ವಿಶೇಷಚೇತನ ಮಗನಿಗೇ ವಿಷ ಹಾಕಿದ ತಂದೆ; ಕಾರಣ ಕೇಳಿದರೆ ಶಾಕ್ ಆಗ್ತೀರಾ!
ಚಿಕಿತ್ಸೆಗೆ ಹಣವಿಲ್ಲದೆ ಹತಾಶನಾದ ತಂದೆಯೊಬ್ಬ ತನ್ನ ವಿಶೇಷಚೇತನ ಮಗನಿಗೆ ವಿಷವಿಕ್ಕಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗು ಪ್ರಸ್ತುತ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ತಾಯಿ ದೂರಿನ ಆಧಾರದ ಮೇಲೆ ಪೊಲೀಸರು ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು, ಜನವರಿ 04: ಹೆತ್ತ ಮಕ್ಕಳನ್ನು ಸಾಕಲು ತಂದೆ-ತಾಯಿ ಕಷ್ಟ ಪಟ್ಟು ದುಡಿಯುತ್ತಾರೆ. ತಮಗೆಷ್ಟೇ ತೊಂದರೆಗಳಿದ್ದರೂ ಮಕ್ಕಳ ಮುಖ ನೋಡಿಕೊಂಡು ನೋವು ನುಂಗಿಕೊಂಡಿರುತ್ತಾರೆ. ಆದರೆ ಇಲ್ಲೋರ್ವ ಪಾಪಿ ತಂದೆ, ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗನಿಗೇ ವಿಷ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ಈ ಕುಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.
ಮಗುವಿನ ಸ್ಥಿತಿ ಗಂಭೀರ
ಬಾಗಲೂರು ನಿವಾಸಿಗಳಾದ ಸತ್ಯ ಮತ್ತು ಮುನಿಕೃಷ್ಣ ದಂಪತಿಯ ಮಗ ಜೋಯಲ್ ಹುಟ್ಟಿನಿಂದಲೇ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ವಿಶೇಷ ಚೇತನತೆಯಿಂದ ಬಳಲುತ್ತಿದ್ದ. ಮಗುವಿನ ನಿರಂತರ ಚಿಕಿತ್ಸೆ, ಆಸ್ಪತ್ರೆಗಳ ಓಡಾಟ ಮತ್ತು ಹೆಚ್ಚುತ್ತಿರುವ ಖರ್ಚಿನಿಂದ ಮಾನಸಿಕವಾಗಿ ಕುಗ್ಗಿದ್ದ ತಂದೆ ಮುನಿಕೃಷ್ಣ ಈ ಕೃತ್ಯ ಎಸಗಿದ್ದಾನೆ.
ಡಿಸೆಂಬರ್ 22ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಮಗು ಬಾಯಲ್ಲಿ ನೊರೆ ಕಂಡು ತಾಯಿ ಹಾಗೂ ಅಜ್ಜಿ ಗಾಬರಿ ಆಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಮಗು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ. ಘಟನೆ ಬಗ್ಗೆ ಪತ್ನಿ ಸತ್ಯ ನೀಡಿರುವ ದೂರಿನ ಅನ್ವಯ ಮುನಿಕೃಷ್ಣ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!
ಮಗನಿಗೆ ಕೀಟನಾಶಕ ಕುಡಿಸಿದ್ದನ್ನು ಒಪ್ಪಿಕೊಂಡ ತಂದೆ
ಅಮಾನವೀಯ ಕೃತ್ಯದ ಬಳಿಕ ಟಿವಿ9 ಜೊತೆ ಮಾತನಾಡಿರುವ ತಂದೆ ಮುನಿಕೃಷ್ಣ, ವಿಶೇಷಚೇತನನಾದ ನನ್ನ ಮಗನ ಚಿಕಿತ್ಸೆಗೆ ಹಣವಿಲ್ಲ. ನನಗೆ ಯಾರು ಸಪೋರ್ಟ್ ಮಾಡಿಲ್ಲ. ಇದಲ್ಲದೇ ವೈದ್ಯರೂ ಕೈಚೆಲ್ಲಿದ್ದರು. ನಾನು ಕೆಲಸಕ್ಕೆ ಹೋಗುವ ಕಡೆ ಗಿಡಗಳಿಗೆ ಔಷಧ ಹೊಡೆಯುತ್ತಿದ್ದರು. ಅವರ ಬಳಿ 50 ಮಿ.ಲಿ ಕಿಟನಾಶಕ ತಂದು ಮಗನ ಆಹಾರಕ್ಕೆ ಹಾಕಿದ್ದೆ. ಆತನ ಚಿಕಿತ್ಸೆಗೆ ಸಾಕಷ್ಟು ಸಾಲ ಮಾಡಿದ್ದೇನೆ. ಹೀಗಾಗಿಯೇ ವಿಷ ಹಾಕಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:25 am, Sun, 4 January 26