ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು! ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಾಗಿದೆ ಎಂದು 'X' ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ಕಾಯಬೇಕೋ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು! ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ
ತೇಜಸ್ವಿ ಸೂರ್ಯ
Image Credit source: Tejaswi Surya X account

Updated on: Jun 30, 2026 | 12:42 PM

ಮುಖ್ಯಾಂಶಗಳು

  • ಬಿಎಂಟಿಸಿ ಬಸ್‌ಗಳ ಕೊರತೆ ಕುರಿತು ಸಂಸದ ತೇಜಸ್ವಿ ಸೂರ್ಯ ಅಸಮಾಧಾನ.
  • ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ಗಾಗಿ ರಸ್ತೆಯಲ್ಲೇ ಕಾಯುವಂತಾಗಿದೆ ಎಂದು ಟೀಕೆ.
  • ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ನಿಲ್ಲಬೇಕೋ ಎಂದು ಪ್ರಶ್ನೆ.

ಬೆಂಗಳೂರು, ಜೂನ್ 30: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಸೋಮವಾರ ಖುದ್ದು ಬಿಎಂಟಿಸಿ ಬಸ್ಸಿನಲ್ಲಿ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಕರ ಅಳಲು ಆಲಿಸಿದ್ದರು. ಇದೀಗ ಬಿಎಂಟಿಸಿ ಬಸ್​ ಸ್ಟ್ಯಾಂಡ್​ ಒಂದರಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿ ಅಲ್ಲಿನ ದುಸ್ಥಿತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಎಂಟಿಸಿ ಪ್ರಯಾಣಿಕರ ದೈನಂದಿನ ಪರದಾಟವನ್ನು ತಪಸ್ಸಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ!

ಉತ್ತಮ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಸ್‌ಗಳ ಸಂಖ್ಯೆಯನ್ನು ಕನಿಷ್ಠ 15,000 ಕ್ಕೆ ಹೆಚ್ಚಿಸಬೇಕು. ನಗರದ ಯಾವುದೇ ಭಾಗದಲ್ಲಾದರೂ ಸರಿ, ಪ್ರತಿ ಪ್ರಜೆಗೆ ಐದು ನಿಮಿಷಗಳಲ್ಲಿ ಬಸ್ ಸಿಗುವಂತಾಗಲು ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಈ ಹಿಂದೆ ಮಾಡಿದ್ದ ಹಳೆಯ ಪೋಸ್ಟ್ ಅನ್ನು ನೆನಪಿಸಿಕೊಂಡಿದ್ದಾರೆ. ಆ ಪೋಸ್ಟ್ ಮಾಡಿ ಎಂಟು ತಿಂಗಳು ಕಳೆದಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ ಹಾಗೂ ಹೊಸ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದಿದ್ದರೂ ಬೆಂಗಳೂರಿನ ಬಿಎಂಟಿಸಿ ಸ್ಥಿತಿ ಮಾತ್ರ ಹಳೇ ಕಥೆಯನ್ನೇ ಮುಂದುವರಿಸಿದೆ ಎಂದು ಅವರು ಟೀಕಿಸಿದ್ದಾರೆ.

ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲಿ ಕಾಯಬೇಕೋ? ಸಿಎಂಗೆ ಪ್ರಶ್ನೆ

“ನಾನು ಈ ವಿಷಯವನ್ನು ಕೆಲವು ತಿಂಗಳ ಹಿಂದೆಯೇ ಪ್ರಸ್ತಾಪಿಸಿದ್ದೆ. ಆದರೆ ಇಂದಿಗೂ ಬಿಎಂಟಿಸಿ ಪ್ರಯಾಣಿಕರು ಬಸ್‌ಗಳಿಗಾಗಿ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಗಿದೆ. ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಿನಂತಾಗಿದೆ” ಎಂದು X ಪೋಸ್ಟ್ ಮೂಲಕ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರ ದೈನಂದಿನ ಕಷ್ಟವನ್ನು ಉಲ್ಲೇಖಿಸಿ, ಪ್ರಯಾಣಿಕರ ನಿತ್ಯದ ಗೋಳು ಹೀಗಿದ್ದರೆ, ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕೋ ಅಥವಾ ರಸ್ತೆ ಬದಿಯಲ್ಲೇ ನಿಂತು ಸಮಯ ವ್ಯರ್ಥ ಮಾಡಬೇಕೋ? ಗೌರವಾನ್ವಿತ ಮುಖ್ಯಮಂತ್ರಿಗಳೇ ಉತ್ತರಿಸಿ! ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂಓದಿ ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಬೆಂಗಳೂರಿನಲ್ಲಿ ನಂಬಿಕಸ್ಥ ಮತ್ತು ನಿರಂತರ ಸಾರ್ವಜನಿಕ ಸಾರಿಗೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದರು ಆಗ್ರಹಿಸಿದ್ದಾರೆ. ಬಿಎಂಟಿಸಿ ಬಸ್ ಗಾಗಿ ಕಾಯುವುದೇ ಒಂದು ದೊಡ್ಡ ತಪಸ್ಸು ! ಎಂದು ಅವರು ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us