ಊರು, ಊಟದ ವಿಚಾರಕ್ಕೆ ಪತ್ನಿ ಕೊಲೆ: 7 ದಿನಗಳ ಕಾರ್ಯಾಚರಣೆ ನಂತರ ಬಿಹಾರ-ನೇಪಾಳ ಗಡಿಯಲ್ಲಿ ಹಂತಕ ಬಂಧನ, ಹೇಗಿತ್ತು ಗೊತ್ತಾ? ರೋಚಕ ಬೇಟೆ

ಬೆಂಗಳೂರಿನ ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾಕುಮಾರಿ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪತಿ ಧೀರಜ್ ಕುಮಾರ್, ರೀಮಾಳನ್ನು ಕೊಲೆ ಮಾಡಿದ್ದು, ಬಿಹಾರದಲ್ಲಿ ಬಂಧಿಸಲಾಗಿದೆ. ರೀಲ್ಸ್ ಗೀಳು, ದಾಂಪತ್ಯ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಲೈಂಗಿಕ ಕ್ರಿಯೆಗೆ ನಿರಾಕರಣೆ ಹಾಗೂ ಬಿಹಾರಕ್ಕೆ ಹಿಂದಿರುಗುವ ಹಠ ಕೊಲೆಗೆ ಕಾರಣವೆಂದು ತನಿಖೆಯಿಂದ ಬಹಿರಂಗವಾಗಿದೆ.

ಊರು, ಊಟದ ವಿಚಾರಕ್ಕೆ ಪತ್ನಿ ಕೊಲೆ: 7 ದಿನಗಳ ಕಾರ್ಯಾಚರಣೆ ನಂತರ ಬಿಹಾರ-ನೇಪಾಳ ಗಡಿಯಲ್ಲಿ ಹಂತಕ ಬಂಧನ, ಹೇಗಿತ್ತು ಗೊತ್ತಾ? ರೋಚಕ ಬೇಟೆ
ಬೆಂಗಳೂರು ಕೊಲೆ ಪ್ರಕರಣ
Edited By:

Updated on: Aug 07, 2026 | 11:03 AM

ಬೆಂಗಳೂರು, ಆ.7: ರಾಜ್ಯ ರಾಜಧಾನಿಯ ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ನಡೆದಿದ್ದ ಬಿಹಾರ ಮೂಲದ ಯುವತಿ ರೀಮಾ ಕುಮಾರಿ (24) ಹತ್ಯೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಕುಂಬಳಗೋಡು ಪೊಲೀಸರು, 2,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿ ನಕ್ಸಲ್ ಪೀಡಿತ ಪ್ರಭಾವಿ ವಲಯ ಹಾಗೂ ನೇಪಾಳ-ಬಿಹಾರ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಪತಿ ಧೀರಜ್ ಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಜುಲೈ 29ರಂದು ಕುಂಬಳಗೋಡು ಠಾಣಾ ವ್ಯಾಪ್ತಿಯ ಗೇರುಪಾಳ್ಯದ ಕಟ್ಟಡವೊಂದರ ಮನೆಯಿಂದ ತೀವ್ರ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ರೀಮಾ ಕುಮಾರಿ ಶವ ಪತ್ತೆಯಾಗಿತ್ತು. ಆದರೆ, ಆಕೆಯ ಪತಿ ಧೀರಜ್ ಕುಮಾರ್ ನಾಪತ್ತೆಯಾಗಿದ್ದ.

