ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್: EVM ಬದಲು ಮತಪೆಟ್ಟಿಗೆ ಬಳಕೆಗೆ ಸಂಪುಟ ತೀರ್ಮಾನ
ಅವಧಿ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ತಡವಾಗುತ್ತಿದೆ ಎಂದು ಕರ್ನಾಟಕ ಚುನಾವಣೆ ಆಯೋಗವು ಹೈಕೋರ್ಟ್ ಮೊರೆ ಹೋಗಿದೆ. ಇದಕ್ಕೆ ಹೈಕೋರ್ಟ್ ಸಹ ಚುನಾವಣೆ ನಡೆಸಲು ಅನುವಾಗುವಂತೆ ಮೀಸಲು ನಿಗದಿ ಪ್ರಕ್ರಿಯೆಗೆ ವೇಗ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ಪಂಚಾಯಿತಿ ಚುನಾವಣೆ ನಡೆಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಮಂಗಳೂರು, (ಸೆಪ್ಟೆಂಬರ್ 18): ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ಹಲವು ಮಹತ್ವ್ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿಗೆ ಬಂಪರ್ ಘೋಷಣೆ ಮಾಡಿದೆ. ಇದರ ಮಧ್ಯೆ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆಗೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೌದು…ಇದೇ ಡಿಸೆಂಬರ್ ಒಳಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಾ ಜಿ. ಪರಮೇಶ್ವರ್, ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಅವಧಿ ಪೂರ್ಣಗೊಂಡಿದ್ದು, ಡಿಸೆಂಬರ್ ಒಳಗೆ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಚುನಾವಣೆ ನಡೆಸಲು EVM ಬದಲಿಗೆ ಮತಪೆಟ್ಟಿಗೆ ಬಳಕೆಗೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅದ್ದರಿಂದ ಚುನಾವಣೆ ನಡೆಸಲು ಅಗತ್ಯ ಮತಪೆಟ್ಟಿಗೆ ಖರೀದಿ ಮತ್ತು Live webcasting ಮಾಡಲು 151.31 ಕೋಟಿ ರೂ. ವೆಚ್ಚಕ್ಕೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕರಾವಳಿ ಅಭಿವೃದ್ಧಿಗೆ ಬಂಪರ್ ಗಿಫ್ಟ್: 32,611 ಕೋಟಿ ರೂ ಯೋಜನೆಗಳಿಗೆ ಸಂಪುಟ ಅಸ್ತು
ಇನ್ನೊಂದೆಡೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮೊನ್ನೆ ಅಷ್ಟೇ ಪಕ್ಷದ ಎಲ್ಲ ಹೊಸ ಜಿಲ್ಲಾಧ್ಯಕ್ಷರುಗಳ ಸಭೆ ನಡೆಸಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುಂತೆ ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಹೊಸದಾಗಿ ನೇಮಕಗೊಂಡಿರುವ ಎಲ್ಲ ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಭಾಗಿಯಾಗಿದ್ದರು. ಈ ವೇಳೆ ಪಕ್ಷ ಸಂಘಟನೆ ಬಗ್ಗೆ ಖಡಕ್ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚೆಗಳು ನಡೆದವು. ಈ ವರ್ಷದ ಅಂತ್ಯದೊಳಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳು ನಡೆಯಲಿದ್ದು, ಈ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸಲು ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬೇಕು, ಅಭ್ಯರ್ಥಿಗಳ ಗುರುತಿಸುವಿಕೆ, ಚುನಾವಣಾ ಪ್ರಚಾರ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆಯೂ ಕಾಂಗ್ರೆಸ್ ನಾಯಕರು ಜಿಲ್ಲಾಧ್ಯಕ್ಷರುಗಳೊಂದಿಗೆ ಚರ್ಚಿಸಿ, ಮಾರ್ಗದರ್ಶನ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Fri, 18 September 26




