AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಸಮರ: ಅ.2ರಿಂದ ಸಂತ್ರಸ್ತ ರೈತರ ಹಳ್ಳಿಗಳಿಗೆ ಭೇಟಿ

ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ನೈಸ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ನೈಸ್‌ನಿಂದ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ಪರವಾಗಿ ನಿಂತಿರುವ ಅವರು, ಅಕ್ರಮ ಭೂಸ್ವಾಧೀನದ ವಿರುದ್ಧ ಧ್ವನಿ ಎತ್ತಿದ್ದಾರೆ. ಅಕ್ಟೋಬರ್ 2ರಿಂದ ಗ್ರಾಮ-ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ.

ನೈಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಸಮರ: ಅ.2ರಿಂದ ಸಂತ್ರಸ್ತ ರೈತರ ಹಳ್ಳಿಗಳಿಗೆ ಭೇಟಿ
ಹೆಚ್​ಡಿ ಕುಮಾರಸ್ವಾಮಿ Image Credit source: x/hd_kumaraswamy
ಪ್ರಶಾಂತ್​ ಬಿ.
| Edited By: |

Updated on:Sep 27, 2026 | 9:39 PM

Share

ರಾಮನಗರ, ಸೆಪ್ಟೆಂಬರ್​​ 27: ನೈಸ್ ಸಂಸ್ಥೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನೈಸ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ಪರವಾಗಿ ಅಖಾಡಕ್ಕೆ ಇಳಿದಿರುವ ದಳಪತಿಗಳು, ಇದೀಗ ಅಕ್ಟೋಬರ್ 2ರಿಂದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಅಳಲು ಕೇಳಲು ಮಹತ್ವದ ಯೋಜನೆ ರೂಪಿಸಿದ್ದಾರೆ.

ಕೇತಗಾನಹಳ್ಳಿ ತೋಟದ ಮನೆಯಲ್ಲಿ ರೈತರೊಂದಿಗೆ ಮಹತ್ವದ ಸಭೆ

ನೈಸ್ ಸಂಸ್ಥೆಯ ಅಕ್ರಮ ಹಾಗೂ ಭೂ ಸಂತ್ರಸ್ತ ರೈತರ ಜಟಾಪಟಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ರಾಜಕೀಯ ಸಮರಕ್ಕೆ ದಾರಿ ಮಾಡಿಕೊಡುತ್ತಿದೆ. ಈಗಾಗಲೇ ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ ಎಂದು ಕರೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ಮತ್ತೊಮ್ಮೆ ನೈಸ್ ವಿರುದ್ಧ ನೇರಾನೇರ ಸಮರಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: 50 ಹಳ್ಳಿ ಜನರಿಗೆ ಭೂಮಿ ಹಿಂದಿರುಗಿಸಬೇಕು: ಆಂದೋಲನ ಘೋಷಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ನೈಸ್ ಭೂ ಸಂತ್ರಸ್ತ ರೈತ ಮುಖಂಡರ ಜೊತೆ ಮಹತ್ವದ ಚರ್ಚೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಸೋಂಪುರ, ವರಹಸಂದ್ರ, ಗೊಲ್ಲಹಳ್ಳಿ, ಬಿ.ಎಂ. ಕಾವಲ್ ಹಾಗೂ ಹೆಮ್ಮಿಗೆಪುರ ಗ್ರಾಮಗಳ ರೈತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದು, ನೈಸ್ ಸಂಸ್ಥೆಯಿಂದ ತಮಗಾಗಿರುವ ಅನ್ಯಾಯವನ್ನು ಕೇಂದ್ರ ಸಚಿವರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ‌.

LIVE TV

2003ರಿಂದಲೂ ಮುಂದುವರೆದಿರುವ ರೈತರ ಕಾನೂನು ಹೋರಾಟ

ಅಂದಹಾಗೆ ‌ಕಳೆದ 2003ರಿಂದ ನೈಸ್ ವಿರುದ್ಧ ಈ ಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಂಡ ಸಂಸ್ಥೆ, ರೈತರಿಗೆ ನೀಡಬೇಕಿದ್ದ ಪರ್ಯಾಯ ನಿವೇಶನಗಳನ್ನು ನೀಡದೆ ವಂಚಿಸಿದೆ ಎಂಬುದು ಸಂತ್ರಸ್ತರ ಪ್ರಮುಖ ಆರೋಪ. ಈ ವಿಚಾರವಾಗಿ ಕೋರ್ಟ್‌ನಲ್ಲೂ ಕಾನೂನು ಸಮರ ನಡೆಯುತ್ತಿದ್ದು, ಈಗ ಕುಮಾರಸ್ವಾಮಿ ಸಾಥ್ ನೀಡಿರುವುದು ರೈತರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

ಗ್ರಾಮಗಳ ಸಂಪರ್ಕ ಯಾತ್ರೆ

ಇನ್ನು ಈಗಾಗಲೇ ಟೋಲ್ ಕಟ್ಟಬೇಡಿ ಎಂಬ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಇದೀಗ ಅಕ್ಟೋಬರ್ 2ರಿಂದ ಎಲೆಕ್ಟ್ರಾನಿಕ್ ಸಿಟಿಯಿಂದ ಮಾದಾವರ ವರೆಗಿನ ಗ್ರಾಮ-ಗ್ರಾಮಗಳಿಗೆ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: 1 ಎಕರೆಗೆ ಗರಿಷ್ಠ 15 ನಿವೇಶನಗಳ ಪರಿಹಾರ: ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ

ಒಟ್ಟಾರೆ ನೈಸ್ ಸಂಸ್ಥೆ ವಿರುದ್ಧ ಸಮರ ಸಾರಿರುವ ದಳಪತಿಗಳು ಸಂತ್ರಸ್ತ ರೈತರ‌ ಗ್ರಾಮಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:36 pm, Sun, 27 September 26

Follow Us
ಪ್ರಶಾಂತ್​ ಬಿ.
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More