ಬೆಂಗಳೂರು: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ, 18 ಜನರ ವಿರುದ್ಧ ಪ್ರಕರಣ

ಬೆಂಗಳೂರಿನ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರ ವಿರುದ್ಧ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 1.73 ಕೋಟಿ ರೂ. ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂಬ ನಿವಾಸಿಗಳ ದೂರಿನ ಮೇರೆಗೆ, ಬಾಗಲಗುಂಟೆ ಪೊಲೀಸರು 18 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ, 18 ಜನರ ವಿರುದ್ಧ ಪ್ರಕರಣ
ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌
Image Credit source: tv9

Updated on: Mar 20, 2026 | 2:43 PM

ಬೆಂಗಳೂರು, ಮಾರ್ಚ್ 20: ಬೆಂಗಳೂರು (Bangalore) ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಅಸೋಸಿಯೇಷನ್ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಪ್ರತಿ ಫ್ಲಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟಾರೆ ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಬಳಸದೇ, ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಲಾಗಿದೆ. ಉದಾಹರಣೆಗೆ; ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಜೊತೆಗೆ, ಆಡಿಟ್ ಖರ್ಚನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೆಂಡತಿ, ಮನೆ ಕೆಲಸದವರ ಬ್ಯಾಂಕ್ ಖಾತೆಗಳಿಗೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us