ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 420 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ ಉದ್ದದ 4 ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್​​ವರೆಗಿನ ಈ ಫ್ಲೈಓವರ್​ ಯೋಜನೆ 18 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಸಂಚಾರ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ.

ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?
ಸಾಂದರ್ಭಿಕ ಚಿತ್ರ
Image Credit source: AI Image

Updated on: Apr 03, 2026 | 7:51 PM

ಬೆಂಗಳೂರು, ಏಪ್ರಿಲ್​​ 03: ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಹೆಬ್ಬಾಳದಲ್ಲಿ ಎರಡು ಲೂಪ್​ಗಳನ್ನ ಅಳವಡಿಸಿರುವ ಕಾರಣಕ್ಕೆ ಇತ್ತೀಚೆಗೆ ಟ್ರಾಫಿಕ್ ಕೊಂಚ ಸುಧಾರಿಸಿದೆ. ಆದರೆ ಅಲ್ಲಿನ ಟ್ರಾಫಿಕ್ ಈಗ ಮೇಖ್ರಿ ಸರ್ಕಲ್​ಗೆ ಶಿಫ್ಟ್ ಆಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಹೆಚ್ಚಾಗಿದೆ. ಹೀಗಾಗಿ ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್​​ವರೆಗೆ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದ್ದು, ಇದಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿದೆ.

ಬರೋಬ್ಬರಿ 420 ಕೋಟಿ ರೂಪಾಯಿ ವೆಚ್ಚದಲ್ಲಿ 4 ಪಥದ ರೋಟರಿ ಎಲಿವೇಟೆಡ್ ಕಾರಿಡಾರ್ ನಿಮಾರ್ಣಕ್ಕೆ ಟೆಂಡರ್​​ ಆಹ್ವಾನಿಸಲಾಗಿದ್ದು, ಈ ಫ್ಲೈಓವರ್​​ ಸಂಚಾರ ದಟ್ಟಣೆ ವಿಚಾರದಲ್ಲಿ ಗಮನಾರ್ಹ ಸುಧಾರಣೆ ತರುವ ವಿಶ್ವಾಸವನ್ನು ಜಿಬಿಎ ಹೊಂದಿದೆ. ಈ ಸರ್ಕಲ್​​ನಲ್ಲಿ ರೋಟರಿ ರೀತಿಯ ವಿನ್ಯಾಸವಿರಲಿದ್ದು, ಜಯಮಹಲ್ ರಸ್ತೆ ಹಾಗೂ ಯಶವಂತಪುರ ಕಡೆಗೆ ಲೂಪ್ ಮಾಡಲಾಗುತ್ತದೆ. ಸುಮಾರು 1.6 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಇದಾಗಿರಲಿದೆ. ಇನ್ನು ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಬಿಡಿಎ ಮಾರ್ಚ್ 26ರಂದು ಹೊಸ ಟೆಂಡರ್ ಆಹ್ವಾನಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಕರೆದ ಟೆಂಡರ್ ಆಗಿದ್ದು, 2025ರ ಡಿಸೆಂಬರ್‌ನಲ್ಲಿ ಫ್ಲೈಓವರ್ ಮತ್ತು ಶಾರ್ಟ್ ಟನಲ್ ಯೋಜನೆಗೆ ಸಂಯುಕ್ತ ಪ್ರಸ್ತಾವನೆ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​; ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​

ಫ್ಲೈಓವರ್‌ನಲ್ಲಿ ಎರಡು ಪ್ರಮುಖ ಡೌನ್‌ರ್ಯಾಂಪ್‌ಗಳು ಇರಲಿದ್ದು, ಬಿಡಿಎ ಅಧಿಕಾರಿಗಳ ಪ್ರಕಾರ ಈ ಫ್ಲೈಓವರ್ ವಿನ್ಯಾಸ ಭವಿಷ್ಯದ ಈಸ್ಟ್-ವೆಸ್ಟ್ ಎಲಿವೇಟೆಡ್ ಕಾರಿಡಾರ್‌ಗೆ ಹೊಂದಿಕೆಯಾಗುವಂತೆ ರೂಪಿಸಲಾಗುತ್ತದೆ. ಇದರಿಂದ ನಗರದ ದೀರ್ಘಕಾಲಿಕ ಸಾರಿಗೆ ಯೋಜನೆಗೆ ಅನುಗುಣವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೆ 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಯ ವಿಶೇಷವೆಂದರೆ ಖಾಸಗಿ ಭೂಸ್ವಾಧೀನದ ಅಗತ್ಯವಿಲ್ಲ. ಆದರೆ ಏರ್ ಫೋರ್ಸ್ ಟ್ರೈನಿಂಗ್ ಕಮಾಂಡ್ ಹಾಗೂ ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಪ್ರಮುಖ ರಕ್ಷಣಾ ಸಂಸ್ಥೆಗಳಿಂದ ಅನುಮತಿ ಅಗತ್ಯವಿದ್ದು, ಅದನ್ನು ಈಗಾಗಲೇ ಪಡೆಯಲಾಗಿದೆ.

ವರದಿ: ಲಕ್ಷ್ಮೀನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us