ವಿಡಿಯೋ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ ಹೇಳಿದ್ದಕ್ಕೆ ಬಟ್ಟೆಬಿಚ್ಚಿ ಲಕ್ಷಾಂತರ ರೂ. ಕಳೆದುಕೊಂಡ ಯುವ ಕ್ರಿಕೆಟಿಗ!
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ವಿಡಿಯೋ ಕಾಲ್ ಮಾಡಿ ಯುವ ಕ್ರಿಕೆಟಿಗನನ್ನು ಬಟ್ಟೆಬಿಚ್ಚುವಂತೆ ಮಾಡಿದ್ದು, ನಂತರ ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು
- ಡೇಟಿಂಗ್ ಆ್ಯಪ್ ಪರಿಚಯ, ವಿಡಿಯೋ ಕಾಲ್ ಬಲೆ
- ಬೆದರಿಕೆ ಹಾಕಿ ಹಣ ವರ್ಗಾವಣೆ ಮಾಡಿಸಿಕೊಂಡ ವಂಚಕರು
- ಸೈಬರ್ ವಂಚಕರ ಬಗ್ಗೆ ಎಚ್ಚರಿಕೆ ವಹಿಸಲು ಪೊಲೀಸರಿಂದ ಸಲಹೆ
ಬೆಂಗಳೂರು, ಜುಲೈ 23: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತ ಮಹಿಳೆಯೊಬ್ಬಳು ವಿಡಿಯೋ ಕಾಲ್ ಮಾಡಿ ಯುವ ಕ್ರಿಕೆಟಿಗನನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣ ಪಡೆದುಕೊಂಡ ಬಳಿಕವೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಮಹಿಳೆ ವಿಡಿಯೋ ಕಾಲ್ಗೆ ಫಿದಾ ಆಗಿದ್ದ ಮಹಾರಾಷ್ಟ್ರದ ಕ್ರಿಕೆಟಿಗ
ಮಹಾರಾಷ್ಟ್ರ ಮೂಲದ ಯುವ ಕ್ರಿಕೆಟಿಗ ಬೆಂಗಳೂರಿನ ಉತ್ತರ ಭಾಗದ ಖಾಸಗಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿದೆ. ಅವರು ಡೇಟಿಂಗ್ ಆ್ಯಪ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ್ದರು. ಅದರಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕರೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರಂಭದಲ್ಲಿ ಮಹಿಳೆ ವಿಡಿಯೋ ಕರೆಯಲ್ಲೇ ಅಶ್ಲೀಲ ವರ್ತನೆ ತೋರಿದ್ದಳು. ಅದರಿಂದ ಪ್ರಚೋದನೆಗೆ ಒಳಗಾದ ಯುವಕ ಕೂಡ ಬಟ್ಟೆಬಿಚ್ಚಿದ್ದ. ಸುಮಾರು 30 ಸೆಕೆಂಡ್ ಬಳಿಕ ಮಹಿಳೆ ಕರೆ ಕಡಿತಗೊಳಿಸಿದ್ದಳು.
ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್
ಸ್ವಲ್ಪ ಸಮಯದ ನಂತರ ಅದೇ ಮಹಿಳೆ ಹಾಗೂ ಆಕೆಯ ಗ್ಯಾಂಗ್, ಕ್ರಿಕೆಟಿಗನ ವಿಡಿಯೋ ಮತ್ತು ಚಿತ್ರಗಳನ್ನು ಕಳುಹಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದೆ. ಮಾನಹಾನಿಯ ಭಯದಿಂದ ಯುವ ಕ್ರಿಕೆಟಿಗ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ನಂತರವೂ ಮತ್ತಷ್ಟು ಹಣಕ್ಕಾಗಿ ನಿರಂತರವಾಗಿ ಕರೆ ಮಾಡಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು
ಈ ಬೆಳವಣಿಗೆಯಿಂದ ಆತಂಕಗೊಂಡ ಯುವ ಕ್ರಿಕೆಟಿಗ ಸ್ನೇಹಿತರ ಸಲಹೆ ಪಡೆದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಿಚಿತರಿಂದ ವಿಡಿಯೋ ಕರೆ ಬಂದರೆ ಎಚ್ಚರ
ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಸೈಬರ್ ಪೊಲೀಸರು, ಅಪರಿಚಿತ ವಿಡಿಯೋ ಕರೆಗಳನ್ನು ಸ್ವೀಕರಿಸುವುದು, ಡೇಟಿಂಗ್ ಆ್ಯಪ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಅಪರಿಚಿತರ ಪ್ರಚೋದನೆಗೆ ಒಳಗಾಗುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಇಂತಹ ವಂಚನೆಗಳು ಹೆಚ್ಚುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 23 July 26



