ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್

ಬೆಂಗಳೂರಿನಲ್ಲಿ ಜೀವನ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ವೈರಲ್ ಪೋಸ್ಟ್‌ ಒಂದು ಈಗ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಗಳಿಸುವ ಟೆಕ್ಕಿಯೊಬ್ಬರಿಗೆ ಕೇವಲ 15-20 ಸಾವಿರ ರೂ. ಮಾತ್ರ ಉಳಿಯುತ್ತಿದೆ ಎಂದು ಅವರ ಸೋದರ ಸಂಬಂಧಿ ಮಾಡಿರುವ ಎಕ್ಸ್​ ಸಂದೇಶ ವೈರಲ್ ಆಗಿದೆ. ಬಾಡಿಗೆ, ಆಹಾರ, ಸಾರಿಗೆ, ಮನರಂಜನೆ ಇತ್ಯಾದಿ ಖರ್ಚುಗಳಿಂದ ಉಳಿತಾಯ ಕಷ್ಟವಾಗಿದೆ. ಇದು ಬೆಂಗಳೂರಿನ ಮಹಾನಗರ ಜೀವನದ ಕಠಿಣ ವಾಸ್ತವ ಚಿತ್ರಣವನ್ನು ತೋರಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Mar 15, 2026 | 1:05 PM

ಬೆಂಗಳೂರು, ಮಾರ್ಚ್ 15: ಬೆಂಗಳೂರಿನಲ್ಲಿ (Bangalore) ಜೀವನ ನಿರ್ವಹಣೆ ವೆಚ್ಚ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುವ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಪಡೆದರೂ ತಿಂಗಳ ಕೊನೆಯಲ್ಲಿ ಕೇವಲ 15 ರಿಂದ 20 ಸಾವಿರ ರೂ. ಮಾತ್ರ ಉಳಿಯುತ್ತದೆ ಎಂಬ ಟೆಕ್ಕಿಯೊಬ್ಬರ ಅನುಭವವನ್ನು ಅವರ ಸೋದರ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.

@AlfinCodes ಎಂಬ ಎಕ್ಸ್​ ಖಾತೆಯಲ್ಲಿ ವ್ಯಕ್ತಿಯೊಬ್ಬರು ಸೋದರಸಂಬಂಧಿಯ ಅನುಭವವನ್ನು ವಿವರಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಆತ ಸಾಫ್ಟ್‌ವೇರ್ ಡೆವಲಪರ್ ಆಗಿ ಉತ್ತಮ ಅವಕಾಶ ದೊರೆತು ತಿಂಗಳಿಗೆ 1.5 ಲಕ್ಷ ಸಂಬಳದ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದಾನೆ. ಆರಂಭದಲ್ಲಿ ಕುಟುಂಬದವರು ದೊಡ್ಡ ನಗರ, ದೊಡ್ಡ ಸಂಬಳ ಎಂಬ ನಿರೀಕ್ಷೆಯೊಂದಿಗೆ ಅವನು ಯಶಸ್ಸು ಸಾಧಿಸಿದ್ದಾನೆ ಎಂದು ಭಾವಿಸಿದ್ದರು. ಆದರೆ, ಬೆಂಗಳೂರಿನ ನೈಜ ಪರಿಸ್ಥಿತಿ ಬೇಗನೆ ಗೊತ್ತಾಯಿತು ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಕಚೇರಿಯ ಸಮೀಪದ ಸಣ್ಣ ಅಪಾರ್ಟ್‌ಮೆಂಟ್‌ನ ಬಾಡಿಗೆಗೆ ತಿಂಗಳಿಗೆ ಸುಮಾರು 36 ಸಾವಿರ ರೂ. ಖರ್ಚಾಗುತ್ತಿತ್ತು. ಆಹಾರ ಮತ್ತು ದಿನಸಿ ವೆಚ್ಚಗಳಿಗೆ 13 ಸಾವಿರದಿಂದ 15 ಸಾವಿರ ರೂ.ವರೆಗೆ ಹೋಗುತ್ತಿತ್ತು. ನಗರದಲ್ಲಿನ ಭಾರೀ ಟ್ರಾಫಿಕ್ ಕಾರಣದಿಂದ ಕ್ಯಾಬ್ ಮತ್ತು ಆಟೋ ಪ್ರಯಾಣಕ್ಕೆ ತಿಂಗಳಿಗೆ 6 ಸಾವಿರದಿಂದ 8 ಸಾವಿರ ರೂ.ವರೆಗೆ ಖರ್ಚಾಗುತ್ತಿತ್ತು.

