ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ, ದರ ಏರಿಕೆ ಸಂಕಷ್ಟಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಹೋಟೆಲ್ ಮಾಲೀಕರು ‘ಬಯೋಗ್ಯಾಸ್’ ಮೊರೆ ಹೋಗಿದ್ದಾರೆ. ಹೋಟೆಲ್ ಕಸವನ್ನು ಕಂಪನಿಗಳಿಗೆ ನೀಡಿ ಅದಕ್ಕೆ ಪ್ರತಿಯಾಗಿ ಗ್ಯಾಸ್ ಪಡೆಯುವ ಹೊಸ ‘ಕಸದಿಂದ ರಸ’ ಯೋಜನೆಗೆ ರಾಜಧಾನಿಯಲ್ಲಿ ಚಾಲನೆ ಸಿಗುತ್ತಿದೆ. ಇದು ವಾಣಿಜ್ಯ ಎಲ್​ಪಿಜಿ ಸಿಲಿಂಡ್​ಗೆ ಪರ್ಯಾಯವಾದರೆ ಹೋಟೆಲ್​ಗಳ ಸಮಸ್ಯೆ ಬಗೆಹರಿಯಲಿದೆ.

ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Apr 16, 2026 | 11:23 AM

ಬೆಂಗಳೂರು, ಏಪ್ರಿಲ್ 16: ಜಾಗತಿಕ ಯುದ್ಧದ ಸನ್ನಿವೇಶ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಲಭ್ಯತೆ, ದರ ಅನಿಶ್ಚಿತತೆಯಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಮಾಲೀಕರು ಈಗ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸಂಪೂರ್ಣವಾಗಿ ಎಲ್‌ಪಿಜಿ ಗ್ಯಾಸ್ ಅವಲಂಬನೆಯನ್ನು ಕೈಬಿಟ್ಟು, ‘ಕಸದಿಂದ ರಸ’ ಎಂಬ ಪರಿಕಲ್ಪನೆಯಡಿ ಬಯೋಗ್ಯಾಸ್ (Bio-Gas) ಬಳಕೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನ ಅನೇಕ ಹೋಟೆಲ್ ಮಾಲೀಕರು ಆ ನಿಟ್ಟಿನಲ್ಲಿ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.

ಕಸ ನೀಡಿ ಗ್ಯಾಸ್ ಪಡೆಯುವ ಯೋಜನೆ

ಬೆಂಗಳೂರಿನ ಹೋಟೆಲ್‌ಗಳಿಂದ ಪ್ರತಿದಿನ ಟನ್ ಗಟ್ಟಲೆ ಹಸಿ ಕಸ ಉತ್ಪತ್ತಿಯಾಗುತ್ತದೆ. ಈ ಕಸವನ್ನು ಎಲ್ಲೋ ಸುರಿಯುವ ಬದಲು ಅಥವಾ ಡಂಪಿಂಗ್ ಯಾರ್ಡ್‌ಗಳಿಗೆ ನೀಡುವ ಬದಲು, ಬಯೋಗ್ಯಾಸ್ ಉತ್ಪಾದನಾ ಕಂಪನಿಗಳಿಗೆ ನೀಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ತಾವು ನೀಡುವ ಕಸಕ್ಕೆ ಪ್ರತಿಯಾಗಿ ಆ ಕಂಪನಿಗಳು ಉತ್ಪಾದಿಸುವ ಬಯೋಗ್ಯಾಸ್ ಸಿಲಿಂಡರ್ ಅಥವಾ ಪಿಎನ್‌ಜಿ (PNG) ಸಂಪರ್ಕವನ್ನು ಪಡೆಯುವ ಒಪ್ಪಂದಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಮಾಲೀಕರ ಸಂಘದ ಚರ್ಚೆ

ಈಗಾಗಲೇ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಬಯೋಗ್ಯಾಸ್ ತಯಾರಿಕಾ ಘಟಕಗಳ ಸ್ಥಾಪನೆ ಮತ್ತು ಕೆಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆಸಿದೆ. ಎಲ್‌ಪಿಜಿ ಸಮಸ್ಯೆ ಉಲ್ಬಣಿಸಿರುವುದರಿಂದ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಈ ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಹೊಸ ಪ್ಲಾನ್ ರೂಪಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಹೋಟೆಲ್‌ಗಳು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಕನೆಕ್ಷನ್ ಪಡೆಯಲು ಸಹ ಆಸಕ್ತಿ ತೋರಿವೆ.

ಜಾಗತಿಕ ಯುದ್ಧದ ಸನ್ನಿವೇಶಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿವೆ. ಭಾರತವು ಅಡುಗೆ ಅನಿಲದ ಅವಶ್ಯಕತೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದನ್ನು ಅವಲಂಬಿಸಿರುವುದರಿಂದ, ಅಂತರಾಷ್ಟ್ರೀಯ ದರ ಏರಿಕೆಯು ನೇರವಾಗಿ ಬೆಂಗಳೂರಿನ ವಾಣಿಜ್ಯ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ಮತ್ತೊಂದೆಡೆ, ಕಳೆದ ಕೆಲವು ವರ್ಷಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಅಸ್ಥಿರವಾಗಿದ್ದು, ಆಗಾಗ್ಗೆ ಏರಿಕೆಯಾಗುತ್ತಿರುವುದು ಹೋಟೆಲ್ ಮಾಲೀಕರ ಲಾಭಾಂಶವನ್ನು ಕಸಿದುಕೊಳ್ಳುತ್ತಿದೆ. ಪೂರೈಕೆ ಸರಪಳಿಯಲ್ಲಿನ ವ್ಯತ್ಯಯದಿಂದಾಗಿ ಸಕಾಲಕ್ಕೆ ಸಿಲಿಂಡರ್ ಲಭ್ಯವಾಗದಂತಾಗಿ ಹೋಟೆಲ್‌ಗಳ ದೈನಂದಿನ ಕಾರ್ಯಚಟುವಟಿಕೆಗೂ ಅಡ್ಡಿಯುಂಟುಮಾಡಿದೆ.

ಇದನ್ನೂ ಓದಿ: ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೋಟೆಲ್‌ಗಳು ದಿನದ 15-18 ಗಂಟೆಗಳ ಕಾಲ ಸತತವಾಗಿ ಇಂಧನ ಬಳಸುವುದರಿಂದ, ಎಲ್‌ಪಿಜಿ ಮೇಲಿನ ಅವಲಂಬನೆಯು ವೆಚ್ಚದಾಯಕವಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಹೋಟೆಲ್ ಮಾಲೀಕರು ಪರ್ಯಾಯ ಇಂಧನದ ಹುಡುಕಾಟದಲ್ಲಿದ್ದರು. ಇದೀಗ ಬಯೋಗ್ಯಾಸ್ ಮತ್ತು ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬಳಕೆಯಿಂದ ಇಂಧನ ವೆಚ್ಚವನ್ನು ಶೇ 20 ರಿಂದ 30 ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ನಗರದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹಸಿ ಕಸದ ವಿಲೇವಾರಿಗೆ ಹೋಟೆಲ್‌ಗಳೇ ಹಣ ನೀಡುವ ಬದಲು, ಅದೇ ಕಸದಿಂದ ಇಂಧನ ಪಡೆಯುವುದು ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಭಾವಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vinay Kashappanavar
Follow Us