ಮಗು ಮಾರಾಟ ಕೇಸ್​ಗೆ ಬಿಗ್ ಟ್ವಿಸ್ಟ್: ಅಕ್ರಮ ಸಂಬಂಧ ಮುಚ್ಚಿಡಲು ಪತ್ನಿಯ ವಿರುದ್ಧವೇ ಸುಳ್ಳು ದೂರು!

ಬೆಂಗಳೂರಿನ ವಿವೇಕನಗರದಲ್ಲಿ ಪತ್ನಿ ಮಗುವನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆಂದು ಪತಿ ನೀಡಿದ್ದ ದೂರು ಸುಳ್ಳೆಂದು ಸಾಬೀತಾಗಿದೆ. ಪತಿ ರವಿಬಾಬು ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ಪತ್ನಿ ಮಕ್ಕಳೊಂದಿಗೆ ಮನೆ ಬಿಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ತಾಯಿ-ಮಕ್ಕಳನ್ನು ಪತ್ತೆಹಚ್ಚಿದ್ದು, ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಪತಿ ಕಟ್ಟುಕಥೆ ಕಟ್ಟಿರುವುದು ಬಯಲಾಗಿದೆ.

ಮಗು ಮಾರಾಟ ಕೇಸ್​ಗೆ ಬಿಗ್ ಟ್ವಿಸ್ಟ್: ಅಕ್ರಮ ಸಂಬಂಧ ಮುಚ್ಚಿಡಲು ಪತ್ನಿಯ ವಿರುದ್ಧವೇ ಸುಳ್ಳು ದೂರು!
ಮಗು ಮಾರಾಟ ಕೇಸ್​ಗೆ ಬಿಗ್ ಟ್ವಿಸ್ಟ್
Image Credit source: google Gemini

Updated on: May 05, 2026 | 12:03 PM

ಬೆಂಗಳೂರು, ಮೇ 05: ತನ್ನ ಜೊತೆ ಜಗಳವಾಡಿ ಮನೆ ಬಿಟ್ಟು ಹೋದ ಪತ್ನಿ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ  (Child Sale) ಮಾಡಿದ್ದಾಳೆ ಎಂದು ದೂರು ನೀಡಿದ್ದ ರವಿಬಾಬು ಅಸಲಿ ಮುಖವಾಡ ಕಳಚಿದೆ. ಪೊಲೀಸರು ನಡೆಸಿದ ಚುರುಕಿನ ತನಿಖೆಯಲ್ಲಿ ಮಗು ಮಾರಾಟವಾಗಿಲ್ಲ ಮತ್ತು ತಾಯಿ ತನ್ನ ಮೂವರೂ ಮಕ್ಕಳೊಂದಿಗೆ ಸುರಕ್ಷಿತವಾಗಿದ್ದಾರೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ಬಯಲಾದ ಅಚ್ಚರಿಯ ಸತ್ಯ

ಪತಿ ರವಿಬಾಬು ನೀಡಿದ್ದ ದೂರಿನ ಮೇರೆಗೆ ಸತ್ಯದ ಬೆನ್ನತ್ತಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ, ಪತ್ನಿ ಮಗುವನ್ನು ಮಾರಾಟ ಮಾಡಿಲ್ಲ, ಬದಲಾಗಿ ಪತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ಮಕ್ಕಳೊಂದಿಗೆ ಮನೆ ಬಿಟ್ಟಿರುವುದು ತಿಳಿದುಬಂದಿದೆ. 16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರೂ ಪತಿ ರವಿಬಾಬುಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿತ್ತು ಹಾಗೂ ಎರೆಡೆರಡು ಮೊಬೈಲ್‌ಗಳನ್ನು ಬಳಸಿ ತನಗೆ ವಂಚಿಸುತ್ತಿದ್ದ ಎಂದು ಪತ್ನಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಸುಳ್ಳು ದೂರು

ಪತಿಯ ನಿರಂತರ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ತನ್ನ ತವರು ಮನೆಯಲ್ಲೂ ಜಗಳವಾಗಿದ್ದರಿಂದ ಯಾರ ಸಹಾಯವೂ ಇಲ್ಲದೆ ಕಂಗಾಲಾಗಿದ್ದ ಮಹಿಳೆ, ಮಕ್ಕಳೊಂದಿಗೆ ಸುರಕ್ಷಿತವಾಗಿರಲು ನಿರ್ಧರಿಸಿ ಮನೆ ಬಿಟ್ಟು ಹೋಗಿದ್ದರು. ಆದರೆ, ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಮತ್ತು ಪತ್ನಿಯನ್ನು ಸಿಲುಕಿಸಲು ಪತಿ ರವಿಬಾಬು ಮಗು ಮಾರಾಟದ ಕಟ್ಟುಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

ವಿವೇಕನಗರ ಪೊಲೀಸರು ತಾಯಿ ಮತ್ತು ಮೂವರು ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿದ್ದಾಳೆಂಬ ಗಂಭೀರ ಆರೋಪ ಹೊರಿಸಿದ್ದ ಪತಿಯನ್ನೇ ಈಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us