ಇದಕ್ಕೂ ಮೇಲಾಗಿ ಸ್ವಿಗ್ಗಿ ಆರ್ಡರ್, ಕಾಫಿ ಹಾಗೂ ವಾರಾಂತ್ಯದ ಖರ್ಚುಗಳಿಗೆ ಸುಮಾರು 10 ಸಾವಿರದಿಂದ 12 ಸಾವಿರ ರೂ.ವರೆಗೆ ವೆಚ್ಚವಾಗುತ್ತಿತ್ತು. ಇದಲ್ಲದೆ ಚಂದಾದಾರಿಕೆಗಳು, ವೈದ್ಯಕೀಯ ವೆಚ್ಚಗಳು, ಅನಿರೀಕ್ಷಿತ ಬಿಲ್‌ಗಳು ಹಾಗೂ ಮನೆಗೆ ಹಣ ಕಳುಹಿಸುವುದು ಸೇರಿದಂತೆ ಹಲವಾರು ಖರ್ಚುಗಳು ಕೂಡ ಸೇರಿಕೊಳ್ಳುತ್ತವೆ ಎಂದು ಎಕ್ಸ್​ ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಎಲ್ಲ ಖರ್ಚುಗಳ ಬಳಿಕ ತಿಂಗಳ ಕೊನೆಯಲ್ಲಿ ಆತನ ಬಳಿ ಉಳಿಯುತ್ತಿದ್ದದ್ದು ಕೇವಲ 15 ಸಾವಿರದಿಂದ 20 ಸಾವಿರ ರೂ. ಮಾತ್ರ ಎಂದು ಪೋಸ್ಟ್​​ನಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ಆಗಿರುವ ಎಕ್ಸ್ ಪೋಸ್ಟ್


ಈ ಅನುಭವದಿಂದ ದೊಡ್ಡ ನಗರಗಳಲ್ಲಿ ಸಂಬಳದ ಅರ್ಥವೇ ಬೇರೆ ಎಂದು ಅವನಿಗೆ ತಿಳಿಯಿತು ಎಂದು ಎಕ್ಸ್ ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಊರಿನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಎಂದರೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಅದು ನೀವು ಜೀವನವನ್ನು ಆರಂಭಿಸುತ್ತಿದ್ದೀರಿ ಅಷ್ಟೇ ಎಂದರ್ಥ. ದೊಡ್ಡ ಸಂಬಳ, ಆದರೆ ಸಣ್ಣ ಉಳಿತಾಯ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಜೀವನ ವೆಚ್ಚ ನಿಜವಾಗಿಯೂ ದುಬಾರಿ ಎಂದು ಒಪ್ಪಿಕೊಂಡರೆ, ಇನ್ನೂ ಕೆಲವರು ಮೆಟ್ರೋ ಮಾರ್ಗದ ಬಳಿ ಅಥವಾ ಕಚೇರಿಯಿಂದ ಸ್ವಲ್ಪ ದೂರದ ಪ್ರದೇಶಗಳಲ್ಲಿ ಮನೆ ತೆಗೆದುಕೊಂಡರೆ ಬಾಡಿಗೆ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ : ಬ್ರೋ ಕೋಡ್’ ಸಂಸ್ಕೃತಿ ವೈರಲ್

ಒಟ್ಟಿನಲ್ಲಿ, ದೊಡ್ಡ ಸಂಬಳ ಇದ್ದರೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ ಉಳಿತಾಯ ಕಡಿಮೆಯಾಗುತ್ತದೆ ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us