ನಗರದಲ್ಲಿ ದಂಪತಿಯ ಸಂಬಂಧಿಕರು ಯಾರೂ ಇಲ್ಲದಿದ್ದುದು ಹಾಗೂ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದುದು ತನಿಖಾ ತಂಡಕ್ಕೆ ಸಾಲು ಸಾಲು ಸವಾಲುಗಳನ್ನು ತಂದೊಡ್ಡಿತ್ತು. 6 ಜನರಿದ್ದ ಕುಂಬಳಗೋಡು ಪೊಲೀಸರ ವಿಶೇಷ ತಂಡ ತಕ್ಷಣವೇ ಬಿಹಾರಕ್ಕೆ ರವಾನೆಯಾಯಿತು. ಬಿಹಾರದ ಮಧುಬನಿ (ಮಧುಶೀರ್) ಜಿಲ್ಲೆಯ ಹಳ್ಳಿಯೊಂದರಲ್ಲಿದ್ದ ರೀಮಾ ಕುಮಾರಿ ಪೋಷಕರನ್ನು ಹುಡುಕಿ ವಿಚಾರ ಮುಟ್ಟಿಸಿದರು. ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ವರ್ಷದ ಹಿಂದೆಯೇ ಬಿಹಾರದಲ್ಲಿ ದೂರು ನೀಡಿದ್ದು ಬೆಳಕಿಗೆ ಬಂತು. ಆದರೆ ಇದರ ಬಗ್ಗೆ ಅಲ್ಲಿನ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ನಾಪತ್ತೆ ಬಗ್ಗೆ ಕೇಸ್ ಕೂಡ ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದರು.

ಬೆಂಗಳೂರಿಗೆ ಬಂದ ರೀಮಾ ಪೋಷಕರು ಮಗಳ ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗದೆ ಇಲ್ಲೇ ದಫನ್ ಮಾಡಿದರು. ನಾಪತ್ತೆಯಾಗಿದ್ದ ಆರೋಪಿ ಧೀರಜ್ ಪತ್ತೆಗೆ ಸ್ಥಳೀಯ ಪೊಲೀಸರ ನೆರವಿನಿಂದ ನಕ್ಸಲ್ ಪ್ರಭಾವಿತ ಈಸ್ಟ್ ಚಂಪಾರಣ್ ಜಿಲ್ಲೆಯ ಊರೂರು ಅಲೆದ ತನಿಖಾ ತಂಡ, ಸತತ 7 ದಿನಗಳ ಕಾರ್ಯಾಚರಣೆ ಬಳಿಕ ನೇಪಾಳ-ಬಿಹಾರ ಗಡಿಯ ಹಳ್ಳಿಯೊಂದರಲ್ಲಿ ಧೀರಜ್‌ನನ್ನು ಖೆಡ್ಡಾಕ್ಕೆ ಕೆಡವಿತು.

ಇದನ್ನೂ ಓದಿ: ಕಲಾಸಿಪಾಳ್ಯ ಗ್ಯಾಂಗ್‌ವಾರ್ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕಾರಣ ಬಯಲು

ಪ್ರೇಮ ವಿವಾಹದ ಕಹಿಯಂತಾದ ಅಂತ್ಯ:

ವಿಚಾರಣೆ ವೇಳೆ ದಂಪತಿ 10 ತಿಂಗಳ ಹಿಂದೆ ಪೋಷಕರಿಗೆ ತಿಳಿಸದೆ ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರೆಂದು ತಿಳಿದುಬಂದಿದೆ. ಆದರೆ ಇತ್ತೀಚೆಗೆ ರೀಮಾಗೆ ಊರಿಗೆ ಮರಳುವ ಆಸೆಯಾಗಿ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಜೊತೆಗೆ ದಾಂಪತ್ಯದ ಲೈಂಗಿಕ ವಿಚಾರ ಹಾಗೂ ಅಡುಗೆ ಮಾಡುವ ವಿಚಾರದಲ್ಲೂ ಭಿನ್ನಾಭಿಪ್ರಾಯವಿತ್ತು.

ಜುಲೈ 27ರಂದು ಅಡುಗೆ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ರೀಮಾ ಪತಿಗೆ ಹೊಡೆದಿದ್ದಳು. ಇದರಿಂದ ತೀವ್ರ ಕೋಪಗೊಂಡ ಧೀರಜ್, ಪತ್ನಿಯ ದುಪಟ್ಟಾದಿಂದ (ವೇಲ್) ಕುತ್ತಿಗೆ ಹಿಸುಕಿ ಕೊಲೆ ಮಾಡಿ ಬಿಹಾರಕ್ಕೆ ಪರಾರಿಯಾಗಿದ್ದ. ಬಂಧಿತ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Fri, 7 August 26

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us