ಸಮ್ಮತಿ ಕಡ್ಡಾಯ. ಇದರಿಂದ ಬಿಲ್ಡರ್‌ಗಳು ಮಾಡುತ್ತಿದ್ದ ಕಾನೂನು ಲೋಪಗಳ ದುರ್ಬಳಕೆಗೆ ತಡೆ ಬಿದ್ದಿದ್ದು, ಮಾಲೀಕರ ಹಕ್ಕುಗಳನ್ನು ರಕ್ಷಿಸಲಾಗಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಗುಡ್​​ ನ್ಯೂಸ್ : ಒಸಿ ಸಿಕ್ಕ ಮೇಲೆ ಬಿಲ್ಡರ್‌ಗಳ ಇಷ್ಟದಂತೆ ನಕ್ಷೆ ಬದಲಾಯಿಸುವಂತಿಲ್ಲ
ಸಾಂದರ್ಭಿಕ ಚಿತ್ರ

Updated on: Jul 25, 2026 | 7:34 AM

ಬೆಂಗಳೂರು, ಜು.25: ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಬಿಡಿಎ (BDA) ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡು ಸ್ವಾಧೀನ ಪತ್ರ (Occupancy Certificate – OC) ದೊರೆತ ಬಳಿಕ, ಬಿಲ್ಡರ್‌ಗಳು ತಮಗೆ ಬೇಕಾದಂತೆ ಕಟ್ಟಡ ನಕ್ಷೆ ಪರಿಷ್ಕರಣೆ (Revised Plan) ಮಾಡುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಠಿಣ ಕಟ್ಟುಪಾಡುಗಳನ್ನು ವಿಧಿಸಿದೆ. ಇನ್ಮುಂದೆ ಫ್ಲ್ಯಾಟ್ ಮಾಲೀಕರ ಅನುಮತಿ ಇಲ್ಲದೆ ಡೆವಲಪರ್‌ಗಳು ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ.

ಜುಲೈ 15 ರಂದು ಬಿಡಿಎ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈಗಾಗಲೇ ಹಕ್ಕುಗಳನ್ನು ವರ್ಗಾಯಿಸಲಾದ ಯೋಜನೆಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಕನಿಷ್ಠ ಶೇ. 66 (2/3 ಭಾಗ) ಅಪಾರ್ಟ್‌ಮೆಂಟ್ ಮಾಲೀಕರ ಸಮ್ಮತಿ ಕಡ್ಡಾಯ. ಅನುಮತಿಸಲಾದ ಕಟ್ಟಡ ನಿರ್ಮಾಣ ಪ್ರದೇಶ ಸಾಮರ್ಥ್ಯ ಪೂರ್ಣ ಬಳಕೆ ಆಗಿದ್ದರೆ, ಅಂತಹ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಪರಿಷ್ಕೃತ ನಕ್ಷೆಗೆ ಅನುಮತಿ ನೀಡಲಾಗುವುದಿಲ್ಲ.

ಅಪಾರ್ಟ್‌ಮೆಂಟ್ ಮಾಲೀಕರಿಗೆ ಈಗಾಗಲೇ ಹಸ್ತಾಂತರಿಸಲಾದ ಜಮೀನಿನಲ್ಲಿ ಬಿಲ್ಡರ್‌ಗಳು ಮತ್ತೆ ಹೆಚ್ಚುವರಿ ನಿರ್ಮಾಣ ಮಾಡಲು ಅನುಮತಿ ಕೋರುವುದಕ್ಕೆ ಈ ಆದೇಶ ಸಂಪೂರ್ಣ ತಡೆ ನೀಡಲಿದೆ. ದಕ್ಷಿಣ ಬೆಂಗಳೂರಿನ ಕೆನರಾ ಬ್ಯಾಂಕ್ ಲೇಔಟ್‌ನಲ್ಲಿರುವ ೨೪೧ ಫ್ಲ್ಯಾಟ್‌ಗಳ ‘ಹೆಚ್‌ಎಂ ಟ್ಯಾಂಬರಿನ್’ ಅಪಾರ್ಟ್‌ಮೆಂಟ್ ನಿವಾಸಿಗಳ ಸುದೀರ್ಘ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಬಿಡಿಎ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

2003 ರಲ್ಲಿ ನಿರ್ಮಾಣಗೊಂಡು, 2006 ರಲ್ಲಿ ಒಸಿ (OC) ಪಡೆದಿದ್ದ ಈ ಯೋಜನೆಯ 3 ಎಕರೆ 18 ಗುಂಟೆ ಜಮೀನಿನ ಅವಿಭಜಿತ ಹಕ್ಕು ಮಾಲೀಕರ ಹೆಸರಲ್ಲೇ ಇತ್ತು. ಆದರೆ, 10 ವರ್ಷಗಳ ಬಳಿಕ (2016 ರಲ್ಲಿ) ಬಿಲ್ಡರ್ ಅದೇ ಜಮೀನಿನಲ್ಲಿ ಮತ್ತೊಂದು ಹೊಸ ಕಟ್ಟಡ ಕಟ್ಟಲು ಬಿಡಿಎಯಿಂದ ಪರಿಷ್ಕೃತ ನಕ್ಷೆ ಅನುಮೋದನೆ ಪಡೆದುಕೊಂಡಿದ್ದರು. ‘ಕರ್ನಾಟಕ ಓನರ್‌ಶಿಪ್ ಫ್ಲ್ಯಾಟ್ಸ್ ಆಕ್ಟ್ , 1972’ ಹಾಗೂ ‘ರೆರಾ , 2016’ ಪ್ರಕಾರ ಮಾಲೀಕರ ಒಪ್ಪಿಗೆಯಿಲ್ಲದೆ ಈ ಅನುಮೋದನೆ ನೀಡಲಾಗಿದೆ ಮತ್ತು ಮಾಲೀಕರ ಎಫ್‌ಎಆರ್‌ (ಹಕ್ಕನ್ನು ಬಿಲ್ಡರ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಕರಾವಳಿಯಲ್ಲಿ ರಣಮಳೆಯ ಹಾವಳಿ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬಿಡಿಎ ಹೊರಡಿಸಿರುವ ಈ ನೂತನ ಸುತ್ತೋಲೆಯನ್ನು ಅಪಾರ್ಟ್‌ಮೆಂಟ್ ಮಾಲೀಕರ ಸಂಘಟನೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾರ್ದಿಕವಾಗಿ ಸ್ವಾಗತಿಸಿವೆ. ಬಿಲ್ಡರ್‌ಗಳು ಕಾನೂನಿನಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಮಾಲೀಕರಿಗೆ ಮಾಡುತ್ತಿದ್ದ ವಂಚನೆಗೆ ಇದು ಶಾಶ್ವತ ಮುಕ್ತಿ ನೀಡಲಿದೆ ಎಂದು ಹೆಚ್‌ಎಂ ಟ್ಯಾಂಬರಿನ್ ನಿವಾಸಿ ಹಾಗೂ ‘ಚೇಂಜ್-ಮೇಕರ್ಸ್ ಆಫ್ ಕನಕಪುರ’ ಸದಸ್ಯ ಅಬ್ದುಲ್ ಅಲೀಮ್ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us