Anti Conversion Bill: ಸರ್ಕಾರದ ನಿರ್ಧಾರದಿಂದ ನಮಗೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್​ ಮಚೋಡೊ

ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದೆವು. ಆದರೆ ಹಟದಿಂದ ಮಸೂದೆಯನ್ನು ಸದನದಲ್ಲಿ ಮಂಡಿಸಲು ಮುಂದಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Anti Conversion Bill: ಸರ್ಕಾರದ ನಿರ್ಧಾರದಿಂದ ನಮಗೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್​ ಮಚೋಡೊ
ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 21, 2021 | 8:50 PM

ಬೆಂಗಳೂರು: ಕರ್ನಾಟಕ ಸರ್ಕಾರವೂ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶವನ್ನೇ ನೀಡದೆ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಕ್ರಿಸ್​ಮಸ್ ಹಬ್ಬದ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮಗೆ ನೋವುಂಟು ಮಾಡಿದೆ ಎಂದು ಆರ್ಚ್​ ಬಿಷಪ್ ಪೀಟರ್​ ಮಚೋಡೊ ಹೇಳಿದರು. ಈ ಕಾಯ್ದೆ ಜಾರಿಯಿಂದ ಕರ್ನಾಟಕಕ್ಕೆ ಏನೂ ಒಳಿತಾಗುವುದಿಲ್ಲ. ಈ ಕುರಿತು ನಾವು ಸಾಕಷ್ಟು ಪ್ರಯತ್ನ-ಪ್ರತಿಭಟನೆ ಮಾಡಿದೆವು. ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದೆವು. ಆದರೆ ಹಟದಿಂದ ಮಸೂದೆಯನ್ನು ಸದನದಲ್ಲಿ ಮಂಡಿಸಲು ಮುಂದಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಮೇತ ಮನವಿ ಮಾಡಲಾಯಿತು. ಆದರೆ ಹಟದಿಂದ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಲು ಮುಂದಾಗಿದ್ದಾರೆ. ಈ ಮಸೂದೆಯು ಕರ್ನಾಟಕ ರಾಜ್ಯಕ್ಕೆ ಹಿತಕರ ಅಲ್ಲ. ಸರ್ಕಾರದ ನಿರ್ಧಾರದಿಂದ ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ನೋವುಂಟಾಗಿದೆ. ಮಸೂದೆ ಮಂಡಿಸುವ ಮೊದಲು ಮತಾಂತರ ಅಂದರೆ ಏನು ಎಂದು ಚರ್ಚಿಸಬೇಕಿತ್ತು. ಆದರೆ ಚರ್ಚೆ ಮಾಡಿಲ್ಲ. ಸರ್ಕಾರ ಬಹುಶಃ ನಮಗೆ ಶಿಕ್ಷೆ ಕೊಡಲು ಮುಂದಾಗಿದೆ ಎಂದು ಕಾಣ್ತಿದೆ. ನಾವು ರಾಜ್ಯದಲ್ಲಿ ಸಾವಿರಾರು ಶಾಲೆ-ಆಸ್ಪತ್ರೆಗಳನ್ನು ನಡೆಸುತ್ತಿದ್ದೇವೆ ಎಲ್ಲಿಯಾದರೂ ಒಂದು ಕಡೆ ಮತಾಂತರವಾಗಿದ್ದರೆ ತಿಳಿಸಿ. ಆಗ ಸರಿಪಡಿಸುತ್ತೇವೆ ಎಂದು ನುಡಿದರು. ನಮ್ಮ ಶಾಲೆಗಳಿಗೆ ಬರುವ ಜನರಿಗೆ ಮತಾಂತರದ ಭಯವಿಲ್ಲ ಆದರೂ ಇಂಥ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.

ಇನ್ನೇನು ಕ್ರಿಸ್​ಮಸ್ ಹಬ್ಬ ಬರುತ್ತದೆ. ಎಲ್ಲರಿಗೂ ಕ್ರಿಸ್​ಮಸ್ ಹಬ್ಬದ ಸುಭಾಶಯಗಳು ಎಂದು ಹಾರೈಸಿದರು. ಕ್ರಿಸ್​ಮಸ್​ ಜೊತೆಗೆ ನೋವಿನಲ್ಲಿ ಸಂತೋಷ, ಸಂತೋಷದಲ್ಲಿ ನೋವು. ಕ್ರಿಸ್​ಮಸ್ ಸಂದರ್ಭದಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದರು.

