ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ನಂದಿನಿ ಬೂತ್! 79 ಕಡೆ ನಂದಿನಿ ಔಟ್‌ಲೆಟ್‌ಗಳಿಗೆ ಜಾಗ ನೀಡಲು ಮುಂದಾದ ಜಿಬಿಎ

ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು ಸ್ಥಾಪಿಸಲು ಜಿಬಿಎ ಪ್ರಸ್ತಾವನೆ ರೂಪಿಸಿದೆ. ಆಯ್ದ ಸ್ಥಳಗಳಲ್ಲಿ 100 ಚದರ ಅಡಿ ಜಾಗವನ್ನು ಬಮುಲ್​​ಗೆ ಐದು ವರ್ಷಗಳ ಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ. ಆದರೆ, ಇದರಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ಜಾಗ ಕಡಿಮೆಯಾಗುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ನಂದಿನಿ ಬೂತ್! 79 ಕಡೆ ನಂದಿನಿ ಔಟ್‌ಲೆಟ್‌ಗಳಿಗೆ ಜಾಗ ನೀಡಲು ಮುಂದಾದ ಜಿಬಿಎ
ಸಾಂದರ್ಭಿಕ ಚಿತ್ರ
Image Credit source: tv9

Updated on: Sep 17, 2026 | 8:28 AM

ಮುಖ್ಯಾಂಶಗಳು

  • 79 ಇಂದಿರಾ ಕ್ಯಾಂಟೀನ್‌ಗಳಲ್ಲಿ ನಂದಿನಿ ಔಟ್‌ಲೆಟ್‌
  • 100 ಚದರ ಅಡಿ ಜಾಗಕ್ಕೆ ಗುತ್ತಿಗೆ ಪ್ರಸ್ತಾವನೆ
  • ಐದು ವರ್ಷಗಳ ಗುತ್ತಿಗೆಗೆ ಪಾಲಿಕೆಗಳ ಸಿದ್ಧತೆ

ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರಿನಾದ್ಯಂತ ಇರುವ ಇಂದಿರಾ ಕ್ಯಾಂಟೀನ್‌ಗಳ ಪೈಲಿ ಕೆಲವರ ಆವರಣಗಳಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಿದ್ಧವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಆಯ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಮಾರು 100 ಚದರ ಅಡಿ ಜಾಗವನ್ನು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತಕ್ಕೆ (ಬಮುಲ್) ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಮುಂದಾಗಿದೆ. ನಗರದ ಐದು ಪಾಲಿಕೆಗಳು ಒಟ್ಟು 79 ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ 10×10 ಅಡಿ ಜಾಗವನ್ನು ನಂದಿನಿ ಔಟ್‌ಲೆಟ್‌ಗಳಿಗೆ ನೀಡಲು ಗುರುತಿಸಿವೆ. ಇದರ ಜೊತೆಗೆ, ಬಮುಲ್ ಮನವಿಯ ಮೇರೆಗೆ ನಗರದಾದ್ಯಂತ 114 ಖಾಲಿ ನಿವೇಶನಗಳನ್ನೂ ಗುರುತಿಸಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಇತ್ತೀಚೆಗೆ ಜನರ ಭೇಟಿ ಕಡಿಮೆಯಾಗಿರುವುದು ಈ ಪ್ರಸ್ತಾವನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕ್ಯಾಂಟೀನ್‌ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ವೈವಿಧ್ಯತೆ ಕಡಿಮೆಯಾಗಿರುವುದು ಗ್ರಾಹಕರ ಸಂಖ್ಯೆ ಇಳಿಕೆಗೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಮುಲ್ ಬೂತ್​ಗೆ ಜಾಗ ನೀಡಿ ಮಾಸಿಕ ಬಾಡಿಗೆ: ಜಿಬಿಎಗೆ ಹೊಸ ಆದಾಯಕ್ಕೆ ಮೂಲ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ಇಂದಿರಾ ಕ್ಯಾಂಟೀನ್‌ಗಳ ಆವರಣಗಳನ್ನು ಹಾಗೂ ಎರಡು ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಕಬ್ಬನ್ ಪಾರ್ಕ್ ಸಮೀಪದ ಒಂದು ಸ್ಥಳ ಮತ್ತು ಬಾಳೇಕುಂದ್ರಿ ಸರ್ಕಲ್ ಬಳಿಯ ಮತ್ತೊಂದು ಸ್ಥಳವೂ ಈ ಪಟ್ಟಿಯಲ್ಲಿವೆ. ಜಾಗದ ಸ್ಥಳಾನುಸಾರ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ಅಶೋಕನಗರದ ಇಂದಿರಾ ಕ್ಯಾಂಟೀನ್‌ನಲ್ಲಿ 100 ಚದರ ಅಡಿ ಜಾಗಕ್ಕೆ ತಿಂಗಳಿಗೆ ₹1,965 ಬಾಡಿಗೆ ನಿಗದಿಪಡಿಸುವ ಪ್ರಸ್ತಾವನೆ ಇದೆ. ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪದ ಜಾಗಕ್ಕೆ ಇದೇ ವಿಸ್ತೀರ್ಣಕ್ಕೆ ₹7,031 ಮಾಸಿಕ ಬಾಡಿಗೆ ನಿಗದಿಪಡಿಸಲು ಉದ್ದೇಶಿಸಲಾಗಿದೆ ಎಂದು ಜಿಬಿಎ ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಇಂದಿರಾ ಕ್ಯಾಂಟೀನ್​ಗಳಲ್ಲಿ ಊಟದ ಜಾಗ ಕೊರತೆಯ ಆತಂಕ

