ಡಿಜಿಟಲ್ ಅರೆಸ್ಟ್ ವಂಚನೆಗೆ ಹೆದರಿ ಫ್ಲಾಟ್, ಸೈಟ್ ಮಾರಿದ್ದಲ್ಲದೆ ಸಾಲ ಮಾಡಿ 2 ಕೋಟಿ ರೂ. ಕಳೆದುಕೊಂಡ ಮಹಿಳಾ ಟೆಕ್ಕಿ
ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಬಲಿಯಾಗಿ 2 ಕೋಟಿ ರೂ. ಕಳೆದುಕೊಂಡಿದ್ದಾರೆ. ನಕಲಿ ಮುಂಬೈ ಪೊಲೀಸರು ಬ್ಲೂ ಡಾರ್ಟ್ ಹೆಸರಲ್ಲಿ ಕರೆ ಮಾಡಿದ್ದರಿಂದ ಹೆದರಿ ಫ್ಲಾಟ್, ಸೈಟ್‌ಗಳನ್ನು ಮಾರಿದ್ದಲ್ಲದೆ ಸಾಲ ಮಾಡಿ ಹಣ ನೀಡಿದ ನಂತರ ವಂಚನೆ ಅರಿತಿದ್ದಾರೆ.

ಬೆಂಗಳೂರು, ಡಿಸೆಂಬರ್ 16: ಮಹಿಳಾ ಟೆಕ್ಕಿಯೊಬ್ಬರು ಸೈಬರ್ ವಂಚಕರ ‘ಡಿಜಿಟಲ್ ಅರೆಸ್ಟ್ (Digital Arrest)’ ಭೀತಿಗೆ ಒಳಗಾಗಿ ಫ್ಲಾಟ್, ಸೈಟ್‌ಗಳನ್ನು ಮಾರಾಟ ಮಾಡಿ ಸುಮಾರು 2 ಕೋಟಿ ರೂ. ಹಣ ಕಳೆದುಕೊಂಡ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭಾರೀ ವಂಚನೆಗೆ (Online Fraud) ಒಳಗಾಗಿದ್ದಾರೆ. 10 ವರ್ಷದ ಮಗನೊಂದಿಗೆ ವಾಸವಾಗಿದ್ದ ಮಹಿಳೆಗೆ ಕೆಲ ತಿಂಗಳ ಹಿಂದೆ ಬ್ಲೂ ಡಾರ್ಟ್ ಕೋರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗೇಜ್ ಪತ್ತೆಯಾಗಿದೆ ಎಂದು ಬೆದರಿಕೆ ಹಾಕಿದ್ದರು.
ಬಳಿಕ ವಿಡಿಯೋ ಕಾಲ್ ಮೂಲಕ ‘ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಹೆದರಿಸಿ, ವೆರಿಫಿಕೇಶನ್ ನಡೆಯುವವರೆಗೂ ಎಲ್ಲೂ ಹೋಗಬಾರದು. ನಾವು ಹೇಳುವ ಆ್ಯಪ್ ಇನ್‌ಸ್ಟಾಲ್ ಮಾಡಬೇಕು ಹಾಗೂ ಹೇಳಿದಷ್ಟು ಹಣವನ್ನು ನಮ್ಮ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದರು.
ಫ್ಲಾಟ್, ಸೈಟ್ ಮಾರಿದ್ದಲ್ಲದೆ ಸಾಲ ಮಾಡಿ ಹಣ ಕೊಟ್ಟ ಮಹಿಳೆ!
ವಿಚಾರಣೆಗೆ ಸರಿಯಾಗಿ ಸಹಕರಿಸಿ ಹೇಳಿದಂತೆ ಮಾಡದಿದ್ದರೆ ನಿಮ್ಮ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ನಕಲಿ ಮುಂಬೈ ಪೊಲೀಸರು ಬೆದರಿಕೆ ಹಾಕಿದ್ದರು. ಈ ಮಾತುಗಳಿಗೆ ಹೆದರಿದ ಟೆಕ್ಕಿ, ಸೈಬರ್ ಖದೀಮರ ಸೂಚನೆಗಳನ್ನು ಅನುಸರಿಸಿದ್ದಾರೆ. ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿ ಇದ್ದ ತಮ್ಮ ಎರಡು ಸೈಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ವಿಜ್ಞಾನ ನಗರದಲ್ಲಿದ್ದ ಫ್ಲಾಟ್ ಅನ್ನೂ ಮಾರಾಟ ಮಾಡಿದ್ದಾರೆ. ಜೊತೆಗೆ ಐಸಿಐಸಿಐ ಬ್ಯಾಂಕ್‌ನಲ್ಲಿ ಲೋನ್ ಪಡೆದು, ಹಂತ ಹಂತವಾಗಿ ವಂಚಕರ ಖಾತೆಗೆ ಹಣ ಜಮಾ ಮಾಡಿದ್ದಾರೆ.
ಈ ರೀತಿ ಒಟ್ಟು ಸುಮಾರು 2 ಕೋಟಿ ರೂಪಾಯಿ ಹಣ ಕಳೆದುಕೊಂಡ ಬಳಿಕ ಮೋಸ ಹೋಗಿರುವ ಅನುಮಾನ ಬಂದಿದೆ. ತಕ್ಷಣವೇ ವೈಟ್‌ಫೀಲ್ಡ್ ಸಿಇಎನ್ (Cyber, Economic & Narcotics) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಲಾಭದ ಹಣ ದಾನ ಮಾಡುವುದಕ್ಕೆಂದು ಹೂಡಿಕೆ ಮಾಡಿದ ಉದ್ಯಮಿಗೆ ಕಾದಿತ್ತು ಶಾಕ್: 8 ಕೋಟಿ ರೂ. ಖತಂ!
ಬೆಂಗಳೂರು ಪೊಲೀಸರು ಹೇಳಿದ್ದೇನು?
ಮಹಿಳಾ ಟೆಕ್ಕಿಯನ್ನು ಬೆದರಿಸಿ ಸೈಬರ್ ವಂಚಕರು ಹಣ ಪಡೆದಿದ್ದಾರೆ ಎಂದು ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಮಾಹಿತಿ ನೀಡಿದ್ದಾರೆ. ವಂಚನೆ ಪ್ರಕರಣ ಸಂಬಂಧ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಎಂಬುದಿಲ್ಲ, ಯಾರೂ ಹೆದರುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಯಾವುದೇ ಪೊಲೀಸರು ರೂಮ್ನಲ್ಲಿ ಕೂರಿಸಿ ಅರೆಸ್ಟ್ ಮಾಡಲ್ಲ. ವಿಡಿಯೋ ಕಾಲ್ ಮೂಲಕ ಅರೆಸ್ಟ್ ಎಂದು ಪೊಲೀಸರು ಹೇಳಲ್ಲ. ಇಂತಹ ಬೆದರಿಕೆ ಕರೆಗಳಿಗೆ ಯಾರೊಬ್ಬರು ತಲೆ ಕಡೆಸಿಕೊಳ್ಳಬಾರದು. ಇಂತಹ ಬೆದರಿಕೆ ಕರೆ ಬಂದರೆ ತಕ್ಷಣ 1930ಗೆ ಕರೆ ಮಾಡಿ ತಿಳಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Tue, 16 December 25