ಸಿದ್ದರಾಮಯ್ಯ ಆಕ್ಷೇಪ ಬೆಳಗಾವಿ: ಸರ್ಕಾರವು ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಏಕಾಏಕಿ ಮಂಡಿಸಿದೆ. ವಿಧೇಯಕ ಮಂಡನೆ ಬಗ್ಗೆ ಅಜೆಂಡಾದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಸಚಿವರು ಉತ್ತರ ನೀಡುವಾಗ ಅರ್ಧಕ್ಕೆ ನಿಲ್ಲಿಸಿ ಮತಾಂತರ ನಿಷೇಧ ವಿಧೇಯಕ ಮಂಡನೆ ಕುರಿತು ಪ್ರಸ್ತಾಪಿಸಿದರು. ಕದ್ದು ಮುಚ್ಚಿ ವಿಧೇಯಕ ಮಂಡಿಸಿದ್ದು ಏಕೆ. ನಾವು ಇಲ್ಲದಿದ್ದಾಗ ವಿಧೇಯಕ ಮಂಡನೆ ಮಾಡಿದ್ದಾರೆ. ಈಗಾಗಲೇ ಇಂಥ ವಿಧೇಯಕಕ್ಕೆ ಗುಜರಾತ್‌ ಹೈಕೋರ್ಟ್‌ನಲ್ಲಿ ತಡೆ ನೀಡಲಾಗಿದೆ. ವಿಧೇಯಕ ಮೇಲಿನ ಚರ್ಚೆಯಲ್ಲಿ ನಾಳೆ (ಡಿ.22) ಭಾಗಿಯಾಗಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬೊಮ್ಮಾಯಿ ತಿರುಗೇಟು ಬೆಳಗಾವಿ: ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲಾಗಿದೆ ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ವಿಧೇಯಕ ಮಂಡನೆಗೆ ಅರ್ಧಗಂಟೆ ಮೊದಲೇ ಕಾಂಗ್ರೆಸ್ ಪಕ್ಷದ ಮುಖ್ಯ ಮುಖ್ಯ ಸಚೇತಕರಿಗೆ ಸ್ಪೀಕರ್ ಮಾಹಿತಿ ನೀಡಿದ್ದರು. ಆದರೂ ಅವರು ವಿಧೇಯಕ ಮಂಡಿಸುವಾಗ ಉಪಸ್ಥಿತರಿರಲಿಲ್ಲ. ಇದು ಬೇಜವಾಬ್ದಾರಿ ವಿರೋಧಪಕ್ಷ ಎಂದು ಬೊಮ್ಮಾಯಿ ಹರಿಹಾಯ್ದರು. ನಿಯಮದಂತೆಯೇ ಸದನದಲ್ಲಿ ನಾವು ವಿಧೇಯಕ ಮಂಡಿಸಿದ್ದೇವೆ. ಕೇವಲ ರಾಜಕಾರಣ ಅಥವಾ ಮತಬ್ಯಾಂಕ್​ಗಾಗಿ ಅವರು ವಿಧೇಯಕ ವಿರೋಧಿಸುತ್ತಿದ್ದಾರೆ. ಚರ್ಚೆಗೆ ಮುಕ್ತ ಅವಕಾಶವಿದೆ, ನಾಳೆ (ಡಿ.22) ಚರ್ಚೆ ಮಾಡಲಿ ಎಂದರು ಸಲಹೆ ಮಾಡಿದರು.

ಮತಾಂತರ ನಿಷೇಧ ವಿಧೇಯಕದ ಪೂರ್ಣ ಮೂಲಪಠ್ಯ ಓದಲು ಲಿಂಕ್: https://bit.ly/3qebmme

ಇದನ್ನೂ ಓದಿ: ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು

Published On - 8:37 pm, Tue, 21 December 21