
ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ನಡೆದ ಭೀಕರ ಹಿಟ್-ಅಂಡ್-ರನ್ ಘಟನೆಯಲ್ಲಿ 25 ವರ್ಷದ ಯುವ ಬಾಣಸಿಗರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ರೋಡ್ ರೇಜ್ ಹಿನ್ನೆಲೆಯಲ್ಲಿ ಕಾರಿನ ಚಕ್ರದ ಕೆಳಗೆ ಸಿಲುಕಿದ ಯುವಕನನ್ನು ಸುಮಾರು 150 ಮೀಟರ್‌ಗಳಷ್ಟು ದೂರ ಎಳೆದಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತೀವ್ರ ತನಿಖೆ ಮುಂದುವರಿಸಿದ್ದಾರೆ.
ರಂಜಿತ್ ಕುಮಾರ್ ಸಾಹು ಮೃತ ದುರ್ದೈವಿ. ಈತ ಬಿಟಿಎಂ ಲೇಔಟ್‌ನ ಪಿಜಿ ಒಂದರಲ್ಲಿ ಕುಕ್ ಕೆಲಸ ಮಾಡುತ್ತಿದ್ದರು. ದಸರಾ ಹಬ್ಬದ ಸಂಭ್ರಮಾಚರಣೆಗಾಗಿ ಸ್ನೇಹಿತರನ್ನು ಭೇಟಿಯಾಗಲು ಇವರು ಎಲೆಕ್ಟ್ರಾನಿಕ್ಸ್ ಸಿಟಿಗೆ ತೆರಳಿದ್ದರು. ಅಕ್ಟೋಬರ್ 21ರಂದು ನಡುರಾತ್ರಿ 1:50ರ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಅವರ ಸ್ನೇಹಿತರ ಬಳಿ ಆಪಾಯಕಾರಿ ರೀತಿಯಲ್ಲಿ ಸಾಗಿದೆ.
ಇದನ್ನು ಪ್ರಶ್ನಿಸಿ ಸನ್ನೆ ಮಾಡಿದ ಕಾರಣಕ್ಕೆ ಕಾರಿನಲ್ಲಿದ್ದವರು ವಾಹನವನ್ನು ತಿರುಗಿಸಿ ಬಂದು ಜಗಳವಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾತಿನ ಚಕಮಕಿ ಹಾಗೂ ಹಲ್ಲೆ ನಡೆದಿದೆ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ, ಅವರ ಕಾರಿನ ಮುಂದಿದ್ದ ರಂಜಿತ್ ಕುಮಾರ್ ವಾಹನದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಗಳಾದ ಅಜಯ್ ರಬಿದಾಸ್, ಸಜಲ್ ನಮಾಶೂದ್ರ ಹಾಗೂ ಬಿಜೋನ್ ರಾಯ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳು ಸ್ಪಷ್ಟವಾಗಿ ಸಿಗದಿದ್ದರೂ, ಸ್ಥಳೀಯ ಪಾದಚಾರಿ ಅಂಗಡಿ ಮಾಲೀಕರ ಹಾಗೂ ತಾಂತ್ರಿಕ ನೆರವಿನ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಕಾರಿನ ಮಾಲೀಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Tue, 27 October 26