ತನ್ನದೇ ಪೊಲೀಸ್, ನ್ಯಾಯಾಲಯ, ಕಾನೂನು: ಬೆಂಗಳೂರಿನಲ್ಲಿ ಹೀಗೊಂದು ಅಪಾರ್ಟ್‌ಮೆಂಟ್ ರಾಜ್ಯ!
ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಒಂದು ತನ್ನದೇ ಕಾನೂನು, ದಂಡ ವ್ಯವಸ್ಥೆ ಜಾರಿಗೆ ತಂದು ಲಕ್ಷಾಂತರ ರೂ. ವಸೂಲಿ ಮಾಡಿದ್ದು, ಇದೀಗ ಪೊಲೀಸ್ ಕೆಂಗಣ್ಣಿಗೆ ಗುರಿಯಾಗಿದೆ. ಅಕ್ರಮ ವಸ್ತು ಸಾಗಾಟ, ಮಾದಕವಸ್ತು ಸೇವನೆ, ನಿವಾಸಿಗಳ ದುರ್ವರ್ತನೆಗಳಿಗೆ ಅಪಾರ್ಟ್ಮೆಂಟೇ ಕಾನೂನುಬಾಹಿರವಾಗಿ ದಂಡ ಸಂಗ್ರಹ ಮಾಡಿದೆ. ಸದ್ಯ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.

ಬೆಂಗಳೂರು, ಡಿಸೆಂಬರ್ 18: ಯಾವುದೇ ಒಂದು ರಾಜ್ಯ, ಸರ್ಕಾರ ಹಾಗೂ ಆಡಳಿತ ಅಂತ ಬಂದಾಗ ಕಾನೂನು, ಪೊಲೀಸರು, ನ್ಯಾಯಾಂಗ ವ್ಯವಸ್ಥೆ ಇತ್ಯಾದಿ ಇರುತ್ತದೆ. ಸಮುದಾಯ, ಸಂಘಟನೆಗಳು, ಪಕ್ಷ ಇತ್ಯಾದಿಗಳಲ್ಲಿ ಆಂತರಿಕ ನಿಯಮಾವಳಿಗಳು ಇರುತ್ತವೆಯಾದರೂ ಅದು ಸರ್ಕಾರ ನಡೆಸುವ ಆಡಳಿತದ ರೀತಿಯಲ್ಲಿ ಇರುವುದಿಲ್ಲಷ್ಟೇ. ಆದರೆ, ಬೆಂಗಳೂರಿನಲ್ಲೊಂದು (Bengaluru) ಅಪಾರ್ಟ್ಮಂಟ್ ಮಾತ್ರ ತನ್ನದೇ ಆದ ಕಾನೂನು, ಪೊಲೀಸ್, ನ್ಯಾಯ ವ್ಯವಸ್ಥೆ ಎಲ್ಲವನ್ನೂ ಒಳಗೊಂಡಿದೆ! ಅಷ್ಟೇ ಅಲ್ಲ, ಅಕ್ರಮ ಎಸಗಿದವರಿಂದ ಲಕ್ಷಾಂತರ ರೂಪಾಯಿ ದಂಡವನ್ನೂ ಸಂಗ್ರಹಿಸಿದೆ. ಇದು ಅಚ್ಚರಿಯ ವಿಚಾರ ಆದರೂ ಸತ್ಯ. ಸದ್ಯ ಆ ಅಪಾರ್ಟ್ಮಂಟ್ ಪೊಲೀಸರ ಕಣ್ಣಿಗೆ ಬಿದ್ದಿದ್ದು, ತನಿಖೆ ಆರಂಭವಾಗಿರುವುದಾಗಿ ವರದಿಯಾಗಿದೆ.
ಸದ್ಯ, ತನ್ನದೇ ಆಡಳಿತ ವ್ಯವಸ್ಥೆ ಮಾಡಿಕೊಂಡು ದಂಡ ಸಂಗ್ರಹ ಮಾಡಿರುವ ‘ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್’ ವಿರುದ್ಧ ವಿಷಲ್ ಬ್ಲೋವರ್ (ಅನಾಮಧೇಯ ದೂರುದಾರ) ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
‘ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್’ ಸಂಗ್ರಹಿಸಿರುವ ದಂಡದ ಮೊತ್ತದ ವಿವರ ದೊರೆತಿದ್ದು, ಅದರ ವಿವರವನ್ನೂ ‘ಡೆಕ್ಕನ್ ಹೆರಾಲ್ಡ್’ ಪ್ರಕಟಿಸಿದೆ.
