
ಬೆಂಗಳೂರು, ಅಕ್ಟೋಬರ್ 14: ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ಮಹಿಳೆಯನ್ನು ನಂಬಿಸಿ, ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ವೆಂಕಟೇಶ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯಿಂದ ಪಡೆದಿದ್ದ 300 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚನೆ ಬಳಿಕ ಅಪಘಾತದ ಕಥೆ ಕಟ್ಟಿ, ಕೃತಕ ಬುದ್ಧಿಮತ್ತೆ (AI) ಮೂಲಕ ಸಿದ್ಧಪಡಿಸಿದ ವಿಡಿಯೋ ಕಳುಹಿಸಿ ಆರೋಪಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ.
62 ವರ್ಷದ ಶಾಂತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರಿಗೆ ಜ್ಯೋತಿಷಿ ವೆಂಕಟೇಶ್ ಪರಿಚಯವಾಗಿದ್ದ. ಪದೇಪದೆ ಅನಾರೋಗ್ಯ ಕಾಡುತ್ತಿರುವ ಬಗ್ಗೆ ಶಾಂತಮ್ಮ ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದ. ನಂತರ ಶಾಂತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು.
ಇದರಿಂದ ಜ್ಯೋತಿಷಿಯ ಮಾತಿನ ಮೇಲೆ ನಂಬಿಕೆ ಬೆಳೆಸಿಕೊಂಡಿದ್ದ ಶಾಂತಮ್ಮ, ಬಳಿಕ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಸಲಹೆ ಪಡೆಯಲು ಆತನನ್ನು ಹುಡುಕಿಕೊಂಡು ಬಂದಿದ್ದರು. ಆದರೆ, ಜ್ಯೋತಿಷಿ ಸಿಗದ ಕಾರಣ ಆಟೋ ಚಾಲಕನ ಬಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ತೆರಳಿದ್ದರು.
ನಂತರ ಶಾಂತಮ್ಮ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ವೆಂಕಟೇಶ್, ಅವರಿಗೆ ಕರೆ ಮಾಡಿ ಬ್ಯಾಟರಾಯನಪುರದಲ್ಲಿರುವ ಮನೆ ಬಳಿ ಬರುವಂತೆ ತಿಳಿಸಿದ್ದ. ಮನೆಗೆ ಬಂದ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ, ಚೌಡೇಶ್ವರಿ ಪೂಜೆ ಮಾಡಬೇಕು ಎಂದು ಹೇಳಿದ್ದ. ಮನೆಯಲ್ಲಿದ್ದ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ ಎನ್ನಲಾಗಿದೆ.
ಇದೇ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಶಾಂತಮ್ಮ ಅವರ ಮನೆಗೆ ಬರುತ್ತಿದ್ದ ವೆಂಕಟೇಶ್, ಒಡವೆಗಳನ್ನು ಪಡೆದುಕೊಂಡು ಹೋಗುತ್ತಿದ್ದ. ಹೀಗೆ ಸುಮಾರು ಒಂದು ವರ್ಷದಲ್ಲಿ ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 19ರಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ಚಿನ್ನಾಭರಣಗಳನ್ನು ವಾಪಸ್ ಕೇಳಿದ್ದರು. ಆದರೆ, ಅದೇ ದಿನ ವೆಂಕಟೇಶ್ ಅಪಘಾತವಾಗಿದೆ ಎಂಬ ಕಥೆ ಕಟ್ಟಿದ್ದ. ತಾನು ಅಪಘಾತಕ್ಕೀಡಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಬಿಂಬಿಸುವ ಎಐ ಮೂಲಕ ಸಿದ್ಧಪಡಿಸಿದ ವಿಡಿಯೋವೊಂದನ್ನು ಶಾಂತಮ್ಮ ಅವರಿಗೆ ಕಳುಹಿಸಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಇದರಿಂದ ಆತಂಕಗೊಂಡ ಶಾಂತಮ್ಮ, ಈ ವಿಚಾರವನ್ನು ಮಗಳ ಬಳಿ ಹೇಳಿಕೊಂಡಿದ್ದರು. ಮಗಳು ವಿಡಿಯೋ ಪರಿಶೀಲಿಸಿದಾಗ ಅದು ಎಐ ಮೂಲಕ ಸಿದ್ಧಪಡಿಸಿದ ಕೃತಕ ವಿಡಿಯೋ ಎಂಬುದು ಪತ್ತೆಯಾಗಿತ್ತು. ಬಳಿಕ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬ್ಯಾಟರಾಯನಪುರ ಪೊಲೀಸರು ಆರೋಪಿ ವೆಂಕಟೇಶ್ನನ್ನು ಬಂಧಿಸಿದ್ದಾರೆ. ವೃದ್ಧೆಯಿಂದ ಪಡೆದಿದ್ದ 300 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