ಉರಿಯುವ ಬೆಂಕಿಗೆ ತುಪ್ಪ: ಬಿಡದಿ ಟೌನ್ ಶಿಪ್ ವಿರೋಧಿಸಿ ಪ್ರತಿಭಟನೆ ಮಾಡಿದ್ದವರ ವಿರುದ್ಧ ಕೇಸ್
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಪರ ವಿರೋಧಗಳು ವ್ಯಕ್ತವಾಗಿದ್ದು, ಇದೀಗ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇನ್ನೊಂದೆಡೆ ಈ ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತರಿಗೆ ಬಿಡದಿ ಪೊಲೀಸರು ಶಾಕ್ ನೀಡಿದ್ದಾರೆ.

ರಾಮನಗರ, (ಸೆಪ್ಟೆಂಬರ್ 27): ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಧರಣಿ ನಡೆಸುತ್ತಿದ್ದ ರೈತರ ವಿರುದ್ಧ ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನುಮತಿ ಇಲ್ಲದೆ ರಾಜ್ಯ ಹೆದ್ದಾರಿ ತಡೆದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ಹಾಗೂ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ 15 ಜನರ ವಿರುದ್ಧ ಎಫ್‌ಐಆರ್ ಹೂಡಲಾಗಿದೆ. ಹೌದು… ಅಂದಹಾಗೆ ಬಿಡದಿ ಟೌನ್‌ಶಿಪ್ ವಿರೋಧಿಸಿ ರಾಮನಗರ ತಾಲೂಕಿನ ಬೈರಮಂಗಲದಲ್ಲಿ ರಾಜ್ಯ ಹೆದ್ದಾರಿ 265ರ ಮುಖ್ಯರಸ್ತೆಯನ್ನು ತಡೆದು ಧರಣಿ ನಡೆಸುತ್ತಿದ್ದ ಒಟ್ಟು 15 ಜನರ ವಿರುದ್ಧ ಪ್ರಕರಣ ನಮೂದಿಸಲಾಗಿದೆ.
ಅಂದಹಾಗೆ ಬಿಡದಿ ಠಾಣೆ ಪಿಎಸ್‌ಐ ದೇವರಾಜು ಅವರು ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಆಕ್ಟ್ 2023ರ (BNS Act 2023) ಸೆಕ್ಷನ್ 126(2), 54 ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಿರೀಶ್, ಚೇತನ್, ಚಂದ್ರಶೇಖರ್, ನಾಗೇಶ್, ಶಿವರುದ್ರಪ್ಪ, ವಿರೇಶ್, ಪುಟ್ಟಸ್ವಾಮಯ್ಯ, ಬೈರಪ್ಪ, ಕೃಷ್ಣಪ್ಪ, ನಾಗರಾಜ್ ಸೇರಿದಂತೆ ಮಹಿಳಾ ಹೋರಾಟಗಾರರಾದ ಜಯಮ್ಮ, ಜಯಲಕ್ಷ್ಮಿ, ಶ್ವೇತಾ, ಭಾಗ್ಯ ಹಾಗೂ ನೇತಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಸಾವಿರ ಕೇಸ್ ಗಳು ಬಿದ್ದರು ಜಗ್ಗಲ್ಲ ಎಂದಿದ್ದಾರೆ.
ಇದನ್ನೂ ನೋಡಿ: 50 ಹಳ್ಳಿ ಜನರಿಗೆ ಭೂಮಿ ಹಿಂದಿರುಗಿಸಬೇಕು: ಆಂದೋಲನ ಘೋಷಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ
ಸೆಪ್ಟೆಂಬರ್ 21ರಿಂದ 25ರವರೆಗೂ ರಾಜ್ಯ ಹೆದ್ದಾರಿ 265ರಲ್ಲಿ ಅನಧಿಕೃತವಾಗಿ ರಸ್ತೆತಡೆ ನಡೆಸಿ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳನ್ನು ಸಾಲಾಗಿ ನಿಲ್ಲಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಇದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ಉದ್ಯೋಗಿಗಳು ಮತ್ತು ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿತ್ತು. ಅಲ್ಲದೆ, ಸಾರ್ವಜನಿಕರನ್ನು ಹೋರಾಟಕ್ಕೆ ಪ್ರಚೋದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ, ತಮ್ಮ ಜಮೀನುಗಳ ಉಳಿವಿಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಕೇಸ್ ದಾಖಲಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿರೋ ವಿಚಾರವಾಗಿ ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದು, ಯಾರು ಕೂಡ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಬಾರದು. ಇಷ್ಟ ಇರುವ ರೈತರು ಭೂಮಿ ಕೊಡಲಿ, ಇಲ್ಲದಿರುವವರು ಭೂಮಿ ಕೊಡುವುದು ಬೇಡ ಎಂದಿದ್ದಾರೆ.
ಒಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ವಿರುದ್ಧದ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಪೊಲೀಸರ ಎಫ್‌ಐಆರ್ ಅಸ್ತ್ರ ರೈತರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.