ನಂದಿನಿಯ ಹಾಲು ಹಾಗೂ ಇತರ ಹಾಲಿನ ಉತ್ಪನ್ನಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಸಾಧ್ಯತೆ ಇದ್ದರೂ, ಈ ಕ್ರಮದಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಲಭ್ಯವಿರುವ ಜಾಗ ಕಡಿಮೆಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಬಳಸುತ್ತಿರುವುದರಿಂದ, ಅವರ ಊಟದ ವ್ಯವಸ್ಥೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಆರಂಭದಲ್ಲಿ ಬಮುಲ್​ಗೆ 15 ವರ್ಷಗಳ ಗುತ್ತಿಗೆ ನೀಡಲು ಪಾಲಿಕೆಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ನಗರಾಭಿವೃದ್ಧಿ ಇಲಾಖೆ ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಬಿಬಿಎಂಪಿ ಆಸ್ತಿ ನಿರ್ವಹಣಾ ನಿಯಮಗಳು-2024ರ ಪ್ರಕಾರ ಗುತ್ತಿಗೆ ಅವಧಿ ಗರಿಷ್ಠ ಐದು ವರ್ಷಗಳಷ್ಟೇ ಇರಬೇಕು ಎಂದು ಸೂಚಿಸಿದೆ.

ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ನಂದಿನಿ ಮಳಿಗೆಗಳನ್ನು ಸ್ಥಾಪಿಸುವ ಪ್ರಸ್ತಾವನೆ 2025ರ ಜುಲೈನಲ್ಲೇ ವ್ಯಕ್ತವಾಗಿತ್ತು. ಆಗಿನ ಉಪಮುಖ್ಯಮಂತ್ರಿ. ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ನಂದಿನಿ ಔಟ್‌ಲೆಟ್‌ಗಳನ್ನು ಸ್ಥಾಪಿಸುವ ಕುರಿತು ಸಲಹೆ ನೀಡಿದ್ದರು. ಬಳಿಕ ಬಮುಲ್​​ ಗುರುತಿಸಿದ್ದ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿ, ಲಭ್ಯವಿರುವ ಜಾಗದ ಅಳತೆ ಹಾಗೂ ಸೈಟ್‌ ಮ್ಯಾಪ್‌ಗಳನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ಹೆಬ್ಬಾಳ ಸಮೀಪ ನಂದಿನಿ ಟ್ಯಾಂಕರ್ ಪಲ್ಟಿ: ರಸ್ತೆ ಪಾಲಾದ 14 ಸಾವಿರ ಲೀಟರ್ ಹಾಲು

ಪ್ರತಿ ಆಸ್ತಿಯ ಮಾರ್ಗದರ್ಶಿ ಮೌಲ್ಯದ ಆಧಾರದ ಮೇಲೆ ಬಾಡಿಗೆಯನ್ನು ಲೆಕ್ಕ ಹಾಕಲಾಗಿದೆ. ಇದೀಗ ಗುರುತಿಸಲಾದ ಸ್ಥಳಗಳಲ್ಲಿ ನಂದಿನಿ ಔಟ್‌ಲೆಟ್‌ಗಳ ಹಂಚಿಕೆ ಕುರಿತು ಬಮುಲ್​ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಸಾರ್ವಜನಿಕ ಸ್ಥಳಗಳನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಪ್ರಸ್ತಾವನೆ ರೂಪಿಸಲಾಗಿದೆ ಎಂದು ಜಿಬಿಎ ಅಧಿಕಾರಿಯೊಬ್ಬರು ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us