ಅಪಾರ್ಟ್‌ಮೆಂಟ್ ಆಡಳಿತವು ಜುಲೈ 2025 ರಲ್ಲಿ ಅಕ್ರಮ ವಸ್ತುಗಳ ಸಾಗಾಟಕ್ಕಾಗಿ ಏಳು ಮಂದಿ ನಿವಾಸಿಗಳು ಮತ್ತು ಒಬ್ಬ ಸಂದರ್ಶಕರಿಂದ ಪ್ರತ್ಯೇಕವಾಗಿ 30,000 ರೂ., 20,000 ರೂ. ಮತ್ತು 30,000 ರೂ. ದಂಡ ಸಂಗ್ರಹಿಸಿತ್ತು. ಆಗಸ್ಟ್‌ನಲ್ಲಿ, ಮಾದಕವಸ್ತುಗಳನ್ನು ಸೇವಿಸಿದ್ದಕ್ಕಾಗಿ ಅಥವಾ ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಐವರು ನಿವಾಸಿಗಳಿಂದ 30,000 ರೂ., 25,000 ರೂ., 30,000 ರೂ. ಮತ್ತು 30,000 ರೂ. ಸಂಗ್ರಹಿಸಿತ್ತು. ಆಗಸ್ಟ್‌ನಲ್ಲಿ ನ30,000 ರೂ. ದಂಡ ಸಂಗ್ರಹ ಬಾಕಿ ಇದೆ ಎಂದು ಹೇಳಿತ್ತು ಎಂಬುದಾಗಿ ವರದಿ ಉಲ್ಲೇಖಿಸಿದೆ.
ಅಕ್ಟೋಬರ್‌ನಲ್ಲಿ, ಫ್ಲಾಟ್‌ನಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಇರಿಸಿಕೊಂಡಿದ್ದಕ್ಕಾಗಿ ಮೂವರು ಸಂದರ್ಶಕರು ಮತ್ತು ಇಬ್ಬರು ನಿವಾಸಿಗಳಿಂದ 50,000 ರೂ, 10,000 ರೂ, 30,000 ರೂ, 25,000 ರೂ ಮತ್ತು 20,000 ರೂ.ಗಳನ್ನು ವಸೂಲಿ ಮಾಡಲಾಗಿತ್ತು.
ಮನೆ ಕೆಲಸದಾಕೆಗೆ ಕಿಸ್ ಮಾಡಿದವನಿಗೆ ಬಿತ್ತು ದಂಡ
ಅಕ್ರಮಗಳಲ್ಲಿ ತೊಡಗಿಕೊಂಡವರಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಒಬ್ಬ ನಿವಾಸಿ ಮನೆ ಕೆಲಸದಾಕೆಗೆ ಮುತ್ತಿಟ್ಟ ಘಟನೆ ನಡೆದಿತ್ತು. 20,000 ರೂ. ದಂಡ ವಿಧಿಸಿ ಪ್ರಕರಣವನ್ನು ಬಗೆಹರಿಸಿಕೊಳ್ಳಲಾಗಿತ್ತು. ಸದಸ್ಯರ ಮನಸ್ಥಿತಿ ಅಥವಾ ಅಪರಾಧಿಯ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ದಂಡ ವಿಧಿಸಲಾಗುತ್ತಿತ್ತು ವಿಷಲ್ ಬ್ಲೋವರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ (KAOA), 1972 ರ ನಿಬಂಧನೆಗಳು ಮತ್ತು ನಿಯಮಗಳು, 1974 ರ ಅಡಿಯಲ್ಲಿ ಅಪಾರ್ಟ್‌ಮೆಂಟ್ ಬೈಲಾಗಳನ್ನು ಸಿದ್ಧಪಡಿಸಲಾಗಿದೆ. ಆದಾಗ್ಯೂ ಇಂಥ ಚಟುವಟಿಕೆಗಳಿಗೆ ಕಾನೂನು ಪ್ರಕಾರ ಅವಕಾಶವಿಲ್ಲ. ಅಪಾರ್ಟ್‌ಮೆಂಟ್ ಬೈಲಾ ಪ್ರಕಾರ, ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಓನರ್ಸ್ ಅಸೋಸಿಯೇಷನ್ ಹೊಂದಿದೆ ಮತ್ತು ದಂಡ ವಿಧಿಸುವ ನ್ಯಾಯಾಂಗ ಅಧಿಕಾರ ಹೊಂದಿಲ್ಲ ಎಂದು ವಿಷಲ್ ಬ್ಲೋವರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಣ ಇದ್ದವರ ಮನೆಗೆ ಕರೆದು ಚಕ್ಕಂದ, ವಿಡಿಯೋ ಮಾಡಿ ಬ್ಲ್ಯಾಕ್ಮೇಲ್: ಪೊಲೀಸ್ ಹಿಂದೆ ಬಿದ್ದಿದ್ದ ಮಹಿಳೆ ಅಂತಿಂಥವಳಲ್ಲಾ ಗೊತ್ತಾ!
ಸದ್ಯ ಅವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿರುವ ಕುಂಬಳಗೋಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏನೇ ಅಪರಾಧ ಪ್ರಕರಣಗಳು, ಅಕ್ರಮಗಳು ನಡೆದರೆ ನೇರವಾಗಿ ಪೊಲೀಸರಿಗೆ ತಿಳಿಸಬೇಕೆಂದು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸರು ತಿಳಿಸಿದ್ದಾರೆ.




